ತುಮಕೂರು: ಪಾಲಿಕೆ ವ್ಯಾಪ್ತಿಯ ಖಾತೆ ಬದಲಾವಣೆ, ನೀರು ಸರಬರಾಜು, ನೈರ್ಮಲ್ಯತೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸಾರ್ವಜನಿಕರಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಜನಸ್ನೇಹಿ ಆಡಳಿತ ನೀಡಬೇಕೆಂದು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ಸಭಾಂಗಣದಲ್ಲಿ ಜರುಗಿದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿಧಿಗಳನ್ನೇ ನೇರವಾಗಿ ಪ್ರಶ್ನೆ ಮಾಡುವುದರಿಂದ ನಾವೇ ಉತ್ತರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೂರುಗಳು ಬಾರದ ರೀತಿಯಲ್ಲಿ ಅಧಿಕಾರಿಗಳು ಜನರಿಗೆ ಸಮರ್ಪಕ ಸೇವೆ ನೀಡಬೇಕು, ಖಾತೆ ತಿದ್ದುಪಡಿ, ಬದಲಾವಣೆಗೆ ಅರ್ಜಿ ಸಲ್ಲಿಸಿ ವರ್ಷವಾದರೂ ವಿಲೇವಾರಿ ಮಾಡುವುದಿಲ್ಲ, ಜನನ- ಮರಣ ಪ್ರಮಾಣ ಪತ್ರಗಳನ್ನು ನೀಡಲು ತಿಂಗಳುಗಟ್ಟಲೆ ಸಾರ್ವಜನಿಕರನ್ನು ಅಲೆದಾಡಿಸಲಾಗುತ್ತಿದೆ ಎಂದು ದೂರುಗಳು ಬಂದಿದ್ದು, ಜನರನ್ನು ಕಾಯಿಸದೆ ಆದ್ಯತೆ ಮೇಲೆ ತ್ವರಿತವಾಗಿ ಅವರ ಕೆಲಸ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳಿಗೆ ಶಾಸಕರು, ಪಾಲಿಕೆ ಸದಸ್ಯರು ಶಿಫಾರಸ್ಸು ಮಾಡಿದಾಗ ಮಾತ್ರ ಕ್ರಮ ಕೈಗೊಳ್ಳುವ ಪದ್ಧತಿ ಸರಿಯಲ್ಲ, ಸಭೆ ನಡೆಸಿ ಚರ್ಚಿಸಿದರಷ್ಟೇ ಜನರಿಗೆ ಸಮಸ್ಯೆ ಬಗೆಹರಿಯುವುದಿಲ್ಲ, ಚರ್ಚಿಸಿದ ವಿಷಯಗಳು ಕಾರ್ಯಗತಕ್ಕೆ ಬಂದಾಗ ಮಾತ್ರ ಜನರ ಸಮಸ್ಯೆ ಬಗೆಹರಿಯುವುದರೊಂದಿಗೆ ನಗರದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ನಗರದಲ್ಲಿ ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ಸ್ಮಾರ್ಟ್ ಸಿಟಿಯಲ್ಲಿ ಅನುದಾನ ಮೀಸಲಿಟ್ಟಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಅಪಘಾತ ವಲಯಗಳನ್ನು ಪತ್ತೆ ಮಾಡಿ ಈ ಅನುದಾನ ಬಳಸಿಕೊಂಡು ಸುರಕತಾ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ ನಗರದ ಅಭಿವೃದ್ಧಿ ದೃಷ್ಟಿಯಿಂದ ತುರ್ತಾಗಿ ಅನುದಾನ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಆಯುಕ್ತೆ ಅಶ್ವಿಜ.ಬಿ.ವಿ. ಅವರಿಗೆ ಸೂಚನೆ ನೀಡಿದರು.
