ತುಮಕೂರು: ತುಮಕೂರು ತಾಲ್ಲೂಕು ಪಾಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆಯಿಂದ ಮಗು ಹಸುಗೂಸು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಮೂಢ ನಂಬಿಕೆ ಸುದ್ದಿ ಹೊರಬಿದ್ದಿದೆ. ಗುಬ್ಬಿ ತಾಲ್ಲೂಕಿನಲ್ಲಿ ಊರಿನಾಚೆ ಗುಡಿಸಲ್ಲಿ ಇದ್ದ ತಾಯಿ ಮಗುವನ್ನು ನ್ಯಾಯಾಧೀಶರು ರಕ್ಷಿಸಿ ಮನೆಗೆ ಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಜಿಲ್ಲೆಯ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಹುಂಡಿ ಅವರು ಗುಬ್ಬಿ ತಾಲೂಕಿನ ಹಲವು ಕಾಡುಗೊಲ್ಲ ಗ್ರಾಮಗಳಿಗೆ ತೆರಳಿ ಮನೆಯಿಂದ ಹೊರಗಿಟ್ಟಿರುವ ಬಾಣಂತಿ ಹಾಗೂ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ದಿಢೀರ್ ದಾಳಿ ನಡೆಸುತ್ತಿದ್ದಾರೆ.
ಗುರುವಾರ ಸಹ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಗೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನ ಕಾಪಾಡಿದ್ದಾರೆ, ಖುದ್ದು ಅವರೇ ಮಗುವನ್ನು ಎತ್ತಿಕೊಂಡು ಹೋಗಿ ಬಾಣಂತಿ ಹಾಗೂ ಮಗುವನ್ನು ಮನೆಗೆ ಬಿಟ್ಟು ಬಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಾಣಿಗಳಿಗೂ ಯೋಗ್ಯವಲ್ಲದ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನ ಇರಿಸಿದ್ದು ಅಕ್ಷಮ್ಯ, ಇದು ಖಂಡಿತವಾಗಿಯೂ ಮಾನವೀಯತೆ ಅಲ್ಲ ಎಂದು ಗ್ರಾಮಸ್ಥರಿಗೆ ಹಾಗೂ ಮುಖಂಡರಿಗೆ ಎಚ್ಚರಿಕೆ ನೀಡಿ, ಇದು ಹೀಗೆ ಮುಂದುವರೆದರೆ ಕಾನೂನು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಗೊಲ್ಲರಹಟ್ಟಿಗಳಲ್ಲಿ ಜನರು ಇನ್ನೂ ಮೂಢನಂಬಿಕೆ ಇಟ್ಟುಕೊಂಡು ಊರಿನ ಹೊರಗೆ ಗುಡಿಸಲಲ್ಲಿ ಬಾಣಂತಿ ಮಗುವನ್ನು ಇಡುವುದು ನಿಜಕ್ಕೂ ವಿಪರ್ಯಾಸ, ಆಧುನಿಕ ಜಗತ್ತಿನಲ್ಲಿ ಕುಟುಂಬಗಳು ಅಭಿವೃದ್ಧಿ ಹೊಂದುವುದು, ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಾಕುವುದನ್ನು ನೋಡಿದ್ದೇವೆ, ಆದರೆ ಈ ರೀತಿ ಗುಡಿಸಲಿಗೆ ಮೊರೆ ಹೋಗುವುದು ಸಹಿಸಲು ಆಗದ ವಿಚಾರ, ಇನ್ನಾದರೂ ಹಟ್ಟಿಗಳ ಮುಖಂಡರು ಎಚ್ಚೆತ್ತುಕೊಳ್ಳಬೇಕು, ಇಲ್ಲವಾದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇಲಾಖೆ, ಕಾನೂನು ಇಲಾಖೆ ಹಾಗೂ ಇನ್ನಿತರ ಅಧಿಕಾರಿಗಳು ಈ ವೇಳೆ ಹಾಜರಿದ್ದರು.
Comments are closed.