ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಿ

ಡಿಡಿಪಿಐಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

656

Get real time updates directly on you device, subscribe now.


ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು ಶಿಕ್ಷಣ ಇಲಾಖೆಯು ಜಿಲ್ಲೆಯ ಎಲ್ಲಾ ಮಕ್ಕಳಿಗೆ ಸೌಲಭ್ಯ ನೀಡುವುದರ ಜೊತೆಗೆ ಅವರಿಗೆ ಕಲಿಕಾ ಗುಣಮಟ್ಟ ಹೆಚ್ಚಿಸುವುದಕ್ಕೆ ಕ್ರಮ ವಹಿಸಬೇಕೆಂದು ಎರಡು ವಿಭಾಗಗಳ ಡಿಡಿಪಿಐಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಕ್ರೈಸ್ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ನಿರ್ವಹಣೆಗೆಂದು 1 ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಸದರಿ ಕಾರ್ಯಕ್ರಮ ಮುಂದುವರೆಸುವಂತೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹೇಳಿದರು.

ಇದಕ್ಕೆ ಪತ್ರಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಒಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಇದರ ಕುರಿತು ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.
ತುಮಕೂರು ನಗರಕ್ಕೆ ಹೆಚ್ಚುವರಿಯಾಗಿ 5 ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಪ್ರಾರಂಭಿಸಿದರೂ ಮಕ್ಕಳು ದಾಖಲಾಗುತ್ತಾರೆ, ಇಲಾಖೆಯಡಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಜೂನ್ ಮಾಹೆಯ ವರೆಗೆ ವೇತನ ಪಾವತಿಸಲಾಗಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಜಿಲ್ಲೆಯ 5,65,154 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ, ಈ ಯೋಜನೆಗೆ ಆಗಸ್ಟ್ 30 ರಂದು ಮುಖ್ಯಮಂತ್ರಿಗಳು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ, ಆ ಕಾರ್ಯಕ್ರಮದ ನೇರಪ್ರಸಾರವನ್ನು ಜಿಲ್ಲೆಯ 369 ಕಡೆಗಳಲ್ಲಿ ಎಲ್ಇಡಿ ಪರದೆ ಹಾಗೂ ಟಿವಿಗಳ ಮೂಲಕ ಸಾರ್ವಜನಿಕರು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಸಭೆಗೆ ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ ಅಕ್ಕಿಯ ಜೊತೆಗೆ ಹಣವನ್ನು ಡಿಬಿಟಿ ಮೂಲಕ ನೇರವಾಗಿ ವರ ಖಾತೆಗೆ ಜಮೆ ಮಾಡಬೇಕು, ಯಾವ ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಹೊಂದಿರದಿಲ್ಲವೋ ಅವರಿಗೆ ಒಂದು ತಿಂಗಳೊಳಗಾಗಿ ಖಾತೆ ಮಾಡಿಸಿಕೊಡಬೇಕು ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಕೃಷಿ ಇಲಾಖೆಯ ಪ್ರಗತಿ ವಿವರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶ್.ಎನ್. ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯಲ್ಲಿ ಶೇಕಡಾ 70 ರಷ್ಟು ಮಳೆ ಕೊರತೆಯಾಗಿದ್ದು, ಒಟ್ಟಾರೆ ಕೊರತೆ ಶೇ.17ರಷ್ಟಿರುತ್ತದೆ, ಜಿಲ್ಲೆಯಲ್ಲಿ 3,14,630 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದು, ಇದರ ಪೈಕಿ 1,96,782 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಒಟ್ಟಾರೆ ಶೇ.62.5 ಬಿತ್ತನೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸ ಗೊಬ್ಬರ ರೈತರಿಗೆ ಪೂರೈಕೆ ಮಾಡುವಷ್ಟು ದಾಸ್ತಾನು ಇದೆ, ತುಮಕೂರು ಮತ್ತು ತಿಪಟೂರು ಉಪ ವಿಭಾಗಗಳಲ್ಲಿ ರಾಗಿಯನ್ನು ಹೆಚ್ಚಾಗಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ, ಮಧುಗಿರಿ ಉಪ ವಿಭಾಗದಲ್ಲಿ ಶೇಂಗಾ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.

