ತುಮಕೂರು: ಪದವಿ ಹಂತದ ಪ್ರಾಯೋಗಿಕ ಕಲಿಕೆಯ ಅನುಭವ ನವೋದ್ಯಮದಲ್ಲಿ ಯಶಸ್ಸಿನ ಮೆಟ್ಟಿಲಾಗುವುದು, ಇಂದಿನ ಸ್ಪರ್ಧಾ ಜಗತ್ತಿನ ಮಾರುಕಟ್ಟೆಗೆ ಬೇಕಾಗಿರುವುದು ನವೋದ್ಯಮಗಳು ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ಯಮಶೀಲತಾ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿ, ನಮ್ಮ ವಿವಿಯ ಎಂಬಿಎ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಯೋಜನೆಯಂತೆ ಭಾರತದ 700 ಜಿಲ್ಲೆಗಳ ವಿಭಿನ್ನ ವಾಣಿಜ್ಯೋದ್ಯಮದ ನಾಡಿಮಿಡಿತ ಅರಿತು ಉದ್ಯಮವೊಂದನ್ನು ಶುರು ಮಾಡಬೇಕು, ಇಲ್ಲಿರುವ ಪ್ರತಿಯೊಬ್ಬರೂ ಕರ್ನಾಟಕದ ಎಲ್ಲಾ ಜಿಲ್ಲೆಗಳ ಮಾರುಕಟ್ಟೆಯ ಅವಶ್ಯಕತೆಗೆ ಅನುಗುಣವಾಗಿ ನವೋದ್ಯಮ ಆರಂಭಿಸಿ ಯಶಸ್ಸಾಗಬೇಕು ಎಂದರು.
ಬೆಂಗಳೂರಿನ ಬಿಎಂಎ ಉದ್ಯಮ ಮಂಡಳಿಯ ಅಧ್ಯಕ್ಷ ಡಾ.ಮನೋಹರ್.ಸಿ. ಮಾತನಾಡಿ, ಯಾವುದೇ ಉದ್ಯಮವನ್ನು ಕ್ರಮ ಬದ್ಧವಾಗಿ ಶ್ರಮ ವಹಿಸಿ ಮಾಡಿದರೆ ಯಶಸ್ಸು ಖಂಡಿತ, ನಮ್ಮ ವಿಭಿನ್ನ ಕಲ್ಪನೆ ನವೋದ್ಯಮದಲ್ಲಿ ಹೊಸ ಆವಿಷ್ಕಾರಕ್ಕೆ ಮುನ್ನುಡಿಯಾಗಬೇಕು, ಅವಕಾಶಗಳನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಬೇಕಾದರೆ ಶ್ರದ್ಧೆ ಮುಖ್ಯ, ನಿಮ್ಮೊಳಗಿನ ಪ್ರಭೆಗೆ ಪ್ರಜ್ಞಾವಸ್ಥೆ ಕೊಡಬೇಕು ಎಂದು ತಿಳಿಸಿದರು.
ಕ್ಯೂಬೇರಾ ಇಂಟರ್ ನ್ಯಾಷನಲ್ ಸಂಸ್ಥೆಯ ಸಹ ಸಂಸ್ಥಾಪಕ ಡಾ.ಸಮರ್ಥ ರಾಘವ ನಾಗಭೂಷಣಂ ಮಾತನಾಡಿ, ಮಾರುಕಟ್ಟೆಯ ಅಧ್ಯಯನ ತುಂಬಾ ಮುಖ್ಯ, ಗ್ರಾಹಕರು ಬಯಸುವ ಗುಣಮಟ್ಟ ಮುಟ್ಟಲು ಸಂಸ್ಥೆಯು ಸಮರ್ಥವಾಗಿರಬೇಕು, ನವೋದ್ಯಮವೂ ಆರ್ಥಿಕ ಹಾಗೂ ಸಾಮಾಜಿಕ ಆಯಾಮಗಳ ಅನುಭವ ನೀಡುತ್ತದೆ ಎಂದರು.
ತುಮಕೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್ ಕೆ.ಮಾತನಾಡಿ, ಯಶಸ್ಸಿನ ಬೆನ್ನು ಹತ್ತಿರುವ ನಿಮಗೆ ಗೆಲುವು ಖಂಡಿತ, ಪ್ರಾಯೋಗಿಕವಾಗಿ ಅನುಭವ ಹೊಂದಿದವರು ಮಾರುಕಟ್ಟೆಯನ್ನು ಆಳುತ್ತಾರೆ ಎಂದು ಹೇಳಿದರು.
ಉದ್ಯಮಶೀಲತೆಯ ಕೌಶಲ ಕಲಿಯಲು ವಿದ್ಯಾರ್ಥಿಗಳೇ ಸಣ್ಣ ಬಂಡವಾಳದ ಮಳಿಗೆಗಳನ್ನು ತೆರೆದಿದ್ದರು, ಇದರಲ್ಲಿ ಆಹಾರ ಮಳಿಗೆಗಳು, ಸಿರಿಧಾನ್ಯ ಮಳಿಗೆ, ಫ್ಯಾಷನ್ ಸಂಬಂಧಿತ ಮಳಿಗೆಗಳು, ಗೃಹ ಅಲಂಕಾರ ಮಳಿಗೆಗಳು ಇದ್ದವು.
ಹಿರಿಯ ಪ್ರಾಧ್ಯಾಪಕ ಪ್ರೊ.ಮೋಹನ್ ರಾಮ್, ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ನೂರ್ ಅಫ್ಜಾ, ಸಹಾಯಕ ಪ್ರಾಧ್ಯಾಪಕ ಡಾ.ಶಿವಶಂಕರ್.ಕೆ.ಸಿ, ಉಪನ್ಯಾಸಕಿ ಇಂಪಾ ಭಾಗವಹಿಸಿದ್ದರು.
Comments are closed.