ಕಳೆದ 8 ತಿಂಗಳಿಂದ ಚುನಾವಣಾ ಕರ್ತವ್ಯದಲ್ಲಿ ನಿರತವಾಗಿದ್ದ ಪಾಲಿಕೆ ಈಗಲಾದರೂ ನಗರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮನಸು ಮಾಡಬೇಕು, ಪಾಲಿಕೆ ವ್ಯಾಪ್ತಿಯ ನಿವೇಶನಗಳಿಗೆ ಸಂಬಂಧಿಸಿದಂತೆ ಖಾತೆಯ ದಾಖಲೆಗಳಲ್ಲಿ ಅಳತೆ ವ್ಯತ್ಯಾಸವಿದ್ದು, ತಿದ್ದುಪಡಿಗೆ ಕ್ರಮಕೈಗೊಳ್ಳಬೇಕು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಳತೆ ತಿದ್ದುಪಡಿ, ಮ್ಯುಟೇಷನ್ ತಿದ್ದುಪಡಿ ಕುರಿತು ವಾರ್ಡ್ಗಳಲ್ಲಿ ಕ್ಯಾಂಪ್ ಹಮ್ಮಿಕೊಂಡು ಸರಿಪಡಿಸಬೇಕೆಂದು ನಿರ್ದೇಶನ ನೀಡಿದರು.
ಪಾಲಿಕೆ ಸದಸ್ಯ ಬಿ.ಎಸ್.ಮಂಜುನಾಥ್ ಮಾತನಾಡಿ, ಹಿಂದಿನ ಸಾಮಾನ್ಯ ಸಭೆಗಳಲ್ಲಿ ಕೈಗೊಂಡಿರುವ ತೀರ್ಮಾನಗಳು ಇದುವರೆಗೂ ಕಾರ್ಯಗತಗೊಂಡಿಲ್ಲ, ಸಾಮಾನ್ಯ ಸಭೆಗಳನ್ನು ನಡೆಸುವ ಅಗತ್ಯವೇನೆಂದು ಪ್ರಶ್ನಿಸಿದಾಗ ಉಪ ಆಯುಕ್ತೆ (ಕಂದಾಯ) ಸುಮತಿ ಮಾತನಾಡಿ, ಹಿಂದಿನ ಸಭೆಯಲ್ಲಿ ಬಾಕಿಯಿದ್ದ ವಿಷಯಗಳನ್ನು ಚರ್ಚಿಸಿ ಇಂದು ನಿರ್ಣಯ ಕೈಗೊಳ್ಳಲಾಗುವುದೆಂದು ಉತ್ತರಿಸಿದರು.
ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಅನಧಿಕೃತ ಕಟ್ಟಡಗಳ ಮಾಲೀಕರಿಂದ ತೆರಿಗೆ ವಸೂಲಿ ಮಾಡಬೇಕು, ಇದರಿಂದ ಪಾಲಿಕೆ ಆದಾಯ ಹೆಚ್ಚಾಗಲಿದೆ. ಅನಧಿಕೃತ ಕಟ್ಟಡಗಳು ವಿದ್ಯುತ್, ಒಳಚರಂಡಿ, ನಳ ಸಂಪರ್ಕ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಾಲಿಕೆಯಿಂದ ಪಡೆದಿರುವುದರಿಂದ ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡಬೇಕೆಂದು ಪಟ್ಟು ಹಿಡಿದಾಗ ಸುಮತಿ ಪ್ರತಿಕ್ರಿಯಿಸಿ, ಈಗಾಗಲೇ ಅನಧಿಕೃತ ಕಟ್ಟಡಗಳಿಂದ ದುಪ್ಪಟ್ಟು ತೆರಿಗೆ ವಸೂಲಾತಿ ಮಾಡಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
3ನೇ ವಾರ್ಡ್ನ ಸದಸ್ಯ ಲಕ್ಷ್ಮಿ ನರಸಿಂಹರಾಜು ಮಾತನಾಡಿ, ಪಾಲಿಕೆಯ ಕಂದಾಯ ಇಲಾಖೆಯು ಜನರಿಗೆ ಸ್ಪಂದಿಸುತ್ತಿಲ್ಲ. ಇದರಿಂದ ನಾಗರಿಕರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
29ನೇ ವಾರ್ಡ್ನ ಸದಸ್ಯೆ ನಾಜೀಮಾಬಿ ಮಾತನಾಡಿ, ಕೈಬಿಟ್ಟಿರುವ ಖಾತೆಗಳನ್ನು ಮುಂದುವರೆಸಬೇಕೆಂದು ಮನವಿ ಮಾಡಿದಾಗ ದನಿಗೂಡಿಸಿದ ಸದಸ್ಯರಾದ ಧರಣೇಂದ್ರ ಕುಮಾರ್, ಜೆ.ಕುಮಾರ್, ಶ್ರೀನಿವಾಸ್ ಮೂರ್ತಿ, ಸೈಯದ್ ನಯಾಜ್, ಸಿ.ಎನ್.ರಮೇಶ್ ಅವರು ಒಕ್ಕೋರಲಿನಿಂದ ಅಧಿಕೃತ, ಅನಧಿಕೃತ ಖಾತೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಸಭೆಯಲ್ಲಿ ಆಗ್ರಹಿಸಿದರು.
