ತಂತ್ರಜ್ಞಾನ ಬೆಳವಣಿಗೆಯಲ್ಲಿ ಭಾರತ ವಿಶ್ವಗುರು

122

Get real time updates directly on you device, subscribe now.


ತುಮಕೂರು: ತಂತ್ರಜ್ಞಾನದ ಬೆಳವಣಿಗೆಯಲ್ಲಿ ಭಾರತದ ಛಾಪು ಕೃತಕ ಬುದ್ಧಿಮತ್ತೆಯನ್ನೂ ಮೀರಿದೆ, ಆವಿಷ್ಕಾರ, ಸಂಶೋಧನೆ, ಸಾಧನೆ ಭಾರತದ ನಿರಂತರ ಪ್ರಕ್ರಿಯೆಯಾಗಿ ವಿಶ್ವಕ್ಕೆ ಗುರುಗಳಾಗಿದ್ದೇವೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಗುರುವಾರ ಆಯೋಜಿಸಿದ್ದ ಕೃತಕ ಬುದ್ಧಿ ಮತ್ತೆಯ ಇತ್ತೀಚಿನ ಪ್ರವೃತ್ತಿಗಳು ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪ್ರಯೋಗಾಲಯಗಳ ಸಂಪೂರ್ಣ ಉಪಯೋಗ ಪಡೆಯಬೇಕು, ತಂತ್ರಜ್ಞಾನ ಎಷ್ಟೇ ಬೆಳೆದರೂ ಕೃತಕ ಬುದ್ಧಿ ಮತ್ತೆಯು ನೈಜತೆ ಮೀರಲು ಸಾಧ್ಯವಿಲ್ಲ, ಮಾನವನ ಶಕ್ತಿಯ ಮುಂದೆ ಮಾನವ ನಿರ್ಮಿತ ತಂತ್ರಜ್ಞಾನ ಬಳಕೆಗಷ್ಟೇ ಸೀಮಿತವಾಗಬೇಕು, ಬದುಕು ಭಾವನೆಗಳ ಒಳಗೆ ಬಂದಾಗ ನಮ್ಮನ್ನು ಆಕ್ರಮಿಸಿ, ದುರುಪಯೋಗದ ಸಮಯ ಶುರುವಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ತುಮಕೂರು ವಿವಿ ಸಂಪೂರ್ಣ ಡಿಜಿಟಲ್ ಆಗಲಿದೆ, ನವ ತಂತ್ರಜ್ಞಾನ ಪರಿಚಯ ನಮ್ಮ ಮಕ್ಕಳಿಗೆ ಸಿಗಲಿದೆ, ಬದಲಾವಣೆಯ ಮಂತ್ರ ಶಿಕ್ಷಣ ಕ್ಷೇತ್ರದಲ್ಲಿ ಮೊದಲು ತಂದರೆ ಜಗತ್ತನ್ನು ಬದಲಾಯಿಸುವ ಆವಿಷ್ಕಾರಗಳನ್ನು ಕಾಣಬಹುದು ಎಂದು ಹೇಳಿದರು.

ಬೆಂಗಳೂರಿನ ಆರ್.ವಿ. ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ವಿಜಯಲಕ್ಷಿ.ಎಂ.ಎನ್. ಮಾತನಾಡಿ, ಕೃತಕ ಬುದ್ಧಿಮತ್ತೆಯು ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಆಕ್ರಮಿಸಿಕೊಂಡಿದೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತನ್ನಕಾರ್ಯ ಕ್ಷಮತೆಯನ್ನು ಈಗಾಗಲೇ ತೋರಿದೆ, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿ ಮತ್ತೆಯು ನೈಜತೆಗೆ ಸವಾಲೊಡ್ಡಬಹುದು ಎಂದು ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಕೃತಕ ಬುದ್ಧಿ ಮತ್ತೆಯ ಸಹಾಯದಿಂದ ರಾಷ್ಟ್ರಗಳು 60 ಮಿಲಿಯನ್ ಭಯೋತ್ಪಾದಕ ಸಂಘಟನೆಗಳನ್ನು ನಾಶಮಾಡಿದ್ದಾರೆ, ಕೃತಕ ಬುದ್ಧಿಮತ್ತೆಯು ಎಲ್ಲವನ್ನೂ ಬದಲಾಯಿಸಬಹುದಾದ ಕಾಲ ಸಮೀಪದಲ್ಲಿದೆ, ನಮ್ಮ ವಿಶ್ವಾಸಾರ್ಹತೆ, ಕಾರ್ಯ ಕ್ಷಮತೆಯಿಂದಷ್ಟೇ ನಾವು ವೃತ್ತಿಯಲ್ಲಿ ಮುಂದುವರಿಯಬಹುದು ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕಿ ಡಾ.ಕುಸುಮಾಕುಮಾರಿ.ಬಿ.ಎಂ, ವಿವಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪೂರ್ಣಿಮಾ.ಡಿ, ಸಹಾಯಕ ಪ್ರಾಧ್ಯಾಪಕ ಡಾ.ಮುಕುಂದಪ್ಪ.ಬಿ.ಎಲ್. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!