ತುಮಕೂರು: ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಹಾಗೂ ವಿಶ್ವ ದರ್ಜೆಯ ಸೇವೆ ನೀಡುವ ಉದ್ದೇಶದಿಂದ ಆರಂಭವಾದ ಸಿದ್ಧಗಂಗಾ ಆಸ್ಪತ್ರೆಯ ಸೇವೆ ವಿಸ್ತರಿಸುವ ಜವಾಬ್ದಾರಿ ಎಂಬಿಬಿಎಸ್ ವಿದ್ಯಾರ್ಥಿಗಳ ಮೇಲಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಕಲಾ ವೈಭವ ಕಾಲೇಜು ಹಬ್ಬದ ಸಾನಿಧ್ಯ ವಹಿಸಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಮೆಡಿಕಲ್ ಕಾಲೇಜಾಗಿ ವಿಸ್ತರಿಸಿಕೊಂಡಾಗ ನಮ್ಮ ಆಸ್ಪತ್ರೆ ಮೇಲೆ ಭರವಸೆಯಿಟ್ಟು ದಾಖಲಾಗಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ವೈದ್ಯರ ಮೇಲಿದೆ, ದೇಶಕ್ಕೆ ಅತ್ಯುತ್ತಮ ಪ್ರಜ್ಞಾವಂತ ವೈದ್ಯರನ್ನು ನೀಡುವ ಈ ಅಪೂರ್ವ ಅವಕಾಶ ನಮ್ಮ ಶಿಕ್ಷಣ ಸಂಸ್ಥೆಯ ಹೊಣೆಗಾರಿಕೆ ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.
ಎಸ್ಎಂಸಿಆರ್ಐ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಹೆಸರು ವಿಶ್ವಮಾನ್ಯವಾಗಿದ್ದು ಇಲ್ಲಿಂದ ತೇರ್ಗಡೆಯಾಗುವ ಪ್ರತಿ ಪದವಿ ವಿದ್ಯಾರ್ಥಿಯೂ ಕೂಡ ಔದ್ಯೋಗಿಕವಾಗಿ ಆದ್ಯತೆಯ ಅವಕಾಶ ಪಡೆಯುತ್ತಿದ್ದಾರೆ. ನಿಮ್ಮ ಸೇವಾ ಮನೋಭಾವನೆ ಹಾಗೂ ವೈದ್ಯವಿಜ್ಞಾನದ ಅಸ್ಮಿತೆ ನಮ್ಮ ಸಂಸ್ಥೆಯ ಕೀರ್ತಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂದರು.
ವೈದ್ಯಕೀಯ ಕಾಲೇಜಿನ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಸಚ್ಚಿದಾನಂದ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ಆದರ್ಶಗಳನ್ನೂ ರೂಢಿಸಿಕೊಳ್ಳಬೇಕು. ಜ್ಞಾನದ ಮಟ್ಟ ಹೆಚ್ಚಿದಂತೆಲ್ಲಾ ಬದುಕನ್ನು ಸ್ವೀಕರಿಸುವ ಬೌದ್ಧಿಕತೆ ಹೆಚ್ಚಿದಾಗ ಮಾತ್ರ ಕಲಿಕಾ ಜೀವನಕ್ಕೆ ಅರ್ಥ ಬರುತ್ತದೆ ಎಂದರು.
ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ.ಎಂ, ಮೆಡಿಕಲ್ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವ ಕುಮಾರ್ ಇತರರು ಇದ್ದರು.
Comments are closed.