ತುಮಕೂರು: ಸಂಶೋಧನೆಗಳಿಂದ ಆಗುವ ಆವಿಷ್ಕಾರಗಳೂ ಅಭಿವೃದ್ಧಿಯ ಸಂಕೇತ, ಇಂತಹ ಪ್ರವೃತ್ತಿಗಳಿಗೆ ಆಯಸ್ಸು ಜಾಸ್ತಿ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಜೀವರಸಾಯನ ಶಾಸ್ತ್ರ ವಿಭಾಗ, ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ವಿಭಾಗ, ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮಜೀವ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳು ಮಂಗಳವಾರ ಆಯೋಜಿಸಿದ್ದ ಆರೋಗ್ಯ, ಪೋಷಣೆ, ಆಹಾರ ಮತ್ತು ಬೆಳೆ ಭದ್ರತೆಯಲ್ಲಿ ಇತ್ತೀಚಿನ ಪ್ರವೃತ್ತಿ ಮತ್ತು ಆವಿಷ್ಕಾರಗಳ ಕುರಿತ ರಾಷ್ಟ್ರೀಯ ಸಮ್ಮೇಳನ ಹಾಗೂ ತುಮಕೂರು ವಿಶ್ವ ವಿದ್ಯಾಲಯದ ಜೀವ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿವಂಗತ ಡಾ.ಟಿ.ಜಿ.ತಿಪ್ಪೇಸ್ವಾಮಿ ಅವರ ಸ್ಮರಣಾರ್ಥ ಔಷಧ ಅನ್ವೇಷಣೆಗಾಗಿ ಕ್ರೊಮ್ಯಾಟೋಗ್ರಫಿಯಲ್ಲಿನ ಪ್ರಗತಿ ಕುರಿತು ಕೌಶಲ್ಯಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮನುಷ್ಯರು ಸಂಪತ್ತಿಗೆ ಕೊಡುವ ಪ್ರಾಮುಖ್ಯತೆ ನಮ್ಮ ನಡತೆ, ಆರೋಗ್ಯಕ್ಕೆ ಕೊಡುತ್ತಿಲ್ಲ, ಸಂಪತ್ತು ಕಳೆದುಕೊಂಡರೆ ಏನೂ ಆಗುವುದಿಲ್ಲ, ಆರೋಗ್ಯ ಕಳೆದುಕೊಂಡರೆ ನಮ್ಮ ದೇಹದ ಶಕ್ತಿ ಕಡಿಮೆಯಾಗುತ್ತದೆ, ಆದರೆ ನಮ್ಮ ನಡತೆ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಕೆ.ಸೈದಾಪುರ ಮಾತನಾಡಿ, ಶಾಲಾ ಕಾಲೇಜುಗಳಿಂದ ಪಡೆಯುವ ಶಿಕ್ಷಣಕ್ಕಿಂತ ನಮ್ಮ ಸ್ವಂತ ಅನುಭವ ಸಾಕಷ್ಟು ಶಿಕ್ಷಣ ನೀಡುತ್ತವೆ, ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರ, ಸಂಶೋಧನೆಗಳಿಲ್ಲದೆ ಅಭಿವೃದ್ಧಿ ಆಗುವುದಿಲ್ಲ, ಸಂಶೋಧನೆ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತದೆ ಮತ್ತು ಜ್ಞಾನ ಹೆಚ್ಚಿಸುತ್ತದೆ ಎಂದು ಹೇಳಿದರು.
ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಾಜಿ ಸಹಾಯಕ ಮಹಾ ನಿರ್ದೇಶಕ ಪ್ರೊ.ಮೋಹನ್ ಕುಮಾರ್ಮಾತನಾಡಿ, ಆಧುನಿಕ ಜಗತ್ತು ಕೃಷಿಯ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ, ಕೃಷಿಯಲ್ಲಿನ ಹೊಸ ಹೊಸ ಆವಿಷ್ಕಾರ, ಸಂಶೋಧನೆಗಳು ಮತ್ತಷ್ಟು ಕೃಷಿ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಅಧ್ಯಯನ ವಿಭಾಗದ ಸಂಯೋಜಕ ಡಾ.ದೇವರಾಜ.ಎಸ್, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶರತ್ಚಂದ್ರ.ಆರ್.ಜಿ. ಭಾಗವಹಿಸಿದ್ದರು.
Comments are closed.