ಮಧುಗಿರಿ: ಪ್ರಕರಣವೊಂದರಲ್ಲಿ ವಿಚಾರಣಾಧಿನ ಖೈದಿಯಾಗಿ ಜೈಲಿನಲ್ಲಿದ್ದ ವ್ಯಕ್ತಿಯನ್ನು ಮಾತನಾಡಿಸಲು 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟು 5,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಜೈಲು ಅಧೀಕ್ಷಕ ಸಿಕ್ಕಿ ಬಿದ್ದಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಮಧುಗಿರಿ ಜೈಲು ಅಧೀಕ್ಷಕ ದೇವೇಂದ್ರ ಆರ್ ಕೋಣಿ ಎಂಬುವರೇ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧೀಕ್ಷಕ.
ಶಿರಾ ವಾಸಿ ಅರ್ಬಾಜ್ ಎಂಬಾತ ಐಪಿಸಿ 307 ರಿತ್ಯ ದಾಖಲಾದ ಪ್ರಕರಣದಲ್ಲಿ ಮಧುಗಿರಿ ಜೈಲಿನಲ್ಲಿದ್ದರು, ಆಗಿಂದಾಗ್ಗೆ ಅವರನ್ನು ನೋಡಲು ಮನೆಯವರು ಬರುತ್ತಿದ್ದರು, ಬಂದಾಗಲೆಲ್ಲ ರೂ.1500 ರಿಂದ 2,000 ಲಂಚವನ್ನು ಅಧೀಕ್ಷಕರು ಪೀಕುತ್ತಿದ್ದರು ಎನ್ನಲಾಗಿದೆ, ಲಂಚ ಕೊಡದಿದ್ದರೆ ಖೈದಿಯನ್ನು ತುಮಕೂರು ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು ಎನ್ನಲಾಗಿದೆ.
ಖೈದಿಯನ್ನು ಭೇಟಿ ಮಾಡಲು ಬಂದ ಸಂಬಂಧಿಕರಿಂದ ಎಂದಿನಂತೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ, ಲೋಕಾಯುಕ್ತ ಎಸ್ ಪಿ ವಲಿ ಭಾಷಾ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್, ಹರೀಶ್, ಇನ್ ಸ್ಪೆಕ್ಟರ್ ಗಳಾದ ಸತ್ಯನಾರಾಯಣ, ಸಲೀಂ, ರಾಮರೆಡ್ಡಿ, ಶಿವರುದ್ರಪ್ಪ ಮೇಟಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
Comments are closed.