ಸೌಜನ್ಯ ಪ್ರಕರಣ ಮರು ತನಿಖೆ ನಡೆಸಿ

148

Get real time updates directly on you device, subscribe now.


ತುಮಕೂರು: ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಸರಿಯಾಗಿ ಓದದೇ ಸೌಜನ್ಯ ಪ್ರಕರಣ ಮುಗಿದು ಹೋದ ಅಧ್ಯಾಯ ಎಂಬುದು, ಅವರ ಬಾಲಿಷತನ ತೋರಿಸುತ್ತದೆ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ದೂರಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ರಾಜ್ಯ ಮಾಹಿತಿ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಸೌಜನ್ಯ ಪರ ನ್ಯಾಯಕ್ಕಾಗಿ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ಸ್ವತಃ ವಕೀಲರಾಗಿರುವ ಮುಖ್ಯಮಂತ್ರಿಗಳು ಪ್ರಕರಣದ ತೀರ್ಪು ಓದಿ ನಂತರ ಮಾತನಾಡುವುದಾಗಿ ಪ್ರತಿಕ್ರಿಯಿಸಿದರೆ, ಗೃಹ ಸಚಿವರು ನೀಡಿರುವ ಹೇಳಿಕೆ ಮಾತ್ರ ನಿಜಕ್ಕು ನ್ಯಾಯ ಕೇಳುವ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ ಎಂದರು.

ಧರ್ಮಸ್ಥಳದಲ್ಲಿ 2012 ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಇಡಿ ವ್ಯವಸ್ಥೆಯ ಮೇಲೆ ನಡೆದ ಅತ್ಯಾಚಾರವಾಗಿದೆ. ಸಂವಿಧಾನ, ನ್ಯಾಯಾಂಗ ವ್ಯವಸ್ಥೆ, ಕಾನೂನು ಸುವ್ಯವಸ್ಥೆಯ ಮೇಲೆ ನಡೆದ ಅತ್ಯಾಚಾರವಾಗಿದೆ. ಹಾಗಾಗಿ ಸದರಿ ಪಕ್ರರಣವನ್ನು ಮರು ತನಿಖೆಗೆ ಒಳಪಡಿಸುವುದು ಸೂಕ್ತ, ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ಪ್ರಕರಣ ಮರು ತನಖೆಗೆ ಒಳಪಡಿಸಿ, ಅತ್ಯಾಚಾರ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕೆಂಬುದು ನನ್ನಂತಹ ಹಲವಾರು ಜನರ ಒತ್ತಾಯವಾಗಿದೆ ಎಂದು ಸ್ಟ್ಯಾನ್ಲಿ ತಿಳಿಸಿದರು.

ಸೌಜನ್ಯ ಅತ್ಯಾಚಾರ ಪ್ರಕರಣದ ತನಿಖೆ ರಾಜ್ಯ ಪೊಲೀಸರಿಂದ, ಸಿಓಡಿ, ಸಿಬಿಐನಿಂದ ನಡೆದಾಗಲೂ ಸೌಜನ್ಯ ತಾಯಿ, ಅಪರಾದಿ ಸಂತೋಷರಾವ್ ಅಲ್ಲ ಎಂಬುದನ್ನು ಸಾರಿ ಸಾರಿ ಹೇಳಿದ್ದರೂ ಕೇಳದೆ, ಸಿಬಿಐ ಕೋರ್ಟ್ ಹೇಳಿದ ನಂತರ ಅಪರಾಧ ಅವರಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಹಾಗಾದರೆ ಅಪರಾಧಿ ಯಾರು ಎಂದು ತಿಳಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ, ನಿಜವಾದ ಅಪರಾಧಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದವರು ಯಾರು? ಎಂಬುದನ್ನು ಸಮಾಜಕ್ಕೆ ತಿಳಿಸಬೇಕಾದದ್ದು ಪೊಲೀಸ್ ಇಲಾಖೆಯ ಕರ್ತವ್ಯ, ಹಾಗಾಗಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಕೆಲವರು ಬಡವರು, ದಲಿತರು ಹಿಂದುಳಿದವರು, ಮಹಿಳೆಯರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ಒಡನಾಡಿ ಸಂಸ್ಥೆಯ ವಿರುದ್ಧ ಹಿಂದು ವಿರೋಧಿ ಎಂಬ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಒಡನಾಡಿ ತೆರೆದ ಪುಸ್ತಕವಿದ್ದಂತೆ, ಕ್ರಿಶ್ಚಿಯನ್ ಪಾದ್ರಿಗಳು ತಪ್ಪು ಮಾಡಿದಾಗಲು ಚರ್ಚ್ ಎದುರು ಪ್ರತಿಭಟನೆ ಮಾಡಿದ್ದೇವೆ. ನಮ್ಮ ಹೋರಾಟ ಜಾತ್ಯಾತೀತ, ಧರ್ಮಾತೀತ, ಸೌಜನ್ಯ ಪರವಾಗಿ ಇಡೀ ರಾಜ್ಯದಲ್ಲಿ ನ್ಯಾಯಕ್ಕಾಗಿ ಜನಸಾಮಾನ್ಯರು ಧ್ವನಿ ಎತ್ತಿದ್ದಾರೆ. ಇದು ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ. ನಿಜವಾದ ಆರೋಪಿಗಳ ಬಂಧನ ಆಗುವವರೆಗೂ ಈ ಹೋರಾಟ ನಿಲ್ಲದು ಎಂದು ಒಡನಾಡಿ ಸ್ಟ್ಯಾನ್ಲಿ ತಿಳಿಸಿದರು.

ಸಂತ್ರಸ್ಥೆ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳಿಗೆ ಆಗಿರುವ ಆನ್ಯಾಯದ ವಿರುದ್ಧ ಇಷ್ಟೊಂದು ಜನರು ನ್ಯಾಯ ಕೇಳುತ್ತಿರುವುದು ನಮಗೆ ಮತ್ತಷ್ಟು ಹೋರಾಟಕ್ಕೆ ಚೈತನ್ಯ ತಂದುಕೊಟ್ಟಿದೆ, ರಾಜ್ಯದ ಯಾವುದೇ ಮೂಲೆಯಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ನಾನು ಭಾಗಿಯಾಗಲಿದ್ದೇನೆ ಎಂದರು.

ಈ ಸಂಬಂಧ ಮನವಿಯನ್ನು ಮುಖ್ಯಮಂತ್ರಿಗಳು, ರಾಜ್ಯ ಅಡ್ವಕೇಟ್ ಜನರಲ್ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಲೇಖಕಿ ಬಾ.ಹ.ರಮಾಕುಮಾರಿ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್, ಪ್ರಧಾನ ಕಾರ್ಯದರ್ಶಿ ಕುಣಿಹಳ್ಳಿ ಮಂಜುನಾಥ್, ಕಾರ್ಯಾಧ್ಯಕ್ಷ ಚನ್ನಯ್ಯ ವಸ್ತ್ರದ್, ಕರ್ನಾಟಕ ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಹೆಚ್.ಬಿ.ರಾಜೇಶ್, ಪ್ರಾಂತ ರೈತ ಸಂಘದ ಬಿ.ಉಮೇಶ, ಸಿಐಟಿಯುನ ಸೈಯದ್ ಮುಜೀಬ್, ಎನ್.ಕೆ.ಸುಬ್ಬಣ್ಣ ಇತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!