ಮತ್ತೋರ್ವ ಸದಸ್ಯ (7ನೇ ವಾರ್ಡ್) ಜೆ.ಕುಮಾರ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಬೇಕೆಂದೇ ಸಾರ್ವಜನಿಕರ ಅರ್ಜಿಗಳನ್ನು ಕಳೆದು ಹಾಕುವುದು, ಅಗತ್ಯ ದಾಖಲಾತಿಗಳಿಲ್ಲವೆಂದು ನೆಪವೊಡ್ಡಿ ಆಕ್ಷೇಪಣೆ ಹಾಕುವುದನ್ನು ತಪ್ಪಿಸಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದಾಗ ಪಾಲಿಕೆ ಆಯುಕ್ತೆ ಅಶ್ವಿಜ ಪ್ರತಿಕ್ರಿಯಿಸಿ ಅಧಿಕಾರಿಗಳು ಸಾರ್ವಜನಿಕರಿಂದ ಸ್ವೀಕೃತ ಎಲ್ಲಾ ಅರ್ಜಿಗಳನ್ನು ನಿಯಮಾನುಸಾರ ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕು, ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಕಾಗದ ರಹಿತ ಆಡಳಿತ ನಡೆಸಬೇಕೆಂಬ ಸರ್ಕಾರದ ನಿರ್ದೇಶನವಿದ್ದರೂ ಪಾಲಿಕೆಯಲ್ಲಿ ಇನ್ನೂ ಜಾರಿಯಾಗದಿರುವುದು ವಿಪರ್ಯಾಸ, ಎಲ್ಲಾ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಿದಾಗ ಮಾತ್ರ ಅರ್ಜಿ, ಕಡತಗಳು ಕಾಣೆಯಾಗುವುದು ತಪ್ಪುತ್ತದೆ ಎಂದು ಸದಸ್ಯರೆಲ್ಲರೂ ಸಲಹೆ ನೀಡಿದರು.
ಆಯುಕ್ತೆ ಮಾತನಾಡಿ, ಕಡತಗಳನ್ನು ಕಳೆದು ಹಾಕುವ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಪ್ರತಿಯೊಂದು ಕಡತಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಸದಸ್ಯೆ ನಳಿನ ಇಂದ್ರಕುಮಾರ್ ಮಾತನಾಡಿ, ಪಾಲಿಕೆ ಕೆಲಸಗಳು ಬ್ರೋಕರ್ ಗಳಿಂದ ಬಂದರೆ ಸುಲಭವಾಗಿ ಆಗುತ್ತವೆ, ಬ್ರೋಕರ್ ಗಳ ಹಾವಳಿಗೆ ಕಡಿವಾಣ ಬೀಳಬೇಕು, ಬಾಕಿ ಇರುವ ಅರ್ಜಿಗಳನ್ನು ವಿಚಾರಿಸಿದರೆ ಸಂಬಂಧಿಸಿದ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ರಜೆ ಮೇಲೆ ತೆರಳಿದ್ದಾರೆ ಎಂದು ಸಬೂಬು ಹೇಳುತ್ತಾರೆಂದು ದೂರಿದಾಗ ಆಯುಕ್ತರು ಸ್ಪಂದಿಸಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇದ್ದಾಗ ಮಾತ್ರ ಪಾಲಿಕೆ ಅಭಿವೃದ್ಧಿ ಸಾಧ್ಯ, ಕೆಲಸಕ್ಕೆ ವೇಗ ನೀಡುವ ಸಲುವಾಗಿ ಪಾಲಿಕೆ ನೌಕರರ ಶಾಖೆಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದಸ್ಯ ಎ.ಶ್ರೀನಿವಾಸ್ ಮಾತನಾಡಿ, ಜನರಿಂದ ಅರ್ಜಿ ಪಡೆಯುವಾಗಲೇ ಪೂರ್ಣದಾಖಲೆ ಪಡೆದು ಯಾವುದೇ ಆಕ್ಷೇಪಣೆ ಹಾಕದೆ ಖಾತೆ ಬದಲಾವಣೆ, ಅಳತೆ ತಿದ್ದುಪಡಿ, ಕೈಬಿಟ್ಟಿರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದರು.
