ತುಮಕೂರು: ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಸಿಕ್ಕಾಗ ಮಾತ್ರ ಆ ಸಮಾಜಗಳಿಗೆ ನ್ಯಾಯ ದೊರಕಿದಂತಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ದೇವರಾಜ ಅರಸು ಪ್ರಶಸ್ತಿ ಪಡೆದ ಐವರು ವಿವಿದ ಹಿಂದುಳಿದ ಸಮುದಾಯಕ್ಕೆ ಸೇರಿದವರನ್ನು ಜಿಲ್ಲಾ ಸಹಕಾರ ಕೇಂದ್ರ ವತಿಯಿಂದ ಅಭಿನಂದಿಸಿ ಮಾತನಾಡಿ, ರಾಜಕೀಯ ಅಧಿಕಾರ ಸಿಕ್ಕಾಗ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಒಂದು ಸಮುದಾಯ ಬೆಳೆಯಲು ಸಹಕಾರಿಯಾಗಲಿದೆ. ರಾಜಕೀಯ ಅಧಿಕಾರ ಹಿಡಿಯದೆ ಏನು ಹೋರಾಟ ಮಾಡಿದರೂ ಅದರಿಂದ ಪ್ರಯೋಜನವಾಗದು ಎಂದರು.
ಜಿಲ್ಲಾಡಳಿತದಿಂದ ಆಯೋಜಿಸಿರುವ ದೇವರಾಜ ಅರಸು ಅವರ 108ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಇದುವರೆಗೂ ಸಮುದಾಯದ ಸಂಘಟನೆಗಾಗಿ ಹೋರಾಟ ನಡೆಸಿದವರನ್ನು ಗುರುತಿಸಿ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಪ್ರಶಸ್ತಿ ಮೌಲ್ಯ ಹೆಚ್ಚಿಸಿದ್ದಾರೆ. ಹಾಗಾಗಿ ಪ್ರಶಸ್ತಿ ಆಯ್ಕೆ ಸಮಿತಿಗೆ ಅಭಿನಂದನೆ ಸಲ್ಲಿಸುತ್ತೇನೆ, ಇದೇ ರೀತಿ ಬ್ಯಾಂಕ್ ನಿಂದ ಮುಂಬರುವ ಎಲ್ಲಾ ವರ್ಷಗಳಲ್ಲಿ ಅರಸು ಪ್ರಶಸ್ತಿ ಪಡೆಯುವ ಎಲ್ಲರನ್ನು ಅಭಿನಂದಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಜನರು ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ, ಹಿಂದುಳಿದ ವರ್ಗಗಳೆಲ್ಲಾ ಸೇರಿ, ಪ್ರಶಸ್ತಿ ವಿಜೇತರಿಗೆ ನಾಗರಿಕ ಸನ್ಮಾನ ನಡೆಸುವ ಮೂಲಕ ಉಳಿದವರು ಸಹ ಸಮುದಾಯದ ಸಂಘಟನೆಯಲ್ಲಿ ತೊಡಗುವಂತೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಸಹಕಾರಿ ಸಚಿವರು, ಹಿಂದುಳಿದ ವರ್ಗದವರು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಅವರು ಯಾವುದೇ ಪಕ್ಷದಲ್ಲಿರಲಿ ತಮ್ಮ ತನ ಬಿಟ್ಟುಕೊಡಬಾರದು, ಹುಜೂರ್ ಪ್ರವೃತ್ತಿ ಬಿಟ್ಟು,ತಾವು ನಂಬಿದ್ದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದಾಗ ಮಾತ್ರ ಸಮುದಾಯದ ಜನರು ಸಹ ನಾಯಕನಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲದಿದ್ದರೆ ಅಧಿಕಾರ ಇರುವಾಗಲಷ್ಟೇ ಜನನಾಯಕ, ಸಾರ್ವಜನಿಕ ಮನ್ನಣೆ ಸಾಧ್ಯವಿಲ್ಲ, ಇದನ್ನು ಹಿಂದುಳಿದ ಜನಾಂಗದ ಪ್ರತಿಯೊಬ್ಬ ನಾಯಕರು ಅರ್ಥ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಸರಕಾರಿ ನೌಕರರ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ, ನಾವ್ಯಾರು