ಜಮೀನಿನ ಮಾಲೀಕತ್ವ ವರ್ಗಾವಣೆ ಯತ್ನಕ್ಕೆ ಖಂಡನೆ

2,492

Get real time updates directly on you device, subscribe now.


ಕುಣಿಗಲ್: ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ವೇಳೆಯಲ್ಲಿ ದಾಖಲೆ ಪರಿಶೀಲಿಸದೆ ಜಮೀನಿನ ಮಾಲೀಕತ್ವ ವರ್ಗಾವಣೆ ಯತ್ನಕ್ಕೆ ಸರ್ವೇ ಸಿಬ್ಬಂದಿ ಸಹಕರಿಸಿದ್ದಾರೆ ಎಂದು ಆರೋಪಿಸಿ ಸರ್ವೇ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆಯಿತು.

ತಾಲೂಕಿನ ಹುಲಿಯೂರ್ ದುರ್ಗ ಹೋಬಳಿಯ ಅರಮನೆ ಹೊನ್ನಮಾಚನ ಹಳ್ಳಿ ಗ್ರಾಮದಲ್ಲಿ ಸರ್ವೇ ನಂಬರ್ 345ಕ್ಕೆ ಸಂಬಂಧಿಸಿದಂತೆ ತಕರಾರು ಇದ್ದು ಸದರಿ ಜಮೀನಿನ ಮಾಲೀಕತ್ವ ತಕರಾರು ನ್ಯಾಯಾಲಯ ಮೆಟ್ಟಿಲೇರಿ ವಿಚಾರಣೆ ಮುಗಿರುವ ವರೆಗೂ ತಡೆಯಾಜ್ಞೆ ನೀಡಲಾಗಿದೆ. ಈ ಮಧ್ಯೆ ಜಮೀನಿನ ಮಾಲೀಕತ್ವ ಸ್ಥಾಪಿಸುವ ದಿನೇಶ್ ಇತರರರು ಸೇರಿದಂತೆ ಗ್ರಾಮಸ್ಥರು ನ್ಯಾಯಾಲಯ ತಡೆಯಾಜ್ಞೆ ಇರುವ ಬಗ್ಗೆ ಸರ್ವೇ ಇಲಾಖೆಯ ಸಹಾಯಕ ನಿರ್ದೇಶಕ (ಎಡಿಎಲ್ಆರ್)ರಿಗೆ ಯಾವುದೇ ಅಳತೆ ಪ್ರಕ್ರಿಯೆ ನಡೆಸದಂತೆ ದಾಖಲೆಗಳೊಂದಿಗೆ ಆಗಸ್ಟ್ 15 ರಲ್ಲಿ ದೂರು ನೀಡಿದ್ದರು, ಈ ಮಧ್ಯೆ ಆಗಸ್ಟ್ 16 ರಂದು ಸರ್ವೇಯರ್ ಯಾವುದೇ ಸಮರ್ಪಕ ಪ್ರಕ್ರಿಯೆ ನಡೆಸದೆ ಜಮೀನು ಅಳತೆ ಮಾಡಲು ಸ್ಥಳಕ್ಕೆ ಹೋಗದೆ ಜಮೀನು ಅಳತೆ ಮಾಡಿ ಭಾಗ ಮಾಡುವ (ಪೋಡು) ಪ್ರಕ್ರಿಯೆ ನಡೆಸಿ, ಇದರ ಆಧಾರದ ಮೇಲೆ ಜಮೀನಿನ ಮಾಲೀಕತ್ವ ದಾಖಲೆ ಬದಲಾವಣೆ ಪ್ರಕ್ರಿಯೆ ನಡೆಯಲು ಮುಂದಾಗಿದ್ದು, ಅರ್ಜಿದಾರ ಸೇರಿದಂತೆ ಗ್ರಾಮಸ್ಥರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಉಜ್ಜಿನಿ ರೈತ ಸಂಘದ ಮುಖಂಡ ಬಸವರಾಜು, ಅರ್ಜಿದಾರರು, ಗ್ರಾಮಸ್ಥರು, ತಾಪಂ ಮಾಜಿ ಸದಸ್ಯ ಕುಮಾರ್ ಇತರರು ಎಡಿಎಲ್ಆರ್ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ ತರಾಟೆಗೆ ತೆಗೆದುಕೊಂಡರು.

ರೈತ ಮುಖಂಡ ಬಸವರಾಜು ಮಾತನಾಡಿ, ನ್ಯಾಯಾಲಯದಲ್ಲಿ ತಡೆ ಇರುವ ಪ್ರಕರಣದ ಮಾಹಿತಿ ಇದ್ದರೂ ಸರ್ವೇ ಇಲಾಖೆಯಲ್ಲಿ ನಿಯಮಾನುಸಾರ ಪ್ರಕ್ರಿಯೆ ನಡೆಸದೆ ಮನಬಂದಂತೆ ಅಕ್ರಮ ಎಸಗಿ ಪೋಡು ಪ್ರಕ್ರಿಯೆ ಮಾಡಿದ್ದು ಈಗ ಕೇಳಿದರೆ ಇಲ್ಲ ಎನ್ನುತ್ತಾರೆ. ಭೂಮಿ ವಿಭಾಗದಲ್ಲೂ ನಿಯಮ ಪಾಲಿಸದೆ ಜಮೀನಿನ ಮಾಲಿಕತ್ವ ವರ್ಗಾಯಿಸುವ ಯತ್ನ ನಡೆದಿದೆ. ಕೋಟ್ಯಾಂತರ ರೂ. ಬೆಲೆ ಬಾಳುವ ರೈತನ ಜಮೀನನ್ನು ಲೂಟಿ ಹೊಡೆಯುವ ಯತ್ನ ಮಾಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತ್ತಸ್ಥ ಸರ್ವೇ, ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಡಿಎಲ್ಆರ್ ಮಂಜುನಾಥ್ ಪ್ರತಿಕ್ರಿಯೆ ನೀಡಿ, ಸದರಿ ಪ್ರಕರಣವು ಪೋಡಿಮುಕ್ತ ಗ್ರಾಮದ ಯೋಜನೆಯಡಿಯಲ್ಲಿ ಮಂಜೂರಾಗಿದ್ದು, ಸಮರ್ಪಕವಾಗಿ ನಿರ್ವಹಣೆ ಆಗದೆ ಲೋಪ ಇರುವುದು ಕಂಡು ಬಂದಿದೆ, ಜಮೀನಿಗೆ ಸಂಬಂಧಿಸಿದಂತೆ ಇಲಾಖೆಯ ಸಿಬ್ಬಂದಿಯ ಕಣ್ಣು ತಪ್ಪಿನಿಂದ ಆಗಿದ್ದು ಪ್ರಕ್ರಿಯೆ ರದ್ದುಗೊಳಿಸುವಂತೆ ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದು, ಲೋಪ ಎಸಗಿದ ಸಿಬ್ಬಂದಿ ಮೇಲೆ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಮೇರೆಗೆ ಪ್ರಕರಣ ತಿಳಿಗೊಂಡಿತು. ಗ್ರಾಮಸ್ಥರಾದ ಚೌಡಯ್ಯ, ಕೃಷ್ಣಪ್ಪ, ಆನಂದ, ರಘು, ವಿನಯ್, ಸಿದ್ದಗಂಗಯ್ಯ, ಚಲುವರಾಮಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!