ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವೆಂಕಟೇಗೌಡನ ಪಾಳ್ಯದ ಸತೀಶ್ ಹಾಗೂ ಶಿಲ್ಪ ದಂಪತಿ ಮಗಳು ತನ್ವಿತ್ ಗೆ ಜ್ವರ ಕಾಣಿಸಿಕೊಂಡಿದ್ದರಿಂದ ಮಂಗಳವಾರ ರಾತ್ರಿ 1 ಗಂಟೆ ಸಮಯದಲ್ಲಿ ಸಿ.ಎಸ್.ಪುರ ಆಸ್ಪತ್ರೆಗೆ ಕರೆತಂದಿದ್ದಾರೆ. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಯಾವ ವೈದ್ಯರು ಇರದೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗಿಲ್ಲ, ಆಸ್ಪತ್ರೆಯಲ್ಲಿದ್ದ ಶುಶ್ರೂಷಕಿ ಮಗುವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಖಾಸಗಿ ವಾಹನದಲ್ಲಿ ಗುಬ್ಬಿಗೆ ತರುವ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಸದರಿ ಆಸ್ಪತ್ರೆಯು 24*7 ಆಸ್ಪತ್ರೆಯಾಗಿದ್ದರೂ ರಾತ್ರಿ ವೇಳೆಯಲ್ಲಿ ಯಾವ ವೈದ್ಯರು ಕರ್ತವ್ಯ ನಿರ್ವಹಿಸುತ್ತಿಲ್ಲ. ಆ್ಯಂಬುಲೆನ್ಸ್ ಇದ್ದರೂ ಸೇವೆ ಲಭ್ಯವಾಗದ ಕಾರಣ ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ ಎಂದು ಪೋಷಕರು ದೂರಿದ್ದು, ಸಕಾಲದಲ್ಲಿ ಚಿಕಿತ್ಸೆ ದೊರಕಿದ್ದರೆ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು, ಇದ್ದ ಒಬ್ಬ ಮಗಳನ್ನು ಕಳೆದುಕೊಂಡು ಬದುಕು ಬರಡಾಗಿದೆ ಅನಿಸುತ್ತಿದೆ ಎಂದು ಪೋಷಕರು ಕಣ್ಣೀರು ಹಾಕಿದರು.
ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದರೂ ರಾತ್ರಿ ಪಾಳಿಯಲ್ಲಿ ಯಾರೂ ಕರ್ತವ್ಯ ನಿರ್ವಹಿಸುತ್ತಿಲ್ಲದಿರುವುದು ಅಕ್ಷಮ್ಯ, ಈಗಲಾದರೂ ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ವೈದ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಮಾಡಬೇಕಿದೆ ಎನ್ನುತ್ತಾರೆ ಯುವ ಮುಖಂಡ ರಂಗಣ್ಣ.
ವೈದ್ಯರು ಯಾವಾಗ ಬಂದು ಹೋಗುವರೊ ಒಂದು ತಿಳಿಯದಾಗಿದೆ, ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಕೇವಲ ಶುಶ್ರೂಷಕಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಯಾವುದೇ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ, ಸಣ್ಣಪುಟ್ಟ ಚಿಕಿತ್ಸೆಗೂ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬುಧವಾರ ಸಂಜೆ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ವೈದ್ಯರು ವ್ಯವಸ್ಥಿತವಾದ ಚಿಕಿತ್ಸೆ ನೀಡದೆ ಇರುವುದರಿಂದ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
Comments are closed.