ಮೌಢ್ಯ ಆಚರಣೆ ಬಿಟ್ಟು ಮುಖ್ಯವಾಹಿನಿಗೆ ಬನ್ನಿ

732

Get real time updates directly on you device, subscribe now.


ತುಮಕೂರು: ಕಾಲ ಬದಲಾದಂತೆ ಕೆಲವು ಅಮಾನವೀಯ ಮತ್ತು ಮೌಢ್ಯ ಆಚರಣೆಗಳನ್ನು ಕೈಬಿಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತೆರೆದುಕೊಳ್ಳುವಂತೆ ಲೇಖಕಿ ಬಾ.ಹ.ರಮಾಕುಮಾರಿ ಕರೆ ನೀಡಿದರು.

ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ತಂಬುಗಾನಹಟ್ಟಿಯಲ್ಲಿ ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ತುಮಕೂರು ವಿವಿ ಕಲಾ ಕಾಲೇಜು ಸ್ನಾತಕ ಸಮಾಜ ಕಾರ್ಯ ವಿಭಾಗ, ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಹಟ್ಟಿಗಳಲ್ಲಿ ಆರೋಗ್ಯದ ಅರಿವು, ಸ್ವಚ್ಛತೆ ಹಾಗೂ ಮೌಢ್ಯ ವಿರೋಧಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಮತ್ತು ದೇಹಕ್ಕೆ ಹಾನಿಯಾಗದಂತಹ ಸಾಂಸ್ಕೃತಿಕ ಆಚರಣೆಗಳಿಗೆ ಯಾರ ವಿರೋಧವೂ ಇಲ್ಲ, ಆದರೆ ಅಮಾನವೀಯ ಆಚರಣೆಗಳನ್ನು ಈ ಆಧುನಿಕ ಕಾಲಘಟ್ಟದಲ್ಲಿಯೂ ಮುಂದುವರೆಸಿಕೊಂಡು ಹೋಗುವುದು ಒಳಿತಲ್ಲ, ಇದು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದರು.

ಸಮಾಜದಲ್ಲಿ ಮುಂದುವರಿದ ಸಮುದಾಯಗಳು ಎಲ್ಲಾ ವಿಧದಲ್ಲಿಯೂ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿವೆ. ಕಾಲಕ್ಕೆ ತಕ್ಕಂತೆ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ ಬುಡಕಟ್ಟು ಸಮುದಾಯದವರು ಕೆಲವು ಆಚರಣೆಗಳಲ್ಲಿ ಬಂಧಿಯಾಗಿದ್ದು, ಆರ್ಥಿಕವಾಗಿಯೂ ಸಬಲರಾಗಲು ಸಾಧ್ಯವಾಗುತ್ತಿಲ್ಲ. ಇಂದಿಗೂ ಸಹ ಗುಡಿಸಲುಗಳಲ್ಲೇ ವಾಸ ಮಾಡುತ್ತಿರುವುದನ್ನು ನೋಡಿದರೆ ನಾವಿನ್ನು ಯಾವ ಕಾಲದಲ್ಲಿದ್ದೇವೆ ಎಂದು ಪ್ರಶ್ನಿಸಬೇಕಾಗುತ್ತದೆ, ಹೆಚ್ಚು ಶಿಕ್ಷಣವಂತರಾಗಿ ಸಮಾಜದ ಇತರೆಯವರನ್ನು ನೋಡಿ ಬದಲಾವಣೆಗೆ ಒಗ್ಗಿಕೊಂಡಾಗ ಮಾತ್ರ ಅವರಂತೆ ನಾವೂ ಸಹ ಅಭಿವೃದ್ಧಿಯಾಗಬೇಕು ಎಂಬ ಛಲ ಬರುತ್ತದೆ. ಇಲ್ಲದೆ ಹೋದರೆ ಇನ್ನೂ ಹತ್ತಾರು ವರ್ಷಗಳು ಕಳೆದರೂ ಇದೇ ಪರಿಸ್ಥಿತಿಯಲ್ಲಿ ಬದುಕು ಸಾಗಿಸಬೇಕಾಗುತ್ತದೆ. ಮುಟ್ಟಾದ ಮಹಿಳೆಯರನ್ನು ಹೊರಗೆ ಇಡುವ ಸಂಸ್ಕೃತಿಯನ್ನು ನಾವೆಲ್ಲ ವಿರೋಧಿಸಬೇಕಾಗಿದೆ. ಆಕೆಯೂ ಮಹಿಳೆ ಎಂಬುದನ್ನು ಮನಗಾಣಬೇಕಿದೆ ಎಂದರು.

ತುಮಕೂರು ಪಾವನ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪಾವನ ಮಾತನಾಡಿ, ಗರ್ಭಿಣಿಯರು, ಬಾಣಂತಿಯರನ್ನು ವಿಶೇಷ ಆರೈಕೆಯೊಂದಿಗೆ ಕಾಪಾಡಿಕೊಳ್ಳಬೇಕು, ಮುಟ್ಟಾದ ಸಂದರ್ಭದಲ್ಲಿ ಅವರಿಗೆ ಯಾವ ಆಹಾರ ಕೊಡಬೇಕು ಎಂಬುದನ್ನು ತಿಳಿಯಬೇಕು, ಬಹಳಷ್ಟು ಕಡೆಗಳಲ್ಲಿ ಇದು ಗೊತ್ತಿಲ್ಲದೆ ರಕ್ತಹೀನತೆ ಉಂಟಾಗುತ್ತದೆ. ಮಹಿಳೆಯರ ಎಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಈ ರಕ್ತಹೀನತೆಯೇ ಕಾರಣ ಎಂದು ಎಚ್ಚರಿಸಿದರು.

