ವೈ.ಎನ್.ಹೊಸಕೋಟೆ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಎಂಬುದು ಮರೀಚಿಕೆಯಾಗಿದೆ, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದರೂ ಪಂಚಾಯಿತಿ ಅಧಿಕಾರಿಗಳಿಂದ ಯಾವುದೇ ಉತ್ತರ ಸಿಗುತ್ತಿಲ್ಲ, ಇದನ್ನು ಅಭಿವೃದ್ಧಿ ಅಧಿಕಾರಿ ಬಳಿ ಪ್ರಶ್ನೆ ಮಾಡಿದ್ದಕ್ಕೆ ಗ್ರಾಮಸ್ಥರ ಮೇಲೆ ದರ್ಪ ತೋರುತ್ತಾರೆ, ಅಲ್ಲದೇ ಇ-ಸ್ವತ್ತು ಮಾಡಿಕೊಡಲು ಲಂಚ ಕೇಳ್ತಾರೆ ಎಂಬ ಆರೋಪ ಗ್ರಾಮಸ್ಥರಿಂದಲೇ ಕೇಳಿ ಬಂದಿದೆ.
ಕಲುಷಿತ ನೀರಿನ ಸೇವಿಸಿ ಜುಲೈ 15 ರಂದು ಅನೇಕ ಮಂದಿ ವೈ.ಎನ್.ಹೊಸಕೋಟೆ ಮತ್ತು ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಮತ್ತೆ ಅದೇ ರೀತಿ ಮುಂದುವರೆದಿದ್ದು ಕೇಳಲು ಹೋದ ಗ್ರಾಮಸ್ಥರನ್ನು ಏಕವಚನದಲ್ಲಿ ಮಾತನಾಡಿಸುವ ಮೂಲಕ ವಾರ್ಡಿನ ಸದಸ್ಯರನ್ನು ಕರೆಸಿ ಎಂದು ಗ್ರಾಮಸ್ಥರಿಗೆ ಅವಾಜ್ ಹಾಕಿದ್ದಾರೆ.
ಗ್ರಾಮ ನೈರ್ಮಲ್ಯ ಕಾಪಾಡುವ ಅಧಿಕಾರಿಗಳೇ ಈ ರೀತಿ ವರ್ತಿಸಿದರೆ, ನಮ್ಮ ಅಳಲನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಚರಂಡಿ, ರಸ್ತೆ ಬದಿ, ಕಾಲುವೆ ಸ್ವಚ್ಛಗೊಳಿಸುವುದೇ ಇಲ್ಲ, ವಾರಕ್ಕೊಮ್ಮೆ ಮಂಗಳವಾರ ನಡೆಯುವ ಸಂತೆಯಲ್ಲಿನ ತ್ಯಾಜ್ಯ ವಿಲೇವಾರಿ ಮಾಡುವುದೇ ಇಲ್ಲ. ಸಂತೆ ಮೈದಾನದಲ್ಲಿ 4 ಅಂಗನವಾಡಿಗಳಿದ್ದು, ಹಂದಿಗಳ ಗೂಡಾಗಿದೆ, ಮಕ್ಕಳು, ವೃದ್ಧರಿಗೆ ಧೂಳಿನ ಅನುಭವವಾಗಿ ಸಣ್ಣ-ಪುಟ್ಟ ಕಾಯಿಲೆಗೆ ತುತ್ತಾಗುತ್ತಿರುವುದು ಕಂಡು ಬರುತ್ತಿದೆ.
ಪ್ರತಿ ದಿನ ಪಂಚಾಯಿತಿಗೆ ಹಾಜರಾಗದ ಪಿಡಿಓ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದೆ ವಾರಕ್ಕೊಮ್ಮೆ ಹಾಜರಾಗುವ ಪಿಡಿಓ, ಗ್ರಾಪಂ ಅಧ್ಯಕ್ಷೆಯ ಪತಿಯ ಕುಮ್ಮಕ್ಕಿನಿಂದ ಈತನ ದರ್ಪ ಮಿತಿ ಮೀರಿದೆ ಎಂದು ಈ ಕೂಡಲೇ ವೈ.ಎನ್.ಹೊಸಕೋಟೆಯಿಂದ ಎತ್ತಂಗಡಿ ಮಾಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧ ಪಟ್ಟ ಅಧಿಕಾರಿಗಳು ಪಿಡಿಓ ವಿರುದ್ಧ ಕ್ರಮ ಕೈಗೊಳ್ಳುತ್ತಾರ? ಇಲ್ಲಿನ ಮೂಲಭೂತ ಸಮಸ್ಯೆಗೆ ಪರಿಹಾರ ಒದಗಿಸುತ್ತಾರ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಮೂಲ ಸೌಕರ್ಯ ಒದಗಿಸುವಂತೆ ಪಿಡಿಓ ಬಳಿ ಬಂದರೆ ಏಕವಚನದಲ್ಲಿ ಅಧಿಕಾರದ ದರ್ಪ ತೋರಿಸುತ್ತಾರೆ. ವಾರ್ಡಿನ ಸದಸ್ಯರನ್ನು ಕರೆಸಿಕೊಂಡು ಬಗೆಹರಸಿಕೊಳ್ಳಿ ಎಂದು, ನಮ್ಮನ್ನೆಲ್ಲಾ ಕೇಳಬೇಡಿ… ಅಂತಾರೆ, ಮೇಲಾಧಿಕಾರಿಗಳು ಇತ್ತ ಗಮನ ಹರಿಸಬೇಕು.
ಕೇಶವಮೂರ್ತಿ, ಗ್ರಾಪಂ, ಸದಸ್ಯರು.
ಕಾಸಿಗೆ ಡಿಮ್ಯಾಂಡ್!
ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ಮಾಡಿಕೊಡಲು ಐದು ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡ್ತಾರೆ. ಯಾರು ಹಣ ಕೊಡುತ್ತಾರೆಯೋ ಅವರಿಗೆ ಇ-ಸ್ವತ್ತು ನೀಡಿ, ಹಣ ನೀಡದವರಿಗೆ ಫೋಟೊ ಅಪ್ಲೋಡ್ ಆಗಿಲ್ಲ, ದಾಖಲೆಗಳು ಸರಿ ಇಲ್ಲ ಎಂದು ಅನಗತ್ಯ ಅಲೆದಾಡಿಸುತ್ತಾರೆ, ಇವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಸಾಕಷ್ಟು ದೂರು ವ್ಯಕ್ತವಾಗಿದೆ.
ವೆಂಕಟೇಶ್, ಮಾಜಿ ಗ್ರಾಪಂ ಸದಸ್ಯರು.
Comments are closed.