ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಯಕ್ಷಗಾನ ತಾಳಮದ್ದಳೆ

296

Get real time updates directly on you device, subscribe now.


ತುಮಕೂರು: ಶ್ರಾವಣ ಮಾಸದ ಪ್ರಯುಕ್ತ ಹನುಮಂತಪುರದ ಬಯಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಯಕ್ಷದೀವಿಗೆ ವತಿಯಿಂದ ಪ್ರದರ್ಶಿಸಲಾದ ಚೂಡಾಮಣಿ ಯಕ್ಷಗಾನ ತಾಳಮದ್ದಳೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಆಂಜನೇಯನ ಶಕ್ತಿ ಸಾಮರ್ಥ್ಯ, ಚಾತುರ್ಯ, ಕಾರ್ಯ ತತ್ಪರತೆ, ನಿರ್ವಹಣಾ ಕೌಶಲ್ಯ ಪ್ರತಿಬಿಂಬಿಸುವ ರಾಮಾಯಣದ ಕಥಾಭಾಗವು ಆಂಜನೇಯ ಸನ್ನಿಧಿಯಲ್ಲಿ ಪ್ರದರ್ಶನಗೊಂಡದ್ದು ಅರ್ಥ ಪೂರ್ಣವೆನಿಸಿತು.
ಸುಗ್ರೀವನ ಆಜ್ಞೆಯ ಮೇರೆಗೆ ಆಂಜನೇಯನು ಸೀತೆಯನ್ನು ಹುಡುಕುತ್ತಾ ಲಂಕಾ ನಗರವನ್ನು ಪ್ರವೇಶಿಸಿ, ತನ್ನ ದಾರಿಗೆ ಅಡ್ಡಿಯಾದ ಲಂಕಿಣಿಯನ್ನು ನಿವಾರಿಸಿ, ಅಶೋಕವನದಲ್ಲಿ ಸೀತೆಯನ್ನು ಭೇಟಿಯಾಗಿ ರಾಮನ ಮುದ್ರೆಯುಂಗುರವನ್ನು ಕೊಟ್ಟು ಸಮಾಧಾನ ಹೇಳಿ, ಭೇಟಿಯ ಸಂಕೇತವಾಗಿ ಚೂಡಾಮಣಿಯನ್ನು ಒಯ್ಯುವ ಕಥಾನಕವನ್ನು ಕರಾವಳಿಯ ಪ್ರಸಿದ್ಧ ಕಲಾವಿದರು ಯಕ್ಷಗಾನ ತಾಳಮದ್ದಳೆಯ ಮೂಲಕ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ್ ಭಟ್, ಚೆಂಡೆಯಲ್ಲಿ ಪಿ.ಜಿ.ಜಗನ್ನಿವಾಸರಾವ್ ಪುತ್ತೂರು, ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ ಸಹಕರಿಸಿದರು, ಮುಮ್ಮೇಳದಲ್ಲಿ ಅರ್ಥ ಧಾರಿಗಳಾಗಿ ಉಜಿರೆ ಅಶೋಕ ಭಟ್ (ಹನುಮಂತ), ಶಶಾಂಕ ಅರ್ನಾಡಿ (ರಾವಣ), ಆರತಿ ಪಟ್ರಮೆ (ಲಂಕಿಣಿ), ಸಿಬಂತಿ ಪದ್ಮನಾಭ (ಸೀತೆ) ಹಾಗೂ ಸಂವೃತ ಶರ್ಮಾ (ತ್ರಿಜಟೆ) ಭಾಗವಹಿಸಿದ್ದರು.

ಇದಕ್ಕೂ ಮುನ್ನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿಟೆಕ್ (ಜೈವಿಕ ತಂತ್ರಜ್ಞಾನ) ವಿದ್ಯಾರ್ಥಿನಿ ಮಹಿಮಾ ಭಟ್ ಸರ್ಪಂಗಳ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು, ವಯೋಲಿನ್ ನಲ್ಲಿ ವಿದ್ವಾನ್ ಪಿ.ಎಸ್.ಪ್ರಸನ್ನ ಕುಮಾರ್, ಮೃದಂಗದಲ್ಲಿ ವಿದ್ವಾನ್ ಅಂಜನ್ ಕುಮಾರ್.ಎಸ್, ಘಟಂನಲ್ಲಿ ಅವಿನಾಶ್ ಬೈಪಾಡಿತ್ತಾಯ ಸಹಕರಿಸಿದರು. ಬಯಲಾಂಜನೇಯ ದೇವಸ್ಥಾನದ ಮಹೇಶ್, ದ.ಕ. ಮಿತ್ರವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ್.ಎಂ.ಎಸ್, ಸಂಘಟನಾ ಕಾರ್ಯದರ್ಶಿ ಜಯ ಪೂಜಾರಿ, ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಅನಂತ ರಾವ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!