ತುಮಕೂರು: ದೇಶದಲ್ಲಿ ಒಕ್ಕೂಟ ಸರ್ಕಾರದ ಜನ ವಿರೋಧಿ ನಡೆಗಳನ್ನು ವಿರೋಧಿಸಿ ಜನರ ಹಕ್ಕೋತ್ತಾಯಗಳಿಗಾಗಿ ಭಾರತ ಕಮ್ಯೂನಿಸ್ಟ್ ಪಕ್ಷ ಸಿಪಿಐಎಂ ದೇಶಾದ್ಯಂತ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸೆ.1 ರಿಂದ 7ರ ವರೆಗೆ ಹಮ್ಮಿಕೊಂಡಿರುವ ಜನಪರ ಹೋರಾಟದಲ್ಲಿ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ವಿರೋಧ ದಾಖಲಿಸಿ ಯಶಸ್ವಿಗೊಳಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್ ಮನವಿ ಮಾಡಿದರು.
ಕಳೆದ 2014 ರಿಂದಲೆ ಒಕ್ಕೂಟ ಸರ್ಕಾರವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್.ಡಿ.ಎ. ಸರ್ಕಾರ ಎರಡು ಪಾರ್ಲಿಮೆಂಟ್ ಚುನಾವಣೆಗಳಲ್ಲಿ ದೇಶದ ಜನತೆಗೆ ನೀಡಿದ ಅಶ್ವಾಸನೆಗಳಾದ, ರೈತರ ಆದಾಯ ದ್ವಿಗುಣಗೊಳಿಸುವುದು, ಪ್ರತಿ ವರ್ಷ ಕೋಟಿ ಉದ್ಯೋಗ ನೀಡುವುದು, ಬೆಲೆ ಏರಿಕೆ ತಡೆಗಟ್ಟುವುದು, ಕಪ್ಪು ಹಣ ಹೊರಗೆಳೆದು ಬಡವರ ಖಾತೆಗೆ ತಲಾ ಹದಿನೈದು ಲಕ್ಷ ರೂ. ಜಮಾ ಮಾಡುವುದು ಮತ್ತು ಒಟ್ಟಾರೆ ಎಲ್ಲರಿಗೂ ಶುಭ ದಿನಗಳನ್ನು ತರುವುದು ಸೇರಿದಂತೆ ಯಾವುದೇ ಭರವಸೆಗಳನ್ನು ಜಾರಿಗೊಳಿಸದೆ ವಂಚಿಸಿ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳು ಹೇರಳ ಸಂಪತ್ತನ್ನು ದೋಚಲು ನೆರವು ನೀಡಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಒಕ್ಕೂಟ ಸರ್ಕಾರ ಮುಂದುವರೆಸುತ್ತಿರುವ ನವ ಉದಾರೀಕರಣದ ನೀತಿಗಳಿಂದ ದೇಶದ ಜನತೆ ಅದರಲ್ಲೂ ಬಡ ಜನತೆ ಬೆಲೆ ಏರಿಕೆಯ ಭಾರಿ ಬರೆಯಿಂದ ತೀವ್ರವಾಗಿ ನಲುಗುವಂತಾಗಿದೆ, ಅಗತ್ಯ ವಸ್ತುಗಳಾದ ಅಕ್ಕಿ ಬೇಳೆ, ಅಡುಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ವಿದ್ಯುತ್, ಕೃಷಿ ಹೂಡಿಕೆಗಳಾದ ಬೀಜ, ರಸಾಯನಿಕ ಗೊಬ್ಬರ, ಕೀಟ ನಾಶಕ, ಕೃಷಿ ಉಪಕರಣಗಳು, ನಾಗರಿಕರ ಆರೋಗ್ಯದ ಔಷಧಿ ಬೆಲೆಗಳು, ಶೈಕ್ಷಣಿಕ ಸೌಲಭ್ಯದ ಡೊನೇಷನ್ ಹಾಗೂ ಶುಲ್ಕಗಳು ಗಗನ ಮುಖಿಯಾಗಿವೆ ಎಂದು ದೂರಿದರು.
