ಸಮಾಜಕ್ಕೆ ಸಿದ್ದರಾಮೇಶ್ವರರ ಕೊಡುಗೆ ಅಪಾರ

400

Get real time updates directly on you device, subscribe now.


ಗುಬ್ಬಿ: ಪುರಾತನ ಕಾಲದಲ್ಲೇ ಕುಡಿಯುವ ನೀರಿಗಾಗಿ ಕೆರೆ ಕಟ್ಟೆ ಕಟ್ಟಿಸಿ ಸಾಮಾಜಿಕ ಸೇವೆಗೆ ಮಾರ್ಗದರ್ಶಿಯಾದವರು ಸಿದ್ದರಾಮೇಶ್ವರರು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಗುಬ್ಬಿ ಹಾಗೂ ತಿಪಟೂರು ತಾಲೂಕಿನ ಗಡಿಭಾಗದ ಕಾರೇ ಕುರ್ಚಿ ಶ್ರೀ ಸಿದ್ದರಾಮೇಶ್ವರ ತಪೋವನದಲ್ಲಿ ಎರಡು ಕೋಟಿ ವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗದ ಸಿದ್ದರಾಮೇಶ್ವರರು ಎಲ್ಲಾ ಸಮುದಾಯಗಳಿಗೂ ಮಾರ್ಗದರ್ಶಕರಾಗಿದ್ದಾರೆ. ಸೊಲ್ಲಾಪುರ ಅವರ ಐಕ್ಯ ಸ್ಥಳವಾಗಿದ್ದರು ತುಮಕೂರು ಜಿಲ್ಲೆಯಲ್ಲಿ ಅವರ ಗದ್ದುಗೆಗಳು ಸಾಕಷ್ಟು ಇದ್ದು ದೊಣೆ ಗಂಗಾ ಕ್ಷೇತ್ರ ಅವುಗಳಲ್ಲಿ ಬಹಳ ವಿಶೇಷವಾಗಿ ತಲೆ ಕೆಳಗು ಮಾಡಿ ತಪಸ್ಸು ಮಾಡಿರುವ ಜಾಗವಾಗಿ ಕಂಡು ಬರುತ್ತದೆ, ಹಾಗಾಗಿ ಇಲ್ಲಿನ ಅಭಿವೃದ್ಧಿಗೆ ತಾವೆಲ್ಲರೂ ಕೂಡ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗೋಡೆಕೆರೆಯ ಮಠದ ಮೃತ್ಯುಂಜಯ ದೇಶೀಕೇಂದ್ರ ಕೇಂದ್ರ ಸ್ವಾಮೀಜಿ ಮಾತನಾಡಿ, ಗುಬ್ಬಿ ಚಿಕ್ಕನಾಯಕನಹಳ್ಳಿ, ತಿಪಟೂರು ಮೂರು ತಾಲೂಕಿಗೆ ಸೇರುವ ಪವಿತ್ರ ಧಾರ್ಮಿಕ ಸ್ಥಳವಾಗಿದ್ದು, ಈ ಕ್ಷೇತ್ರವು ಅಭಿವೃದ್ಧಿಯಾದರೆ ಮೂರು ತಾಲೂಕಿನ ಭಕ್ತರಿಗೆ ಅನುಕೂಲವಾಗುತ್ತದೆ. ರಸ್ತೆ ಕಾಮಗಾರಿ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸಿಕೊಟ್ಟಲ್ಲಿ ಈ ಪರಿಸರದ ಮಧ್ಯದಲ್ಲಿರುವ ತಪೋವನ ಉತ್ತಮ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಬೆಳವಣಿಗೆಯಾಗುತ್ತದೆ, ನಾನು ಮೂರು ತಿಂಗಳನಿಂದ ಇಲ್ಲಿ ಇದ್ದು ಕೆಲಸ ನಿರ್ವಹಣೆ ಮಾಡುತ್ತಿದ್ದು, ಇಲ್ಲಿನ ಭಕ್ತರು ಅತ್ಯಂತ ಹೆಚ್ಚು ಸಹಕಾರ ನೀಡಿ ಅಭಿವೃದ್ಧಿಗೆ ಸಹಕಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ, ಇದನ್ನು ಕೇವಲ ಧಾರ್ಮಿಕ ಕ್ಷೇತ್ರವಾಗಿ ನೋಡದೆ ಪ್ರವಾಸಿ ಕ್ಷೇತ್ರವನ್ನಾಗಿ ಮಾಡಿದಾಗ ಹೆಚ್ಚು ಆಕರ್ಷಣೆಯ ಕೇಂದ್ರವಾಗುತ್ತದೆ, ಹಾಗಾಗಿ ಪ್ರವಾಸೋದ್ಯಮ ಸಚಿವ ಎಂ.ಬಿ.ಪಾಟೀಲ್ ಅವರನ್ನು ಒಮ್ಮೆ ಇಲ್ಲಿಗೆ ಕರೆ ತಂದು ಬೇಕಾದ ಅಭಿವೃದ್ಧಿ ಕೆಲಸ ಮಾಡಲು ಬದ್ಧವಾಗಿದ್ದೇನೆ ಎಂದು ತಿಳಿಸಿದರು.

