ಇ-ಖಾತೆ ಮಾಡಿಕೊಡಲು ಸತಾಯಿಸಿದ್ರೆ ಕ್ರಮ: ಸಂಸದ

255

Get real time updates directly on you device, subscribe now.


ಕುಣಿಗಲ್: ಪುರಸಭೆ ಸೇರಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಇ-ಖಾತೆ ಮಾಡಿಕೊಡಲು ವಿನಾಕಾರಣ ಸತಯಿಸುವುದು, ಹಣ ಕೇಳುವುದು ಕಂಡುಬಂದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಎಚ್ಚರಿಕೆ ನೀಡಿದರು.

ಮಂಗಳವಾರ ತಾಪಂ ಸಭಾಂಗಣದಲ್ಲಿ ತಾಲೂಕು ಪ್ರಗತಿ ಪರಿಶೀಲನಾಸಭೆ ನಡೆಸಿ ಮಾತನಾಡಿ, ಈಗಾಗಲೆ ಗ್ರಾಮಗಳ ವ್ಯಾಪ್ತಿಯಲ್ಲಿ ಕಂದಾಯ ಗ್ರಾಮ ಗುರುತಿಸಿ ಅಗತ್ಯ ಪ್ರಕ್ರಿಯೆ ನಡೆಸಲಾಗಿದೆ, ಆಯಾ ಗ್ರಾಪಂ ಪಿಡಿಒಗಳು ಆಯಾ ಗ್ರಾಮದ ವಸತಿ, ನಿವೇಶನಕ್ಕೆ ಸಂಬಂಧಿಸಿದಂತೆ, ಪುರಸಭೆಯಲ್ಲಿ ಆನ್ ಲೈನ್ ವ್ಯವಸ್ಥೆ ಜಾರಿಗೊಳಿಸಿದ್ದು, ಇದರಡಿಯಲ್ಲಿ ಇ-ಖಾತೆ ಪ್ರಕ್ರಿಯೆ ಶೀಘ್ರವಾಗಿ ನಡೆಸಿ ಜನತೆಗೆ ತೊಂದರೆ ಮಾಡಬಾರದು, ಪುರಸಭೆಯಲ್ಲಿ ಇ-ಖಾತೆ ಮಾಡಲು ದಂಧೆ ನಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಲೇಔಟ್ ಗಳಲ್ಲಿ ಸಿಎ ಸೈಟ್ ಗಳು ಮಾಯವಾಗುತ್ತಿರುವ ಬಗ್ಗೆ ವರದಿ ನೀಡುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ತಾವು ಭೇಟಿ ನೀಡಿದಾಗ ಯಾವುದೇ ಹಣ ಕೇಳಿದ, ನಿರ್ಲಕ್ಷ್ಯ ಮಾಡಿದ ದೂರು ಕೇಳಿ ಬಂದಲ್ಲಿ ಮುಲಾಜಿಲ್ಲದೆ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶದಾದ್ಯಂತ ಮನ್ನಣೆ ಗಳಿಸಿದ ಯೋಜನೆಯಾಗಿವೆ, ಆಯಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಪ್ರಾಮಾಣಿಕವಾಗಿ ತಲುಪಿಸಬೇಕು, ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು ಎಂದರು.

ನರೇಗಾ ಯೋಜನೆಯಡಿಯಲ್ಲಿ ನಿಗದಿತ ಪ್ರಗತಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಪ್ರತಿ ಗ್ರಾಪಂಗೆ ವೈಯಕ್ತಿಕ ಕಾಮಗಾರಿಗೆ ಹೆಚ್ಚು ಒತ್ತು ನೀಡಬೇಕು, ಮೆಟಿರಿಯಲ್ ಆಧಾರಿತ ಕಾಮಗಾರಿ ಬೇಡ, ತಾಲೂಕಿನಲ್ಲಿ ಕೃಷಿಹೊಂಡ ಯೋಜನೆಯಲ್ಲಿ ಮಾಡಿರುವ ಅಕ್ರಮಗಳು ವ್ಯಾಪಕವಾಗಿರುವ ಕಾರಣ ಈ ಬಾರಿ ಕೃಷಿ ಹೊಂಡ ಯೋಜನೆ ಕೈ ಬಿಟ್ಟು, ರೈತರ ಜಮೀನಿನಲ್ಲಿ ಬದು ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗೆ ಹೆಚ್ಚು ಒತ್ತು ನೀಡಬೇಕು, ಮುಂದಿನ ಎರಡು ತಿಂಗಳೊಳಗೆ ನರೇಗಾ ಯೋಜನೆಯಡಿಯಲ್ಲಿ ಗರಿಷ್ಟ ಪ್ರಗತಿ ಸಾಧಿಸಬೇಕು.

ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಸರ್ಕಾರ ಚಿಂತನೆ ನಡೆಸಿದ್ದು ಹೋಬಳಿಗಳಿಗೆ ಬರುವ ಶಾಲೆಗಳು, ಶಿಕ್ಷಕರು, ವಿದ್ಯಾರ್ಥಿಗಳ ಸಂಖ್ಯೆಯ ಸಮಗ್ರ ಚಿತ್ರಣವನ್ನು ಆಯಾ ಹೋಬಳಿಗೆ ತಕ್ಕಂತೆ ಮಾಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ, ಮುಂದಿನ ದಿನಗಳಲ್ಲಿ ಹೋಬಳಿಗೊಂದು ಶಾಲೆ ಯೋಜನೆಗೆ ಸರ್ಕಾರ ಚಿಂತನೆ ನಡೆಸಿದ್ದು ಆಯಾ ಹೋಬಳಿಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಟ್ಟುಕೊಳ್ಳಬೇಕೆಂದರು.

