ತುಮಕೂರು: ಬದುಕೇ ಹಾಗೆ.. ತುತ್ತಿನ ಚೀಲ ತುಂಬಿಸಿಕೊಳ್ಳಲು ನಾನಾ ವೇಷ, ನಾನಾ ಕಸುಬು, ಜೀವನ ನಡೆಸಲು ಒಂದಲ್ಲ ಒಂದು ಕೆಲಸ ಮಾಡಲೇ ಬೇಕು, ದುಡಿಮೆ ಮಾರ್ಗ ಹುಡುಕಿಕೊಳ್ಳಲೇಬೇಕು, ಆದರೆ ಈ ಜನಕ್ಕೆ ಬಸವನೇ ದುಡಿಮೆಯ ದಾರಿಯಾಗಿದ್ದಾನೆ.
ಹೌದು, ತುಮಕೂರಿನ ಬೀದಿಗಳಲ್ಲಿ ಹತ್ತಾರು ಬಸವಗಳು ಕಾಣ ಸಿಗುತ್ತವೆ, ಬಸವನ ತಲೆಗೆ ಒಂದಷ್ಟು ಅಲಂಕಾರ, ಕೊಂಬಿಗೆ ಕುಚ್ಚು, ಮೈಮೇಲೊಂದು ಬಟ್ಟೆ.. ಹೀಗೆ ಸಿಂಗಾರಗೊಂಡ ಬಸವನ ಹಿಡಿದು ಮಹಿಳೆಯರು ಅಂಗಡಿ, ಹೋಟೆಲ್, ಟೀ ಶಾಪ್ಗಳ ಮುಂದೆ ಹೋಗಿ ಬಸವನಿಗೆ ಕಾಣಿಕೆ ಕೇಳುತ್ತಾರೆ, ಕೆಲವರು ಐದು, ಹತ್ತು ರೂಪಾಯಿ ಕೊಟ್ರೆ, ಇನ್ನು ಕೆಲವು ಅಂಗಡಿಗಳವರು ಪೂಜೆ ಸಲ್ಲಿಸಿ ಕಾಣಿಕೆ ಕೊಡುತ್ತಾರೆ, ಹೀಗೆ ಅಂಗಡಿ, ಹೋಟೆಲ್, ಮನೆಗಳ ಬಳಿ ಹೋಗಿ ಪಡೆಯುವ ಕಾಣಿಕೆಯೇ ಈ ಮಹಿಳೆಯರ ನಿತ್ಯ ಜೀವನಕ್ಕೆ ಆಧಾರ, ಈ ಮಹಿಳೆಯರದ್ದು ಬಸವನ ನಂಬಿದ ಬದುಕು.
ಇವರದ್ದು ಆಂಧ್ರ ಮೂಲ
ಈ ಮಹಿಳೆಯರು ಎಲ್ಲಿಯವರು ಅಂತ ಕೇಳಿದ್ರೆ ನಮ್ಮದು ಆಂಧ್ರ ಎನ್ನುತ್ತಾರೆ, ಆಂಧ್ರದ ಒಂಗೋಲು ಜಿಲ್ಲೆಯಿಂದ ಬಂದಿದ್ದೇವೆ ಎನ್ನುತ್ತಾರೆ, ತುಮಕೂರು ನಗರದ ಖಾಲಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ, ನಿತ್ಯ ಬಸವನ ಹಿಡಿದು ಬೀದಿ ಸುತ್ತುತ್ತಾ ಜನರು ನೀಡುವ ಕಾಣಿಕೆಯಿಂದ ಬದುಕು ನಡೆಸುತ್ತಾರೆ, ಮನೆಗಳ ಹತ್ತಿರ ಹೋದಾದ ಕೆಲವರು ಅಕ್ಕಿ, ರಾಗಿ, ಬೇಳೆ ನೀಡುತ್ತಾರೆ, ಅದನ್ನು ಪಡೆಯುತ್ತೇವೆ ಎನ್ನುತ್ತಾರೆ ವೆಂಕಟಮ್ಮ.
ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡು ಬಸವನ ಹಿಡಿದು ಬರುವ ಮಹಿಳೆಯರು ಅನಕ್ಷರಸ್ಥರು, ಬಡತನ ಇರುವುದರಿಂದ ಹೀಗೆ ಊರೂರು ಸುತ್ತಿ ಜೀವನ ಸಾಗಿಸುತ್ತೇವೆ, ಒಂದು ತಿಂಗಳು ಒಂದೂರಲ್ಲಿದ್ದರೆ, ಇನ್ನೊಂದು ತಿಂಗಳು ಮುಂದಿನ ಊರು ಎಂದು ಅರೆಬರೆ ಕನ್ನಡದಲ್ಲಿ ಹೇಳುತ್ತಾರೆ ಈ ಮಹಿಳೆಯರು.
ಮಕ್ಕಳನ್ನು ಓದಿಸೋದಲ್ವಾ ಅಂದ್ರೆ ನಮಗೆ ಊಟಕ್ಕೆ ಇಲ್ಲ, ಇನ್ನು ಓದಿಸೋದು ಎಲ್ಲಿ ಅಣ್ಣಾ, ಊರಲ್ಲಿ ನಮ್ಮ ಗಂಡಂದಿರು ಕೂಲಿ ನಾಲಿ ಮಾಡ್ತಾರೆ, ನಾವು ಆರು ತಿಂಗಳು ಹೀಗೆ ಊರೂರು ಸುತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ, ನಮ್ಮ ಕಷ್ಟ ಯಾರೂ ಕೇಳೋರಿಲ್ಲ ಎಂದು ಅಸಹಾಯಕೆ ತೋಡಿಕೊಳ್ಳುತ್ತಾರೆ ಈ ಮಹಿಳೆಯರು.
ಎಲ್ಲಿಂದಲೋ ಬಂದು ಎಲ್ಲಿಯೋ ಹಸಿವು ನೀಗಿಸಿಕೊಳ್ಳುವ ಸ್ಥಿತಿಯಲ್ಲಿರುವ ಈ ಮಹಿಳೆಯರದ್ದು ನಿಜಕ್ಕೂ ಅಲೆಮಾರಿ ಹೋರಾಟ, ಮೂಕ ಬಸವನೇ ಇವರ ಬದುಕಿಗೆ ದೊಡ್ಡ ಆಸರೆ.
Comments are closed.