ತುಮಕೂರು: ನಗರದ ಬಿ.ಹೆಚ್ ರಸ್ತೆಯ ಭಾರತ್ ಮಾತಾ ಶಾಲಾ ಆವರಣದಲ್ಲಿರುವ ಡಾ.ಮುರಘಾ ಶರಣರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾ ಮಟ್ಟದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ತುಮಕೂರು ಜಿಲ್ಲೆಯ 10 ತಾಲೂಕುಗಳಿಂದ 42 ಸೊಳ್ಳೆ ನಿಯಂತ್ರಣ ಮಾದರಿಗಳ ಪ್ರಾತಕ್ಷಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದು, ವಿದ್ಯಾರ್ಥಿಗಳು ತಯಾರಿಸಿದ ಈ ಪ್ರಾತ್ಯಕ್ಷಿಕೆಗಳನ್ನು ನುರಿತ ತಜ್ಞರು ಪರಿಶೀಲಿಸಿ, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳ ಎರಡು ವಿಭಾಗಗಳಲ್ಲಿ ತಲಾ ಮೂರು ಬಹುಮಾನ ನೀಡಲಾಗಿದೆ. ಆ ಮೂಲಕ ಮಕ್ಕಳಲ್ಲಿ ಸೊಳ್ಳೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಯಿಂದ ಮಲೇರಿಯಾ, ಡೆಂಗ್ಯೂ ನಂತಹ ರೋಗ ಹರಡುವ ಈಡೀಸ್ ಸೊಳ್ಳೆಗಳ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜ್ವರ ನಿಯಂತ್ರಣ ಕ್ರಮಗಳ ಕುರಿತಂತೆ ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲೂಕು ಮಟ್ಟದಲ್ಲಿ ಮೊದಲ ಎರಡು ಬಹುಮಾನ ಪಡೆದವರನ್ನು ಜಿಲ್ಲಾ ಮಟ್ಟದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವಿಜ್ಞಾನ ಮತ್ತು ವೈದ್ಯಕೀಯ ವಿಚಾರಗಳ ಬಗ್ಗೆ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶ ಎಂದು ಡಾ.ಚಂದ್ರಶೇಖರ್ ನುಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ತಯಾರಿಸಿದ್ದ ಸುಮಾರು 42 ಮಾದರಿಗಳನ್ನು ಪರಿಶೀಲಿಸಿ ತೀರ್ಪುಗಾರರು ನೀಡಿದ ಆಯ್ಕೆಯಂತೆ ಪ್ರೌಢಶಾಲಾ ವಿಭಾಗದಲ್ಲಿ ಮೊದಲ ಬಹುಮಾನವನ್ನು ಪಾವಗಡ ತಾಲೂಕು ವೆಂಕಟಾಪುರ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕೀರ್ತನ, ದ್ವಿತೀಯ ಬಹುಮಾನವನ್ನು ತುರುವೇಕೆರೆ ತಾಲೂಕು ಅಂಚಿಹಳ್ಳಿ ಸರಕಾರಿ ಪ್ರೌಢಶಾಲೆಯ ಪ್ರಕೃತಿ.ಆರ್, ಮೂರನೇ ಬಹುಮಾನವನ್ನು ತುರುವೇಕೆರೆ ತಾಲೂಕಿನ ಅಜ್ಜನಹಳ್ಳಿ ಸರಕಾರಿ ಪೌಢಶಾಲೆಯ ರಾಜೇಶ್.ಕೆ. ಪಡೆದರೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ತುರುವೇಕೆರೆ ತಾಲೂಕು ಬೆನಕನಕೆರೆ ಹೆಚ್ ಪಿಎಸ್ ನ ಸಿಂಚನ, ದ್ವಿತೀಯ ಬಹುಮಾನವನ್ನು ತುಮಕೂರಿನ ಚೈತನ್ಯ ಟೆಕ್ನೋ ಶಾಲೆಯ ಗಗನ.ಎ.ಆರ್, ಮೂರನೇ ಬಹುಮಾನವನ್ನು ಸತ್ಯಮಂಗಲದ ಜಿಹೆಚ್ ಪಿಎಸ್ ನ ರೇಖಾ ಪಡೆದಿದ್ದಾರೆ.
Comments are closed.