ಕಾರ್ಬೋಹೈಡ್ರೇಡ್, ಪ್ರೊಟೀನ್, ಮಿನರಲ್ಸ್, ವಿಟಮಿನ್ ಇರುವ ಸಮತೋಲನ ಆಹಾರ ನೀಡಬೇಕು. ಇದಕ್ಕಾಗಿ ಹೆಚ್ಚು ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ತರಕಾರಿ, ಸೊಪ್ಪು, ಹಣ್ಣುಗಳೇ ಸಾಕು, ಆದರೆ ಸ್ಥಳೀಯವಾಗಿ ಸಿಗುವ ಇವೆಲ್ಲವನ್ನೂ ನಿರ್ಲಕ್ಷಿಸಿ ಕಾಯಿಲೆ ತಂದುಕೊಳ್ಳುತ್ತಿದ್ದೇವೆ. ಪೌಷ್ಠಿಕಾಂಶದ ಕೊರತೆ ಉಂಟಾಗಿ ಮಹಿಳೆ ರಕ್ತಹೀನತೆಗೆ ಒಳಗಾಗುತ್ತಾಳೆ, ಬಳಲಿಕೆ ಹೆಚ್ಚುತ್ತದೆ, ಇದು ಮಕ್ಕಳಿಗೂ ಹಾನಿಯಾಗುತ್ತದೆ, ಪರಿಣಾಮವಾಗಿ ಸಣ್ಣ ಮಕ್ಕಳಲ್ಲೇ ಅನಾಹುತ ಸಂಭವಿಸುತ್ತವೆ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ, ವಕೀಲ ಸಾ.ಚಿ.ರಾಜಕುಮಾರ ಮಾತನಾಡಿ, ಕೆಲವು ಅಮಾನವೀಯ ಮತ್ತು ದುಷ್ಟ ಆಚರಣೆಗಳನ್ನು ತಡೆಗಟ್ಟುವ ಸಲುವಾಗಿಯೇ 2017ನೇ ಇಸವಿಯಲ್ಲಿ ಅಮಾನವೀಯ ಆಚರಣೆಗಳು ಮತ್ತು ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದಿದೆ, ಇದರ ಪ್ರಕಾರ ಮಹಿಳೆಯನ್ನು ಋತುಸ್ರಾವ, ಬಾಣಂತಿ ಸಂದರ್ಭದಲ್ಲಿ ಪ್ರತ್ಯೇಕವಾಗಿ ಗುಡಿಸಲಿನಲ್ಲಿ ಇರಿಸುವುದು ಅಪರಾಧವಾಗಿದೆ. ಒಂದು ವರ್ಷದಿಂದ 7 ವರ್ಷಗಳ ತನಕ ಶಿಕ್ಷೆ ವಿಧಿಸಲಾಗುತ್ತದೆ, ಆದಕಾರಣ ಇಂತಹ ಅಮಾನವೀಯ ಪದ್ಧತಿ ಕೈಬಿಡದೆ ಹೋದರೆ ಕಾನೂನಿನ ಅಸ್ತ್ರ ನಮ್ಮನ್ನು ಹುಡುಕಿಕೊಂಡು ಬರಲಿದೆ ಎಂದರು.

ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ ನ ಮುಖ್ಯಸ್ಥರು ಮತ್ತು ಜಾನಪದ ಕಲಾವಿದ ಮೋಹನ್ ಕುಮಾರ್, ಸಮಾಜಕಾರ್ಯ ಶಿಬಿರಾಧಿಕಾರಿ ಸಿದ್ದೇಶ್ವರ್ ಮತ್ತಿತರರು ಮಾತನಾಡಿದರು. ಹುಟ್ಟು-ಮುಟ್ಟು ಕುರಿತ ಮಹಿಳಾ ಜಾಗೃತಿ ಗೀತೆಗಳನ್ನು ತುಮಕೂರು ಸಾಂತ್ವನ ಕೇಂದ್ರದ ಪಾರ್ವತಮ್ಮ ರಾಜಕುಮಾರ, ಗಂಗಲಕ್ಷ್ಮಿ ಸಂಗಡಿಗರು ಪ್ರಸ್ತುತಪಡಿಸಿದರು. ಕನ್ನಡಪರ ಹೋರಾಟಗಾರ ಅರುಣ್ ಕೃಷ್ಣಯ್ಯ, ಹೋರಾಟಗಾರ್ತಿ ಬಿ.ಸಿ.ಪ್ರವೇಣಿ, ಉಪನ್ಯಾಸಕಿ ಹೇಮಾ ಮಲ್ಲಿಕಾರ್ಜುನ್, ಬರಹಗಾರ್ತಿ ಕಮಲಾ ರಾಜೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!