ಸರ್ಕಾರದ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಲೆಕ್ಕಕ್ಕೂ ಅನುದಾನ ಖರ್ಚಾಗುವ ಲೆಕ್ಕಕ್ಕೂ ತಾಳೆಯಾಗುತ್ತಿಲ್ಲ, ಇದನ್ನು ಪರಿಶೀಲಿಸಲು ಶಾಸಕರೆ ಖುದ್ದು ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ತಾಲೂಕಿನಲ್ಲಿ ವಸತಿ, ನಿವೇಶನ ಯೋಜನೆಗೆ ಸೂಕ್ತ ಭೂಮಿ ಗುರುತಿಸುವಲ್ಲಿ ಕಂದಾಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ, ತಹಶೀಲ್ದಾರ್ ಗೆ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿಯ ಒಟ್ಟಾರೆ ವಿವರಗಳ ದಾಖಲೆ ಸಿದ್ಧಪಡಿಸಿ ನೀಡುವಂತೆ ಸೂಚಿಸಿ, ಕಂದಾಯ ಇಲಾಖೆಯ ಸೇವೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ, ಅನಗತ್ಯ ವಿಳಂಬವಾಗುತ್ತಿರುವುದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತಿದೆ, ಜನರನ್ನು ಅಲೆದಾಡಿಸದೆ ಇಲಾಖೆಯ ಸೇವೆ ನೀಡುವಂತೆ ಸೂಚಿಸಿ, ತಹಶೀಲ್ದಾರ್ ಆದವರು ಕಂದಾಯ ಇಲಾಖೆಯ ಕಾರ್ಯ ವೈಖರಿ ಹಾಗೂ ನಿಯಮಗಳ ಬಗ್ಗೆ ಅರಿವು ಹೊಂದಬೇಕು, ಉಪ ವಿಭಾಗಾಧಿಕಾರಿಗಳು ಸಹ ಕಂದಾಯ ಇಲಾಖೆಯ ಬಗ್ಗೆ ಅರಿವಿಲ್ಲದಿರುವ ಬಗ್ಗೆ ದೂರುಗಳಿದ್ದು ಇದಕ್ಕೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಬೇಕು, ಅಮೃತೂರು ರಾಜಸ್ವ ನಿರೀಕ್ಷಕ ಸ್ಥಳೀಯ ವ್ಯಕ್ತಿಯಾಗಿದ್ದು ವ್ಯಾಪಕ ದೂರುಗಳಿರುವ ಕಾರಣ ಅವರನ್ನು ಬೇರೆಡೆಗೆ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆಲಜೀವನ ಮಿಷನ್ ಕೇಂದ್ರ ಸರ್ಕಾರದ ಯೋಜನೆ ಈ ಯೋಜನೆಯು ಉತ್ತರ ಭಾರತದ ಕೆಲ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿದ ಯೋಜನೆ, ಆದರೆ ನಮ್ಮ ರಾಜ್ಯದಲ್ಲಿ ಅಲ್ಲಿನ ನಿಯಮ ಅಳವಡಿಸಿ ಮಾಡುವುದರ ಬದಲು ಯೋಜನೆಯ ಕೆಲ ಅಂಶಗಳನ್ನು ಮಾರ್ಪಾಡು ಮಾಡಿ ಗ್ರಾಮಾಂತರ ಪ್ರದೇಶದ ಜನತೆಗೆ ಅನುಕೂಲ ಮಾಡಿ ಕೊಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಈ ಯೋಜನೆಯಡಿಯಲ್ಲಿ ಕಾಮಗಾರಿಗೆ ಕಳಪೆ ಸಾಮಾಗ್ರಿ ಬಳಸುತ್ತಿರುವ ವ್ಯಾಪಕ ದೂರು ಬರುತ್ತಿವೆ, ಒಂದು ವೇಳೆ ಕಳಪೆ ಸಾಮಾಗ್ರಿ ಬಳಸಿದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ ಆಗಿರುವುದರಿಂದ ಕಠಿಣ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕಿನಲ್ಲಿ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಇನ್ನು ಒಂಭತ್ತು ಸಾವಿರ ಮಂದಿ ಅರ್ಹರಿದ್ದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸದ ಬಗ್ಗೆ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಯಾ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಯೋಜನೆಯ ಬಗ್ಗೆ ಅರಿವು ಮೂಡಿಸಿ ಯೋಜನೆ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕಿನಲ್ಲಿ ವೃದ್ಧಾಪ್ಯ ವೇತನ ವಿಷಯದಲ್ಲಿ ಅಧಿಕಾರಿಗಳ ಕ್ರಮ ಅವೈಜ್ಞಾನಿಕವಾಗುತ್ತಿದೆ, ಅರ್ಹ ಫಲಾನುಭವಿಗಳು ದಾಖಲೆಗೆ ಕಚೇರಿಗೆ ಅಲೆಯುತ್ತಿರುವುದು ಬೇಸರದ ಸಂಗತಿ, ಜಲ ಜೀವನ್ ಮಿಷನ್ ತಾಲೂಕಿನಲ್ಲಿ ಪ್ರಗತಿ ಕಾಣದಿರುವುದಕ್ಕೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಭು, ಜಿಪಂ ಕಾರ್ಯದರ್ಶಿ ಆಡಳಿತ ನರಸಿಂಹ ಮೂರ್ತಿ, ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ತಾಪಂ ಇಒ ಜೋಸೆಫ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!