ತುಮಕೂರು: ಸರಕಾರೀ ಹುದ್ದೆಗಳಲ್ಲಿ ಅತ್ಯುನ್ನತವೆನಿಸಿದ ಐಎಎಸ್, ಐಪಿಎಸ್ ಮೊದಲಾದ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳು ಆಸಕ್ತರಾಗಬೇಕು, ನೋಟ ವಿಸ್ತೃತವಾದಷ್ಟೂ ಅವಕಾಶಗಳು ಗೋಚರಿಸುತ್ತವೆ, ನಿರಂತರವಾದ ಓದು, ಅವಿರತ ಪರಿಶ್ರಮ, ಸಾಧನೆಯ ಗುರಿ ಹೊಂದಿರುವಂಥ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ವಿದ್ಯಾನಿಧಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಐಎಎಸ್ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ವಕ್ತಾರರಾಗಿ ಮಾತನಾಡಿದ ಇನ್ ಸೈಟ್ಸ್ ಐಎಎಸ್ ಅಕಾಡೆಮಿ ಬೆಂಗಳೂರಿನ ಸಂಸ್ಥಾಪಕ ನಿರ್ದೇಶಕ ವಿನಯ್ ಕುಮಾರ್.ಜಿ.ಬಿ. ಮಾತನಾಡಿ, ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಚಿಂತನಾ ಕೌಶಲ್ಯ ಬೆಳೆಸಿಕೊಳ್ಳಬೇಕು, ವೈಜ್ಞಾನಿಕ ಮನೋಭಾವ ರೂಢಿಸಿಕೊಂಡು ಪ್ರಶ್ನೆ ಕೇಳುವುದನ್ನು ಕಲಿಯಬೇಕು, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾದರೆ ತರ್ಕಬದ್ಧವಾಗಿ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಸಾಮಾಜಿಕ ಜಾಲತಾಣಗಳು ಮಕ್ಕಳಲ್ಲಿನ ಸೃಜನಶೀಲತೆಯನ್ನು ಕಮರಿಸುತ್ತಿವೆ. ಪುಸ್ತಕಗಳನ್ನು ಓದುವುದರಿಂದ ದೊರೆತ ಜ್ಞಾನವನ್ನು ಗೂಗಲ್ ನೀಡಲು ಸಾಧ್ಯವಿಲ್ಲ ಎಂಬುದರ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ರಾಜ್ಯಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಮಧುಕರ್.ಟಿ.ಎನ್. ಮಾತನಾಡಿ ಲೋಕಸೇವಾ ಆಯೋಗದ ಪರೀಕ್ಷೆಗಳೆಂದರೆ ಕಠಿಣವೆಂಬ ಭಾವನೆ ನಮ್ಮಲ್ಲಿದೆ, ಅದನ್ನು ತೊಡೆದು ಹಾಕಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಪಣತೊಡಿ, ಪ್ರಾಮಾಣಿಕ ಪರಿಶ್ರಮಕ್ಕೆ ಸಲ್ಲಬೇಕಾದ ಪ್ರತಿಫಲ ಖಂಡಿತಾ ದೊರಕುತ್ತದೆ ಎಂದರು.
ಉಪನ್ಯಾಸಕಿ ಹೇಮಲತಾ.ಎಂ.ಎಸ್, ವಿನಯ್ ಕುಮಾರ್.ಜಿ.ಬಿ, ಸಹನಾ ಇತರರು ಭಾಗವಹಿಸಿದ್ದರು.
Comments are closed.