ಚಿಕ್ಕನಾಯಕನ ಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಬಾಬು, ಮಾತನಾಡಿ ಗಣಿ ಭಾಗದ ಪ್ರದೇಶವಾಗಿರುವುದರಿಂದ ಗಣಿ ಹಣದ ಅನುದಾನದಲ್ಲಿ ಮೂರು ವಿಧಾನಸಭಾ ಕ್ಷೇತ್ರದ ಶಾಸಕರು ಮಾತನಾಡಿ, ಇಲ್ಲಿಗೆ ಬೇಕಾದ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಒದಗಿಸಿಕೊಡುತ್ತೇವೆ, ಚಿಕ್ಕನಾಯಕನ ಹಳ್ಳಿ ಕ್ಷೇತ್ರದಲ್ಲಿ ಸಿದ್ದರಾಮೇಶ್ವರರ ಹಲವು ದೇವಾಲಯಗಳಿದ್ದು ಇದು ವಿಭಿನ್ನವಾಗಿ ಮೂರು ತಾಲೂಕಿಗೆ ಸೇರುವ ಪುಣ್ಯಕ್ಷೇತ್ರವಾಗಿದೆ ಎಂದು ಸಂತೋಷ ಪಟ್ಟರು.

ರಾಜ್ಯ ನೊಳಂಬ ಸಂಘದ ರಾಜ್ಯ ಅಧ್ಯಕ್ಷ ಎಸ್.ಆರ್.ಪಾಟೀಲ್ ಮಾತನಾಡಿ, ನೊಳಂಬ ಸಮಾಜವೂ ಆರ್ಥಿಕವಾಗಿ ಬಲಿಷ್ಠವಾಗಿದ್ದು ಇಲ್ಲಿ ಬಂದು ನೋಡಿದಾಗ ಪರಿಸರದ ನಡುವೆ ತಲೆಕೆಳಗಾಗಿ ತಪಸ್ಸು ಮಾಡಿರುವ ವಿಷಯ ತಿಳಿದು ಬಹಳ ವಿಶೇಷ ಎನಿಸಿದ್ದು ಸಂಘದ ವತಿಯಿಂದಲೂ ಸಹಕಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಾಪುರದ ಗುರು ಪರದೇಶಿಕೇಂದ್ರ ಮಹಾ ಸ್ವಾಮೀಜಿ, ಹಿಮ್ಮಡಿ ಕರಿಬಸವೇಶ್ವರ ಸ್ವಾಮೀಜಿ ಶಿವಶಂಕರ ಸ್ವಾಮೀಜಿ, ನೊಳಂಬ ರಾಜ್ಯ ಸಂಘದ ಉಪಾಧ್ಯಕ್ಷ ಸಾಗರನಹಳ್ಳಿ ನಟರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಮುಖಂಡರಾದ ಪ್ರಸನ್ನ ಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!