ಹುಳಿಯಾರು: ಪತ್ನಿ ಅಂತ್ಯಕ್ರಿಯೆ ನೆರವೇರಿಸಿ ಬಂದು ಪತಿಯೂ ಸಾವನ್ನಪ್ಪುವ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿರುವ ಘಟನೆ ಹುಳಿಯಾರು ಸಮೀಪದ ಕೆ.ಸಿ.ಪಾಳ್ಯದಲ್ಲಿ ಭಾನುವಾರ ಜರುಗಿದೆ.
ಇಲ್ಲಿನ ಜನಪದ ಕಲಾವಿದೆ ಹನುಮಕ್ಕ (70) ಹಾಗೂ ಬೀರದೇವರ ದೇವಸ್ಥಾನದ ಗೌಡರಾಗಿದ್ದ ರೇವೇಗೌಡರು (85) ಸಾವಿನಲ್ಲೂ ಒಂದಾದ ದಂಪತಿ.
ಹನುಮಕ್ಕ ಎಂದಿನಂತೆ ಮನೆಕೆಲಸ ಮುಗಿಸಿ ಮನೆಯ ಮುಂದಿನ ಜಗಲಿ ಮೇಲೆ ಕುಳಿತಿದ್ದಾಗ ಇದ್ದಕ್ಕಿದಂತೆ ಕುಸಿದು ಬಿದ್ದು ಶನಿವಾರ ಸಂಜೆ ಸಾವನ್ನಪ್ಪಿದ್ದಾರೆ, ಕೆ.ಸಿ.ಪಾಳ್ಯದಲ್ಲಿ ನಾಮಕರಣ, ಮದುವೆ, ಹೊಸಗೆ ಸೇರಿದಂತೆ ಯಾವುದೇ ಶುಭ ಕಾರ್ಯಗಳಲ್ಲಿ ಸೋಬಾನೆ ಪದ, ಜನಪದ ಹಾಡು ಹಾಗೂ ದೇವರ ಜಾತ್ರೆ, ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಗಳಲ್ಲಿ ದೇವರ ಪದ ಹಾಡುತ್ತಿದ್ದರು.
ಊರಿನ ಜನಪದ ಹಕ್ಕಿ ನಿಧನರಾದ ಹಿನ್ನೆಲೆಯಲ್ಲಿ ಇಡೀ ಊರಿಗೆ ಊರೆ ಕಂಬನಿ ಮಿಡಿದು ಭಾನುವಾರ ಮಧ್ಯಾಹ್ನ ಊರಿಗೆ ಊರೆ ಮುಂದೆ ನಿಂತು ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಮೊದಲೇ ಅನಾರೋಗ್ಯಕ್ಕೀಡಾಗಿದ್ದ ಪತಿ ರೇವೇಗೌಡರು ಪತ್ನಿ ಹನುಮಕ್ಕನ ಅಂತ್ಯಕ್ರಿಯೆ ನೆರವೇರಿಸಿ ಬಂದು ಭಾನುವಾರ ಸಂಜೆ ಕೊನೆಯುಸಿರೆಳೆದಿದ್ದಾರೆ, 5 ದಶಕಗಳ ಕಾಲ ಜೋಡೆತ್ತಿನಂತೆ ಬದುಕಿನ ಬಂಡಿ ಎಳೆದಿದ್ದ ಜೋಡಿ ಸಾವಿನಲ್ಲೂ ಜತೆಯಾಗಿ ಸ್ವರ್ಗಸ್ಥರಾಗಿದ್ದಾರೆ, ಪತ್ನಿಯ ಅಂತ್ಯಕ್ರಿಯೆ ಮಾಡಿದ್ದ ಪಕ್ಕದಲ್ಲೇ ರೇವೇಗೌಡರ ಅಂತ್ಯಕ್ರಿಯೆಯನ್ನು ಸೋಮವಾರ ನೆರವೇರಿಸಿದ್ದಾರೆ. ಮೃತರಿಗೆ ಒಂದು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ಐವರು ಮೊಮ್ಮಕ್ಕಳು ಇದ್ದಾರೆ.
Comments are closed.