ತುಮಕೂರು: ಕಾವೇರಿ ಜಲಾನಯನ ಪ್ರದೇಶದ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಜನತೆ ಪರದಾಡುತ್ತಿರುವ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ರಾಜ್ಯ ಸರಕಾರ ರಾಜ್ಯದ ಹಿತ ಮರೆತಿದೆ, ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಸಬೇಕೆಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ ನಂತರ ಮನವಿ ಪತ್ರ ಸಲ್ಲಿಸಿ ಮಾತನಾಡಿ, ತಮಿಳುನಾಡಿನಲ್ಲಿರುವ ಯಾವುದೇ ಬೆಳೆ ಒಣಗಿಲ್ಲ, ಮೆಟ್ಟೂರು, ಭವಾನಿ ಮತ್ತು ಗ್ರಾಂಡ್ ಅಣೆಕಟ್ಟೆಗಳಲ್ಲಿ ಸಾಕಷ್ಟು ನೀರಿದೆ, ಇಷ್ಟಿದ್ದರೂ ಸಂಕಷ್ಟ ಸೂತ್ರದ ಅಡಿಯಲ್ಲಿ ನೀರು ಹರಿಸುವ ಮೂಲಕ ರಾಜಕೀಯ ಮಾಡಲು ಹೊರಟಿದೆ. ಇಂಡಿಯ ಮೈತ್ರಿ ಭಾಗವಾಗಿ ನೀರು ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದರು.
ಕಾವೇರಿ ಜಲಾನಯನ ಪ್ರದೇಶದ ಹಾರಂಗಿ, ಹೇಮಾವತಿ ಮತ್ತು ಕೃಷ್ಣರಾಜ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದ ಮಳೆಯಾಗಿಲ್ಲ, ರೈತರು ಒಂದಲ್ಲ, ಎರಡು ಬಾರಿ ಬಿತ್ತನೆ ಮಾಡಿದ ರಾಗಿ ಮತ್ತಿತರ ಬೆಳೆಗಳು ಒಣಗಿವೆ, ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಛಾಯೆ ದಟ್ಟವಾಗಿದೆ, ಹೀಗಿದ್ದರೂ ಸಂಕಷ್ಟ ಸೂತ್ರದ ಅಡಿಯಲ್ಲಿ ದಿನಕ್ಕೆ 10 ಸಾವಿರ ಕ್ಯೂಸೆಕ್ಸ್ ನೀರು ಹರಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ರಾಜ್ಯ ಎದುರಿಸುತ್ತಿರುವ ನೀರಾವರಿ ಸಮಸ್ಯೆ ಬಿಂಬಿಸುವಲ್ಲಿ ಕಾನೂನು, ನೀರಾವರಿ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ, ಹಾಗಾಗಿ ಕೂಡಲೇ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸಭೆಯಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಯನ್ನು 20 ಸಾವಿರ ರೂ. ಗಳಿಗೆ ಹೆಚ್ಚಿಸಲು ಹಂತ ಹಂತದ ಹೋರಾಟ ರೂಪಿಸುವುದು, ಕೃಷಿ ಕಾಯ್ದೆ ರದ್ದು ಮಾಡುವ ಭರವಸೆ ನೀಡಿದ್ದ ಸಿದ್ದರಾಮಯ್ಯ ನುಡಿದಂತೆ ನಡೆಯಬೇಕೆಂಬ ಒತ್ತಾಯದ ಜೊತೆಗೆ ಕಾನೂನು ಬದ್ದ ಎಂಎಸ್ ಪಿ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಕರ್ನಾಟಕದಲ್ಲಿ ಆಗಸ್ಟ್ ಮಾಹೆಯ ಮಳೆ ತೀರ ಕಡಿಮೆ ಇದ್ದು, ಬರದ ಛಾಯೆ ಆವರಿಸಿದೆ, ಕುಡಿಯುವ ನೀರಿಗೂ ಜನರು ಹಾಹಾಕಾರ ಪಡುವ ಕಾಲ ದೂರವಿಲ್ಲ, ಆದರೂ ತಮಿಳುನಾಡಿನಲ್ಲಿರುವ ಇಂಡಿಯಾ ಮೈತ್ರಿಕೂಟದ ರಾಜಕೀಯ ನಾಯಕರನ್ನು ಸಮಾಧಾನ ಪಡಿಸಲು ರಾಜ್ಯದ ಹಿತ ಕಡೆಗಣಿಸಿ ನೀರು ಹರಿಸಲಾಗುತ್ತಿದೆ, ಇದು ಇಡೀ ರಾಜ್ಯದ ಜನತೆಗೆ, ರೈತರಿಗೆ ಸರಕಾರ ಮಾಡಿದ ದ್ರೋಹ, ನಿಜವಾಗಿಯೂ ಸರಕಾರಕ್ಕೆ ರಾಜ್ಯದ ರೈತರು, ಜನರ ಮೇಲೆ ಕಾಳಜಿ ಇದ್ದರೆ ಕೂಡಲೇ ನೀರು ಹರಿಸುವುದನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮಂಜುನಾಥಗೌಡ, ಉಪಾಧ್ಯಕ್ಷ ಕೆಂಕೆರೆ ಸತೀಶ್, ರಾಘವೇಂದ್ರ ಶಿರಸಿ, ಉಮೇಶ್ ಪಾಟೀಲ್, ಭೈರೇಗೌಡ, ಧನಂಜಯ್ ಆರಾಧ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು, ಮುಖಂಡರು, ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷ, ಉಪಾಧ್ಯಕ್ಷರು ಭಾಗವಹಿಸಿದ್ದರು.
Comments are closed.