ಛಾಯಾಚಿತ್ರಗಳು ಇತಿಹಾಸ ತಿಳಿಸಲಿವೆ

ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ಸಿಇಒ ಹೇಳಿಕೆ

435

Get real time updates directly on you device, subscribe now.


ತುಮಕೂರು: ಛಾಯಾಚಿತ್ರಗಳು ಇತಿಹಾಸದ ಅನೇಕ ಘಟನೆಗಳ ಬಗ್ಗೆ ಸೂಚ್ಯ ಹಾಗೂ ಸ್ಪಷ್ಟ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿಯನ್ನು ಇಂದಿಗೂ ಹೊಂದಿದೆ. ಅನೇಕ ಐತಿಹಾಸಿಕ ಘಟನೆಗಳನ್ನು ಸಾಕ್ಷಿಕರಿಸುವುದಕ್ಕಾಗಿ ಛಾಯಾಗ್ರಾಹಕರು ಕೆಲಸ ಮಾಡಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಜಿ.ಪ್ರಭು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನ ಹಾಗೂ ಆರು ಮಂದಿ ಅರ್ಹ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಮಾಧ್ಯಮ ರಂಗವೂ ವಿಶಿಷ್ಟ ಬರವಣಿಗೆಯ ಮೂಲಕ ಜ್ಞಾನ ರೂಪಿಸುವಲ್ಲಿ, ದೃಶ್ಯ ಮಾಧ್ಯಮ ಹಾಗೂ ಛಾಯಾಗ್ರಹಣ ಮಾಧ್ಯಮಗಳು ಜನರಿಗೆ ಸ್ಪಷ್ಟ ಸಂದೇಶ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು.

ಯಾವುದೇ ಒಂದು ದೇಶವು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವಾಗ ಆ ದೇಶದ ಶಕ್ತಿ ತುಂಬುವುದು ಮಾನವ ಸಂಪನ್ಮೂಲವಾಗಿದೆ. ಶಿಕ್ಷಣ ವ್ಯವಸ್ಥೆಯ ಮೂಲಕ ಜನರಿಗೆ ಹಂತ ಹಂತವಾಗಿ ವಿಜ್ಞಾನ ತಿಳಿಸಲಾಗುತ್ತದೆ, ಯಾವ ದೇಶದಲ್ಲಿ ವಿಜ್ಞಾನದ ಜೊತೆಗೆ ಜ್ಞಾನವು ದೊರೆಯುತ್ತದೆಯೋ ಅಂತಹ ದೇಶ ದುಡಿಮೆಯಾಗಲಿ, ಸಂಸ್ಕಾರದಲ್ಲಾಗಲಿ, ಸಂಸ್ಕೃತಿಯಲ್ಲಾಗಲಿ ಸದೃಢವಾಗಿರುತ್ತದೆ ಎಂದು ತಿಳಿಸಿದರು.

ಭಾರತದ ಸ್ವಾತಂತ್ರ್ಯದ ನಂತರ ಶಿಕ್ಷಣದ ಕ್ಷೇತ್ರವನ್ನು ಒಮ್ಮೆ ಅವಲೋಕನೆ ಮಾಡಿ ನೋಡಿದಾಗ ಜ್ಞಾನ ಮತ್ತು ವಿಜ್ಞಾನ ಎರಡಕ್ಕೂ ಹೆಚ್ಚು ಒತ್ತು ನೀಡಲಾಗಿದೆ. ಆದರೆ ಕಳೆದ ನಾಲ್ಕು ದಶಕಗಳಿಂದ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ವಿಜ್ಞಾನದಿಂದ ಎಷ್ಟೇ ದುಡಿದರು ಕೂಡ ಜೀವನಕ್ಕೆ ಮೌಲ್ಯ ಬರುವುದು ಜ್ಞಾನ ಮತ್ತು ಸಂಸ್ಕಾರದಿಂದ ಮಾತ್ರ, ಶಿಕ್ಷಣ ಮುಗಿದ ನಂತರ ಜ್ಞಾನ ಪಡೆಯಬೇಕಾದರೆ ಶೇಕಡಾ 95ರಷ್ಟು ಜನ ಮಾಧ್ಯಮವನ್ನು ಆಶ್ರಯಿಸುತ್ತಾರೆ. ಈ ಮಾಧ್ಯಮಗಳು ಜನ ಸಾಮಾನ್ಯರ ಸಂಸ್ಕಾರ ಸಂಸ್ಕೃತಿ ದೇಶದ ಅಭಿವೃದ್ಧಿ ದೇಶಕ್ಕೆ ಮಾನವ ಸಂಪನ್ಮೂಲವನ್ನು ಶಕ್ತಿದಾಯಕ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಕೆಲಸವನ್ನು ಮಾಧ್ಯಮ ಮಾಡುತ್ತದೆ ಎಂದು ಹೇಳಿದರು.