ಮತ್ತೋರ್ವ ಸದಸ್ಯ ಟಿ.ಎಂ.ಮಹೇಶ್ ಮಾತನಾಡಿ ಪಾಲಿಕೆಯಲ್ಲಿ ಬ್ರೋಕರ್ ಗಳಿಂದ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತಿದೆ, ಲಂಚ ನೀಡಿದವರ ಕೆಲಸ ಮೊದಲು ಎಂಬಂತಾಗಿದೆ, ಪಾಲಿಕೆಯಲ್ಲಿ ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ನಡೆದಿದ್ದರೂ ಬೆಳಕಿಗೆ ಬರುವುದೇ ಇಲ್ಲ, ಆಯುಕ್ತರು ತನಿಖೆ ನಡೆಸಬೇಕೆಂದು ಮನವಿ ಮಾಡಿದಾಗ ಮನವಿಗೆ ಸ್ಪಂದಿಸಿದ ಆಯುಕ್ತರು ಕೂಲಕಂಶವಾಗಿ ಪರಿಶೀಲಿಸುತ್ತೇನೆ ಎಂದು ಸಭೆಗೆ ತಿಳಿಸಿದರು.
ಪಾಲಿಕೆ ಸದಸ್ಯೆ ನಾಜೀಮಾಬಿ ಮಾತನಾಡಿ, ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಹುಳುಗಳಿಂದ ಕೂಡಿದ ಕೊಳೆತ ಮೊಟ್ಟೆಗಳನ್ನು ತಿನ್ನಲು ವಿತರಿಸಲಾಗಿದೆ, ನಗರದ ಕೊಳಕನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವವರಿಗೆ ತಿನ್ನಲು ಕೊಳೆತ ಆಹಾರವನ್ನು ನೀಡಲಾಗುತ್ತಿದೆ, ಈ ಅಮಾನವೀಯ ಘಟನೆಗೆ ಕಾರಣರಾದ ಆರೋಗ್ಯ ನಿರೀಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕು. ಆಹಾರ ಸರಬರಾಜು ಮಾಡಿದ ಗುತ್ತಿಗೆದಾರರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಿ ತನಿಖೆಯಾಗಬೇಕೆಂದು ಆಗ್ರಹಿಸಿದಾಗ ಪ್ರತಿಕ್ರಿಯಿಸಿದ ಮೇಯರ್ ಪೌರಕಾರ್ಮಿಕರ ಊಟೋಪಹಾರಕ್ಕಾಗಿ ಪ್ರತೀ ಮಾಹೆಯಾನ 2.45 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಇಂತಹ ಕಳಪೆ ಆಹಾರ ನೀಡುವ ಬದಲು ಅವರ ಖಾತೆಗೆ ಉಪಹಾರದ ವೆಚ್ಚದ ಹಣವನ್ನು ವರ್ಗಾವಣೆ ಮಾಡುವುದೇ ಸೂಕ್ತ, ಈ ಬಗ್ಗೆ ಚಿಂತನೆ ನಡೆಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
Comments are closed.