ಸಾರಿಗೆ ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ

443

Get real time updates directly on you device, subscribe now.

ಕುಣಿಗಲ್: ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಪ್ರಯಾಣಿಕರು, ಬ್ಯಾಂಕ್ ನೌಕರರು, ಸರ್ಕಾರಿ ನೌಕರರು, ಪಿಯು, ಪದವಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಮಂಗಳವಾರ ಮುಷ್ಕರ ನಡೆಸುವುದು ಖಚಿತವಾಗುತ್ತಿದ್ದಂತೆ ಮಂಗಳವಾರ ಸಂಜೆಯಿಂದಲೆ ನೌಕರರು ಬಸ್ ಘಟಕದ ಕಡೆ ಸುಳಿಯದ ಕಾರಣ ಸಂಜೆ ಹೊರಡಬೇಕಿದ್ದು ಬಸ್‌ಗಳ ಮಾರ್ಗ ರದ್ದಾಗಿ ರಾತ್ರಿಯಿಂದಲೆ ಪ್ರಯಾಣಿಕರು ಪರದಾಡುವಂತಾಯಿತು. ಬುಧವಾರ ಬೆಳಗ್ಗೆ ಯಾವುದೇ ಸಾರಿಗೆ ಬಸ್ ರಸ್ತೆಗಿಳಿಯದೆ ಕಾರಣ ತುಮಕೂರು, ಬೆಂಗಳೂರು ಇತರೆಡೆಯಿಂದ ಪಟ್ಟಣಕ್ಕೆ ಹೋಗಿಬರುವ ಬ್ಯಾಂಕ್ ನೌಕರರು, ವಿವಿಧ ಇಲಾಖೆ ಸರ್ಕಾರಿ ನೌಕರರು ಪರದಾಡುವಂತಾಯಿತು.

ಸಾರಿಗೆ ಸಂಸ್ಥೆ ಬಸ್ ಸಂಚರಿಸುವ ಸರ್ಕಾರಿ, ಖಾಸಗಿ ನಿಲ್ದಾಣಗಳಿಂದ ಖಾಸಗಿ ಬಸ್, ವಾಹನಗಳು ಪ್ರಯಾಣಿಕರಿಗೆ ಸೇವೆ ನೀಡಲು ಮುಂದಾದವು. ಮ್ಯಾಕ್ಸಿಕ್ಯಾಬ್, ಸುಮೋ, ಕಾರುಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಕೇಳಿದ್ದರಿಂದ ವಾಗ್ವಾದ ನಡೆದು ಪೊಲೀಸರಿಗೆ ಮಾಹಿತಿ ನೀಡುವ ಎಚ್ಚರಿಕೆ ನೀಡಿದ ಮೇರೆಗೆ ನಿಗದಿತ ಶುಲ್ಕ ಪಡೆದರು. ಕುಣಿಗಲ್ ಸಾರಿಗೆ ಸಂಸ್ಥೆ ಘಟಕದಲ್ಲಿ ಇಲಾಖೆಯ ಮೂಲಗಳ ಪ್ರಕಾರ 81 ಮಾರ್ಗಗಗಳಿದ್ದು ಮುಷ್ಕರ ಪ್ರಯುಕ್ತ ಯಾವುದೇ ಮಾರ್ಗ ಕಾರ್ಯಾಚರನೆ ಮಾಡಿಲ್ಲ. ಘಟಕದ ಮೇಲಾಧಿಕಾರಿಗಳು ಸಿಬ್ಬಂದಿಯ ಮನ ಒಲಿಸಲು ಯತ್ನಿಸಿ ಸುಮ್ಮನಾದರು.

ಮೈಸೂರು ಕಡೆಗೆ ಅರ್ಧ ಗಂಟೆಗೊಂದು ಸಾರಿಗೆ ಸಂಸ್ಥೆ ಬಸ್ ಇದ್ದು ಮುಷ್ಕರದ ಪರಿಣಾಮ ಎರಡು ಗಂಟೆಗೊಂದು ಖಾಸಗಿ ಬಸ್ ಸಂಚಾರ ನಡೆಸಿತು, ಬೆಂಗಳೂರು ಕಡೆಗೆ ಖಾಸಗಿ ಬಸ್‌ಗಳ ಪ್ರಯಾಣಿಕರು ಬರುವರವೆಗೂ ಬಸ್‌ಗಳು ಹೊರಡದ ಕಾರಣ ಬಿರುಬಿಸಿಲಿಗೆ ಪ್ರಯಾಣಿಕರು ಹೈರಾಣಾದರು, ಪರ್ಮಿಟ್ ವಿನಾಯಿತಿ ನೀಡಿದ್ದರಿಂದ ತುಮಕೂರು ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ವಾಹನದ ಮಾಲೀಕರು ಲಾಭವಾಗುವ ಮಾರ್ಗಗಗಳ ಕಡೆ ಸಂಚಾರ ಆರಂಭಿಸಿದರು, ಗ್ರಾಮಾಂತರ ಪ್ರದೇಶದಿಂದ ಪಟ್ಟಣದ ಶಾಲಾ ಕಾಲೇಜುಗಳಿಗೆ ಪಿಯು, ಪದವಿ, ಎಎಸ್‌ಎಸ್‌ಎಲ್‌ಸಿ ತರಗತಿ ಬರುವ ವಿದ್ಯಾರ್ಥಿಗಳು ಆಟೋ, ಖಾಸಗಿ ವಾಹನಗಳ ಮೊರೆ ಹೋದರೆ ಕೆಲ ಪೋಷಕರು ಬೈಕ್‌ನಲ್ಲಿ ಮಕ್ಕಳನ್ನು ಕರೆತಂದರು. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಬಸ್ಸು ಸಂಚಾರ ಇಲ್ಲದ ಕಾರಣ ನಿಲ್ದಾಣ ಬಿಕೋ ಎನ್ನುವಂತಾಗಿದ್ದು, ಇದನ್ನು ನಂಬಿಕೊಂಡ ಕ್ಯಾಂಟೀನ್, ಮಳಿಗೆ, ಹಣ್ಣು, ಕಡಲೆಕಾಯಿ ಮಾರಾಟಗಾರರು ವ್ಯಾಪಾರ ಇಲ್ಲದೆ ಪರದಾಡುವಂತಾದರು.

Get real time updates directly on you device, subscribe now.

Comments are closed.

error: Content is protected !!