ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ: ಸೂರ್ಯಕಲಾ

267

Get real time updates directly on you device, subscribe now.


ತುಮಕೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಶಿರಾಗೇಟ್ ನ ಉತ್ತರ ಬಡಾವಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023- 24ನೇ ಸಾಲಿನ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ಅದೇ ರೀತಿ ವಿದ್ಯಾರ್ಥಿಯಲ್ಲಿರುವ ಸುಪ್ತ ಪ್ರತಿಭೆ ಗುರುತಿಸಿ ಅದನ್ನು ಬೆಳಕಿಗೆ ತರುವುದು ಅಷ್ಟೇ ಮುಖ್ಯವಾದ ಕೆಲಸವಾಗಿದೆ. ಇದಕ್ಕೆ ಪ್ರತಿಭಾ ಕಾರಂಜಿ ಒಂದು ಒಳ್ಳೆಯ ವೇದಿಕೆಯಾಗಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ಶಾಲಾ ಶಿಕ್ಷಣ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಶಾಲಾ ಶಿಕ್ಷಕರು ತಮ್ಮ ದೈನಂದಿನ ಪಾಠ, ಪ್ರವಚನದ ಜೊತೆ ಜೊತೆಗೆ ಮಕ್ಕಳಲ್ಲಿನ ಆಸಕ್ತಿ ಗಮನಿಸಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡಾ ಮನೋಭಾವನೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು, ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಅಷ್ಟೇ ಮಾಡದೆ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬಹುದು, ಅಲ್ಲದೆ ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಗುಣಗಳನ್ನು ಬೆಳೆಸಲು ಸಹಕಾರಿಯಾಗಲಿದೆ, ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು, ಇಲ್ಲಿ ಪ್ರದರ್ಶನ ನೀಡಿದ ಮಕ್ಕಳು ಮುಂದಿನ ಹಂತವಾದ ತಾಲೂಕು, ಜಿಲ್ಲಾ, ವಲಯ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರಿಯ ಮಟ್ಟಕ್ಕೆ ಹೋಗುವಂತೆ ಪ್ರೇರಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಬಡಾವಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಾಗೇಟ್ ಇದರ ಎಸ್ ಡಿಎಂಸಿ ಅಧ್ಯಕ್ಷ ಓಬಳಯ್ಯ ಮಾತನಾಡಿ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಿರುವುದು ನಮಗೆ ಸಂತೋಷ ತಂದಿದೆ, ಪ್ರತಿಭಾ ಪ್ರದರ್ಶನಕ್ಕೆ ಬಂದಿರುವ ಎಲ್ಲಾ ಮಕ್ಕಳು, ತೀರ್ಪುಗಾರರಿಗೆ ಊಟದ ವ್ಯವಸ್ಥೆಯನ್ನು ಶಾಲೆಯ ವತಿಯಿಂದ ಮಾಡಿದ್ದೇವೆ, ಇಲ್ಲಿ ಪ್ರದರ್ಶನ ನೀಡುವ ಮಕ್ಕಳು ರಾಷ್ಟ್ರಮಟ್ಟದ ವರೆಗೆ ಹೋಗಿ ರಾಜ್ಯಕ್ಕೆ ಕೀರ್ತಿ ತರಲೆಂಬುದು ನಮ್ಮ ಹಾರೈಕೆ ಎಂದರು.

ಕ್ಲಸ್ಟರ್ ಮಟ್ಟದ 2023-24ನೇ ಸಾಲಿನ ಪ್ರತಿಭಾ ಕಾರಂಜಿ ಕುರಿತಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಲೆಯ ಪದವೀಧರ ಮುಖ್ಯಶಿಕ್ಷಕ ಡಿ.ಎಸ್.ಶಿವಸ್ವಾಮಿ, ಎರಡು ಹಂತದ ಸ್ಪರ್ಧೆಗಳಿಂದ 1-5 ಮತ್ತು 7 ರಿಂದ 12ನೇ ತರಗತಿ ವರೆಗೆ ಎರಡು ವಿಭಾಗಗಳಲ್ಲಿ ನಡೆಯಲಿದೆ, ನಮ್ಮ ಶಾಲೆಯಲ್ಲಿ 1-5ತರಗತಿ ವರೆಗೆ ನಡೆಯುತ್ತಿದ್ದು, ಮಕ್ಕಳಲ್ಲಿರುವ ಪ್ರತಿಭೆಗಳಾದ ಕಂಠಪಾಠ, ಗಾಯನ, ಸಂಗೀತ, ಚಿತ್ರಕಲೆ, ಮಣ್ಣಿನ ಕಲೆ ಮತ್ತಿತರರ ಸಾಂಸ್ಕೃತಿಕ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶವಿದೆ, ಈ ಸ್ಪರ್ಧೆಯಲ್ಲಿ 23 ಸರಕಾರಿ, 10 ಅನುದಾನಿತ, 6 ಖಾಸಗಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ, ನುರಿತ ತೀರ್ಪುಗಾರರು ಮಕ್ಕಳ ಪ್ರತಿಭೆ ಪರಿಶೀಲಿಸಿ ಅಂಕಗಳನ್ನು ನೀಡಲಿದ್ದಾರೆ, ಇಲ್ಲಿ ವಿಜೇತರಾದ ಮಕ್ಕಳು ತಾಲೂಕು ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದಾರೆ ಎಂದರು.

ಎಸ್ ಡಿಎಂಸಿ ಅಧ್ಯಕ್ಷ ಟಿ.ಓಬಳಯ್ಯ, ಹಿರಿಯ ಮುಖ್ಯ ಶಿಕ್ಷಕ ಡಿ.ಎಸ್.ಶಿವಸ್ವಾಮಿ, ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಮಂಜಣ್ಣ ಮತ್ತಿತರರು ಇದ್ದರು.

ನಗರದ ವಿವಿಧ ಶಾಲೆಗಳಿಂದ ಆಗಮಿಸಿದ್ದ ಪುಟಾಣಿ ಮಕ್ಕಳು ರಾಷ್ಟ್ರ ನಾಯಕರ ವಿವಿಧ ವೇಷಭೂಷಣ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ನಾಯಕರ ಧಿರಿಸು ತೊಟ್ಟು ಪ್ರತಿಭಾ ಕಾರಂಜಿ ವೇದಿಕೆಯಲ್ಲಿ ಪ್ರದರ್ಶನ ನೀಡಿದರು.

Get real time updates directly on you device, subscribe now.

Comments are closed.

error: Content is protected !!