ಪ್ರಶಸ್ತಿಗೆ ಅರ್ಜಿ ಹಾಕಿದವರಲ್ಲ, ನಾವು ಮಾಡಿರುವ ಸೇವೆ ಗುರುತಿಸಿ ಆಯ್ಕೆ ಸಮಿತಿ ಜಿಲ್ಲಾ ಮಟ್ಟದಲ್ಲಿ ದೇವರಾಜು ಅರಸು ಪ್ರಶಸ್ತಿ ನೀಡಿರುವುದು ತುಂಬ ಸಂತೋಷ ನೀಡಿದೆ. ನಾನು ಸರಕಾರಿ ನೌಕರಿಯಲ್ಲಿದ್ದಾಗಲೇ ಧನಿಯಕುಮಾರ್, ಕೆಂಪರಾಜು, ಪ್ರೆಸ್ ರಾಜಣ್ಣ ನಂತಹ ಹಲವರ ಜೊತೆ ಸೇರಿ ಓಬಿಸಿಗೆ ಸೇರಿದ ಹಾಸ್ಟೆಲ್ ಗಳಲ್ಲಿ ದೇವರಾಜ ಅರಸು ಜಯಂತಿ ಮಾಡುವ ಮೂಲಕ ಯುವ ಜನರಲ್ಲಿ ಸಂಘಟಿತರಾಗುವಂತೆ ಪ್ರೇರೆಪಣೆ ನೀಡಿದ್ದರ ಫಲ ಇಂದು ಅದ್ದೂರಿಯಾಗಿ ಅರಸು ಜಯಂತಿ ಆಚರಣೆಯಾಗುತ್ತಿದೆ. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಕೇವಲ ಹಿಂದುಳಿದ ವರ್ಗದ ನಾಯಕರಾಗದೆ ಎಲ್ಲಾ ವರ್ಗದ ಶೋಷಿತ ನಾಯಕರಾಗಿದ್ದಾರೆ. ಈಗಲಾದರೂ ಹಿಂದುಳಿದ ವರ್ಗದವರು ಒಂದಾಗದಿದ್ದರೆ, ನಮ್ಮ ಕಾಲ ಮೇಲೆ ನಾವೆ ಚಪ್ಪಡಿ ಎಳೆದುಕೊಂಡಂತೆ, ಎಲ್ಲರೂ ಒಗ್ಗೂಡಿ ಅಹಿಂದವನ್ನು ಮತ್ತಷ್ಟು ಬಲಪಡಿಸುವ ಕೆಲಸ ಆಗಬೇಕೆಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಸಣ್ಣಪುಟ್ಟ ಜಾತಿಗಳಿಗೆ ಬೆನ್ನುಲುಬಿದ್ದಂತೆ, ಹಿಂದುಳಿದ ಸಮುದಾಯಗಳ ಸಂಘಟನೆಗೆ ಒತ್ತು ನೀಡಿದ ಸವಿತಾ ಸಮಾಜದ ಮಂಜೇಶ್, ಕುರುಬ ಸಮಾಜದ ಕೆಂಪರಾಜು, ಗೊಲ್ಲ ಸಮುದಾಯದ ಜಿ.ಎಂ.ಸಣ್ಣಮುದ್ದಯ್ಯ, ಸಾದರ ಸಮುದಾಯದ ಪಿ.ಮೂರ್ತಿ ಹಾಗೂ ವಿಶ್ವಕರ್ಮ ಸಮುದಾಯದ ಜಗದಾಂಬ ಅವರನ್ನು ಗುರುತಿಸಿ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಹಕಾರಿ ಸಚಿವರು ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಬದುಕಿ ಬಾಳಿದ ಮನೆ ಶಿಥಿಲಗೊಂಡಿದೆ, ಅಲ್ಲದೆ ಅವರ ಸಮಾಧಿ ಸಹ ಸಮರ್ಪಕ ನಿರ್ವಹಣೆ ಇಲ್ಲ, ಹಾಗಾಗಿ ಸರಕಾರವತಿಯಿಂದ ಸಮಾಧಿ ಮತ್ತು ಮನೆಯ ಅಭಿವೃದ್ಧಿಗೆ ಒತ್ತು ನೀಡಿ ಮ್ಯೂಸಿಯಂ ಆಗಿ ಪರಿವರ್ತಿಸುವಂತೆ ಹಾಗೂ ಹೊಸ ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಅವರ ಹೆಸರಿಡುವಂತೆ ಮನವಿ ಮಾಡಿದರು.
ಈ ವೇಳೆ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ಸಿಂಗದಹಳ್ಳಿ ರಾಜುಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟದ ಹೆಬ್ಬೂರು ಶ್ರೀನಿವಾಸ ಮೂರ್ತಿ, ಸವಿತಾ ಸಮಾಜದ ಮಂಜೇಶ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ನ ನಿರ್ದೇಶಕ ನಾರಾಯಣಗೌಡ, ಟಿ.ಪಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ್ ಇನ್ನಿತರರು ಇದ್ದರು.
Comments are closed.