ತೋಟಗಾರಿಕೆ ಬೆಳೆಗಳು ಜಿಲ್ಲೆಯಲ್ಲಿ 2,93,000 ಹೆಕ್ಟೇರ್ ವಿಸ್ತೀರ್ಣದಲ್ಲಿದೆ, ಜಿಲ್ಲೆಯಲ್ಲಿ ಪ್ರಮುಖವಾಗಿ ಬಾಳೆ, ಮಾವು, ತೆಂಗು, ಅಡಿಕೆ, ಟೊಮೊಟೋ, ಮೆಣಸಿನಕಾಯಿ ಬೆಳೆಯಲಾಗುತ್ತಿದೆ, ಪ್ರಸ್ತುತ ಈಗ ಈ ಬೆಳೆಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಮಳೆ ಬಾರದೆ ಹೋದರೆ ಕಷ್ಟವಾಗುತ್ತದೆ ಎಂದು ತೋಟಗಾರಿಕೆ ಉಪ ನಿರ್ದೇಶಕಿ ಶಾರದಮ್ಮ ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 2023- 24ನೇ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿಯಡಿ ವಿವಿಧ ತೋಟಗಾರಿಕಾ ಬೆಳೆಗಳಾದ ತೆಂಗು, ಮಾವು, ಬಾಳೆ, ದಾಳಿಂಬೆ, ಹುಣಸೆ, ನುಗ್ಗೆ, ಇನ್ನಿತರೆ ಬೆಳೆಗಳಿಗೆ ಪ್ರದೇಶ ವಿಸ್ತರಣೆ ಮಾಡಿಕೊಳ್ಳಲು ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ ತೆಂಗಿನ ಗಿಡಗಳಿಗೆ ಬಾಧಿಸುವ ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದ್ದು, ಅದರಲ್ಲಿಯೂ ಪ್ರಮುಖವಾಗಿ ಕಾಂಡ ಸೋರುವ ರೋಗ ಹತೋಟಿ ಕ್ರಮಗಳ ಕುರಿತು ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಇತರೆ ವರ್ಗದ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ವರೆಗೆ ಶೇಕಡಾ 75 ರಂತೆ ಹಾಗೂ ಪ.ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಎರಡು ಹೆಕ್ಟೇರ್ ವರೆಗೆ ಶೇಕಡಾ 90 ರಷ್ಟು ಹಾಗೂ 2 ಹೆಕ್ಟೇರ್ ನಿಂದ 5 ಹೆಕ್ಟೇರ್ ವರೆಗೆ ಎಲ್ಲಾ ವರ್ಗದ ರೈತರಿಗೆ ಶೇಕಡಾ 45ರಷ್ಟು ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜುಲೈ 2023ರ ಅಂತ್ಯಕ್ಕೆ ಹಿಪ್ಪುನೇರಳೆ ವಿಸ್ತೀರ್ಣ 6226.76 ಹೆಕ್ಟೇರ್ ಇದ್ದು, 10498 ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿ ಅವಲಂಬಿತರಾಗಿದ್ದಾರೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.
ಜಿಲ್ಲೆಯಲ್ಲಿ ರಾಜ್ಯದಲ್ಲಿ ಬೆಳೆಯುವ ಎಲ್ಲಾ ತಳಿಯ ರೇಷ್ಮೆ ಗೂಡುಗಳನ್ನು ಬೆಳೆಯಲಾಗುತ್ತಿದೆ, ಕುಣಿಗಲ್ ತಾಲ್ಲೂಕು ಮತ್ತು ಹೆಬ್ಬೂರು ಹೋಬಳಿಯಲ್ಲಿ ಸಾಂಪ್ರದಾಯಕ ಶುದ್ದ ಮೈಸೂರು ತಳಿ ಬಿತ್ತನೆ ಗೂಡು ಹಾಗೂ ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನ ಹಳ್ಳಿ ತಾಲ್ಲೂಕುಗಳಲ್ಲಿ ಶುದ್ಧ ದ್ವಿತಳಿ ಬಿತ್ತನೆ ಗೂಡನ್ನು ಬೆಳೆಯಲಾಗುತ್ತಿದೆ, ಉಳಿದ 6 ತಾಲ್ಲೂಕುಗಳಾದ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ, ತುಮಕೂರು ಹಾಗೂ ಗುಬ್ಬಿ ಇಲ್ಲಿ ದ್ವಿತಳಿ ಸಂಕರಣ ಹಾಗೂ ಮಿಶ್ರತಳಿ ಗೂಡುಗಳನ್ನು ಉತ್ಪಾದಿಸಲಾಗುತ್ತಿದೆ ಎಂದರಲ್ಲದೆ, ರಾಜ್ಯದಲ್ಲಿಯೇ ದ್ವಿತಳಿ ಗೂಡು ಉತ್ಪಾದನೆಯಲ್ಲಿ ತುಮಕೂರು ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 10 ಸಂಚಾರಿ ಪಶು ಚಿಕಿತ್ಸಾಲಯ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ, ಪ್ರತಿ ದಿನ ಹೈನುಗಾರಿಕೆಯಿಂದ ಜಿಲ್ಲೆಯಲ್ಲಿ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ, ರೈತರಿಗೆ ರಾಸುಗಳ ಮೇವಿಗಾಗಿ ಮೇವಿನ ಬೀಜದ ಕಿರು ಪೊಟ್ಟಣಗಳನ್ನು ವಿತರಿಸಲಾಗುವುದು, ರೈತರಿಗೆ ಅಧ್ಯಯನ ಪ್ರವಾಸ ಏರ್ಪಡಿಸಲಾಗುವುದು, ಕುರಿ ಮತ್ತು ಮೇಕೆಗಳಿಗೆ ಕರುಳುಬೇನೆ ರೋಗ ನಿಯಂತ್ರಿಸುವ ಸಲುವಾಗಿ ಒಂದು ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಲಾಗುವುದು ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಮಹಾ ನಗರ ಪಾಲಿಕೆ ಆಯುಕ್ತೆ ಅಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!