ತುಮಕೂರು:ಶಿವಶ್ರೀ ಮೀಡಿಯಾ ಪ್ರೈ. ಲಿಮಿಟೆಡ್ ಸಂಸ್ಥೆಯ ಆಶ್ರಯದಲ್ಲಿ ರಾಜ್ ನ್ಯೂಸ್ 24*7 ಸುದ್ದಿವಾಹಿನಿ ಹಾಗೂ ರಾಜ್ ಮ್ಯೂಸಿಕ್ ವತಿಯಿಂದ ಸೆಪ್ಟಂಬರ್ 11 ರಿಂದ 21ರ ವರೆಗೆ ಲೋಕ ಕಲ್ಯಾಣಾರ್ಥವಾಗಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗ ಆಯೋಜಿಸಲಾಗಿದೆ ಎಂದು ಮಹಾ ಕುಬೇರ ಯಾಗದ ಸಂಚಾಲಕ ಸೋಮಶೇಖರ್ ಗಾಂಧಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿ ನಂತರ ದೇಶದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಕುಸಿದಿದೆ, ಭಾರತದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಪ್ರಭುತ್ವಗಳಿಗೆ ಬಹುದೊಡ್ಡ ತಲೆನೋವಾಗಿ ಪರಿಣಿಸಿವೆ, ಆರ್ಥಿಕ ಸಮಸ್ಯೆ ಸರಿಪಡಿಸಲು ನಾಲ್ಕು ಯುಗಗಳಲ್ಲಿಯೂ ಲಕ್ಷ್ಮಿಯನ್ನು ಸಂತೃಪ್ತಿ ಪಡಿಸಲು ಕುಬೇರನನ್ನು ಪೂಜಿಸಿರುವುದನ್ನು ಕಾಣಬಹುದಾಗಿದೆ, ಹಾಗಾಗಿ ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯಿಂದ ಹೊರಬರಲು, ಲೋಕದ ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಅಖಿಲ ಭಾರತ ಮಹಾಕುಬೇರ ಯಾಗ ಆಯೋಜಿಸಲಾಗಿದೆ ಎಂದರು.
ಸೆಪ್ಟಂಬರ್ 11 ರಿಂದ 21ರ ವರೆಗೆ ನಡೆಯುವ ಅಖಿಲ ಭಾರತ ಕುಬೇರ ಮಹಾಯಾಗದ ಸಿದ್ಧತೆ ಸುಮಾರು 60 ಎಕರೆ ಜಾಗದಲ್ಲಿ ಆರಂಭವಾಗಿದ್ದು, ಸಿದ್ದಗಂಗೆಯ ಶ್ರೀಗಳು ಸೇರಿದಂತೆ ಹಲವಾರು ಸಾಧು, ಸಂತರು, ಋಷಿ, ಮುನಿಗಳು, ಯತಿಗಳು ಸಮಯಾವಕಾಶ ಮಾಡಿಕೊಂಡು ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ, ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ, ಮಹರ್ಷಿ ಡಾ.ಆನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ಕುಬೇರ ಮಹಾಯಾಗ ನಡೆಯಲಿದೆ ಎಂದು ಸೋಮಶೇಖರ ಗಾಂಧಿ ತಿಳಿಸಿದರು.
ಸಂಪೂರ್ಣ ಮಹಾ ಕುಬೇರ ಯಾಗದಲ್ಲಿ ಮಹಾಕುಂಡದ ಸಮೇತ 108 ಹೋಮ ಕುಂಡ, 501 ಆಗಮಿಕರು, 501 ಕೇರಳದ ತಂತ್ರಿಗಳ ಸಾರಥ್ಯದಲ್ಲಿ ಋಗ್ವೇಧ, ಯುರ್ಜುವೇದ, ಸಾಮವೇದಗಳ ಮಂತ್ರ ಘೋಷಣೆಯೊಂದಿಗೆ 11 ದಿನಗಳ ಕಾಲ ಈ ಮಹಾ ಕೈಂಕರ್ಯ ನಡೆಯಲಿದೆ, ದೇಶದ ನಾನಾ ಭಾಗಗಳಿಂದ ಮಠಾಧೀಶರು, ಧಾರ್ಮಿಕ ಮುಖಂಡರು, ಹಿಮಾಲಯದ 250ಕ್ಕು ಹೆಚ್ಚು ನಾಗಸಾಧುಗಳು, ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಇವರಿಗೆ ಸುಮಾರು 300ಕ್ಕೂ ಹೆಚ್ಚು ನುರಿತ ಬಾಣಸಿಗರಿಂದ 50 ಸಾವಿರ ಭಕ್ತರಿಗೆ ಅನ್ನದಾಸೋಹ ನಡೆಯಲಿದೆ, ಸೆಪ್ಟಂಬರ್ 21 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜಿ ಭಾಗವಹಿಸಲಿದ್ದಾರೆ ಎಂದರು.
ಸೆಪ್ಟಂಬರ್ 11 ರಿಂದ 21ರವರೆಗೆ ನಡೆಯುವ ಅಖಿಲ ಭಾರತ ಸಂಪೂರ್ಣ ಕುಬೇರ ಮಹಾ ಯಾಗದಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶವಿದ್ದು, ಪ್ಲಾಟಿನಮ್, ಡೈಮಂಡ್, ಗೋಲ್ಡ್, ಸಿಲ್ವರ್, ಬ್ರಾಂಜ್ ಮತ್ತು ರಾಶಿ ಸಂಕಲ್ಪ ಸೇವೆಗಳನ್ನು ಮಾಡಬಹುದಾಗಿದೆ, ಪ್ಲಾಟಿನಂ ಸೇವೆಗೆ 1 ಲಕ್ಷ, ಡೈಮಂಡ್ ಸೇವೆಗೆ 50 ಸಾವಿರ, ಗೋಲ್ಡ್ ಸೇವೆಗೆ 25 ಸಾವಿರ, ಸಿಲ್ವರ್ ಸೇವೆಗೆ 10 ಸಾವಿರ, ಬ್ರಾಂಜ್ ಸೇವೆಗೆ 5 ಸಾವಿರ ಮತ್ತು ರಾಶಿಸಂಕಲ್ಪ ಸೇವೆಗೆ ಒಂದು ಸಾವಿರ ರೂ. ನಿಗದಿ ಪಡಿಸಲಾಗಿದೆ, ಸೇವೆಗೆ ನಿಗದಿ ಪಡಿಸಿದ ಶುಲ್ಕದೊಂದಿಗೆ ಆನ್ ಲೈನ್ ಮೂಲಕ, ಇಲ್ಲವೇ ನೇರವಾಗಿಯೂ ನೋಂದಾಯಿಸಬಹುದಾಗಿದೆ ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಿವಶ್ರೀ ಮೀಡಿಯಾ ಪ್ರವೈಟ್ ಲಿಮಿಟೆಡ್ನ ತೇಜಸ್, ಓಮೇಶ್ ಮೂರ್ತಿ, ಮಹೇಶ್ಮೂರ್ತಿ, ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ರಾಜ್ ನ್ಯೂಸ್ ಜಿಲ್ಲಾ ವರದಿಗಾರ ಮಹೇಶ್ ಮತ್ತಿತರರು ಇದ್ದರು.
Comments are closed.