ಅರಿವು ಕಾರ್ಯಕ್ರಮದಲ್ಲೇ ಕೃಷ್ಣ ಕುಟೀರಕ್ಕೆ ಬೇಡಿಕೆ

395

Get real time updates directly on you device, subscribe now.


ಕುಣಿಗಲ್: ಕಾಡುಗೊಲ್ಲರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲೆ ಕಾಡುಗೊಲ್ಲರಿಂದ ಕೃಷ್ಣ ಕುಟೀರಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ.

ತಾಲೂಕಿನ ಯಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನ ಹಟ್ಟಿ ಗ್ರಾಮದ ಹಟ್ಟಿ ಲಕ್ಕಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಕಾನೂನು ಅರಿವು ಕಾರ್ಯಗಾರದಲ್ಲಿ ಜನಾಂಗದ ಮುಖಂಡರಾದ ತಿಮ್ಮಪ್ಪ, ನಮ್ಮ ಜನಾಂಗದ ಸಂಪ್ರದಾಯದಂತೆ ಬಾಣಂತಿಯರ ಹಾರೈಕೆ ಮತ್ತು ಶುಶ್ರುಷೆಗಾಗಿ ಸರ್ಕಾರ ಕೃಷ್ಣ ಕುಟೀರ ಹೆಸರಿನಲ್ಲಿ ಸವಲತ್ತು ಒದಗಿಸಲು ಬೇಡಿಕೆ ಇಟ್ಟರು.

ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಹಾಗೂ ಯಡಿಯೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಕಾಡುಗೊಲ್ಲ ಜನಾಂಗದ ಕೋಡಿಪಾಳ್ಯ ಜಲದಿಗೆರೆ ಗೊಲ್ಲರಹಟ್ಟಿಗಳಲ್ಲಿ ಕಾನೂನು ಅರಿವು ಮತ್ತು ಆರೋಗ್ಯದ ಅರಿವು ಕಾರ್ಯಗಾರ ನಡೆಯಿತು.

ಕಾರ್ಯಗಾರದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಯೋಜನೆಗಳ ಸವಲತ್ತುಗಳ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಹಾಸ ಮನವರಿಕೆ ಮಾಡಿ ಮಾಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಮರಿಯಪ್ಪ, ಕಾಡುಗೊಲ್ಲರ ಹಟ್ಟಿಗಳಲ್ಲಿ ಸಂಪ್ರದಾಯ ಆಚರಣೆ ನೆಪದಲ್ಲಿ ಅಮಾನವೀಯ ಆಚರಣೆ ಕೈಬಿಡಬೇಕು, ಆಚರಣೆಗಳು ಆರೋಗ್ಯಕ್ಕೆ ಪೂರಕ ವಾಗಬೇಕೆ ಹೊರತು ಮಾರಕವಾಗಬಾರದು ಎಂದರು.

ಇಲಾಖೆಯಿಂದ ಆರೋಗ್ಯ ಅಧಿಕಾರಿಗಳು ಬಾಣಂತಿಯರ ಮತ್ತು ಮಕ್ಕಳ ಹಾರೈಕೆಯಲ್ಲಿ ಮೂಢನಂಬಿಕೆಯ ಆಚರಣೆಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ, ತಪಾಸಣೆಗಾಗಿ ಆರೋಗ್ಯ ಕೇಂದ್ರಗಳನ್ನು ಭೇಟಿ ಮಾಡಲು ತಿಳಿಸಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದು, ಅರಿವು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಯಡಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಗಮ್ಮ ಹಾಗೂ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!