ಪ್ರಸ್ತುತ ಕ್ಲಿಷ್ಟ ಸನ್ನಿವೇಶಗಳ ದಿನಗಳಲ್ಲಿ ಜನರು ದುಡಿಮೆಯ ಹಿಂದೆ ಬಿದ್ದಿರುವ ಸಂದರ್ಭದಲ್ಲಿ ಅವರಿಗೆ ಸಂಸ್ಕಾರ ಕಲಿಸುವ ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ ಮಾತ್ರ ಎಂದರು.

ಪ್ರಜಾ ಪ್ರಭುತ್ವದ ಮೂರು ಅಂಗಗಳಾದ ಕಾಯಾಂರ್ಗ, ಶಾಸಕಾಂಗ ಮತ್ತು ನ್ಯಾಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗವು ಗುರುತಿಸಿಕೊಂಡಿದೆ. ಈ ಮೂರು ಅಂಗಗಳಿಗಿಂತ ಹೆಚ್ಚಿನ ಜವಾಬ್ದಾರಿ ಪತ್ರಿಕಾ ರಂಗಕ್ಕಿದೆ, ಆದ್ದರಿಂದ ಜನ ಸಾಮಾನ್ಯರಿಗೆ ಸಮಾಜದ ಎಲ್ಲಾ ಆಗು ಹೋಗುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವುದು ಪತ್ರಕರ್ತ ಕರ್ತವ್ಯವಾಗಿದೆ. ಇದನ್ನು ಅರಿತು ತಮ್ಮ ವೃತ್ತಿಪರತೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಪತ್ರಕರ್ತರು, ಛಾಯಾಗ್ರಾಹಕರ ಕುಟುಂಬ ಮತ್ತು ಮಕ್ಕಳಿಗೆ ಶಿಕ್ಷಣ, ಆರೋಗ್ಯ ವಿಮೆ, ಸಾಮಾಜಿಕ ಭದ್ರತೆ ಒದಗಿಸುವುದು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಮಂಡಳಿಯ ಜವಬ್ದಾರಿಯಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಮಾತನಾಡಿ, ಹವ್ಯಾಸಿ ಛಾಯಾಗ್ರಾಹಕರು ತಮ್ಮ ಹವ್ಯಾಸಕ್ಕಾಗಿ ತಮ್ಮ ಬಳಿ ಇರುವ ಕ್ಯಾಮೆರಾಗಳನ್ನು ಬಳಸಿ ಛಾಯಾಚಿತ್ರ ಸೆರೆ ಹಿಡಿಯುತ್ತಾರೆ. ಆದರೆ ವೃತ್ತಿಪರ ಛಾಯಾಗ್ರಾಹಕರು ವಿವಿಧ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ತೆಗೆದು ತಮ್ಮ ಜೀವನ ನಡೆಸುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ವಹಿಸಿದ್ದರು.

ಜಿಲ್ಲೆಯ ಆರು ಜನ ಅರ್ಹ ಛಾಯಾಗ್ರಾಹಕರಾದ ಶೇಷ, ಚಂದ್ರಶೇಖರ್, ಟಿ.ಎನ್.ರಾಮದಾಸ್, ವಿಜಯಲಕ್ಷ್ಮಿ, ಟಿ.ಜಿ.ಲೋಕೇಶ್, ಎಸ್.ಎನ್.ಮುರಳಿ ಇವರನ್ನು ಸನ್ಮಾನಿಸಲಾಯಿತು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಎಂ.ಆರ್.ಮಮತ, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ರಘುರಾಮ್, ಪತ್ರಕರ್ತ ಎಸ್.ನಾಗಣ್ಣ, ಶಾಂತರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!