ಕೇಂದ್ರ ಸರ್ಕಾರ ಕೂಡಲೇ ಎಲ್ಲ ಅಗತ್ಯ ವಸ್ತುಗಳು ಮತ್ತು ಜನರ ಔಷಧಿಗಳ ಬೆಲೆಗಳ ಮೇಲೆ ನಿಯಂತ್ರಣ ಮರು ಸ್ಥಾಪಿಸಬೇಕು, ಕಾಳ ಸಂತೆಕೋರರನ್ನು ನಿಗ್ರಹಿಸಲು ಕಠಿಣ ಕ್ರಮ ವಹಿಸಬೇಕು, ಪೆಟ್ರೋಲ್, ಡೀಸೆಲ್ ಬೆಲೆ ಮೇಲಿನ ತೆರಿಗೆ ಕಡಿತ ಮಾಡಬೇಕು, ಕೃಷಿ ಹೂಡಿಕೆಗಳಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ ಹಾಗೂ ಕೃಷಿ ಉಪಕರಣಗಳ ಮೇಲಿನ ಹಾಗೂ ಪಡಿತರ ಚೀಟಿದಾರರಿಗೆ ಎಲ್ಲಾ ಹದಿನಾರು ಅಗತ್ಯ ಆಹಾರ ಧಾನ್ಯಗಳಿಗೂ ಮತ್ತು ವಸ್ತುಗಳಿಗೆ ಸಹಾಯಧನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಹಣದುಬ್ಬರ ತಡೆಯಬೇಕು, ಆಹಾರ ಧಾನ್ಯಗಳ ಮೇಲಿನ ಜಿಎಸ್ಟಿಯನ್ನು ವಾಪಸ್ ಪಡೆಯಬೇಕು ಎಂದ ಅವರು ಕೊಟ್ಟ ಮಾತಿನಂತೆ ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿಗೆ ಒಕ್ಕೂಟ ಸರ್ಕಾರ ಮತ್ತು ಬಿಜೆಪಿ ಕ್ರಮ ವಹಿಸದಿರುವುದರಿಂದ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ದೇಶದಾದ್ಯಂತ ದಿನೇ ದಿನೇ ಹೆಚ್ಚುತ್ತಿದೆ, ಪ್ರತಿ ವರ್ಷವೂ ಕೋಟ್ಯಂತರ ಹೊಸ ವಿದ್ಯಾವಂತ ನಿರುದ್ಯೋಗಿಗಳು, ನಿರುದ್ಯೋಗಿಗಳ ಪಡೆಯನ್ನು ಬೆಳೆಸುತ್ತಿದ್ದಾರೆ, ಒಕ್ಕೂಟ ಸರ್ಕಾರ ಮತ್ತಿತರೆ ಸರ್ಕಾರಗಳಡಿ ಖಾಲಿ ಇರುವ 50 ಲಕ್ಷದಷ್ಟು ಉದ್ಯೋಗ ಭರ್ತಿ ಮಾಡದೆ ಖಾಲಿ ಉಳಿಸಿಕೊಳ್ಳುವುದರ ಜತೆಗೆ ಆ ಹುದ್ದೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ, ರಾಜ್ಯ ಸರ್ಕಾರ ಅನ್ನಭಾಗ್ಯದಡಿ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರ ಬಡವರಿಗೆ ಈಗ ನೀಡುವ ತಲಾ ಐದು ಕೆಜಿ ಅಕ್ಕಿಯ ಜತೆ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ನಿರ್ಧರಿಸಿದ್ದು, ತಲಾ ಕೆಜಿ ಅಕ್ಕಿಗೆ ಒಕ್ಕೂಟ ಸರ್ಕಾರಕ್ಕೆ 34 ರೂ. ಗಳಂತೆ ನೀಡಿ ಖರೀದಿಸಲು ಇಚ್ಛಿಸಿದೆ. ಆದರೆ, ಒಕ್ಕೂಟ ಸರ್ಕಾರ ಅಕ್ಕಿಯನ್ನು ಒದಗಿಸದೆ ನಿರಾಕರಿಸಿರುವ ನಡೆ ಖಂಡನೀಯ ಎಂದರು.
ಬಡವರಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವ ಬದಲು, ವ್ಯಾಪಾರಿಗಳಿಗೆ, ಕಾಳ ಸಂತೆಕೋರರ ಲೂಟಿಗೆ ಕೇವಲ 31 ರೂ.ಗಳಿಗೆ ತಲಾ ಕೆಜಿ ಅಕ್ಕಿ ಮಾರಾಟ ಮಾಡುತ್ತಿರುವುದು ಒಕ್ಕೂಟ ಸರ್ಕಾರ ಹಾಗೂ ಬಿಜೆಪಿಯ ಬಡವರ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ, ತಕ್ಷಣವೇ, ಒಕ್ಕೂಟ ಸರ್ಕಾರ ಬಡವರ ವಿರೋಧಿ ನೀತಿ ಕೈ ಬಿಟ್ಟು ರಾಜ್ಯ ಸರ್ಕಾರದ ಕೋರಿಕೆಯಂತೆ ತಲಾ ಹೆಚ್ಚುವರಿ ಐದು ಕೆಜಿ ಅಕ್ಕಿ ಒದಗಿಸುವಂತೆ ಅವರು ಆಗ್ರಹಿಸಿದರು.
ಒಕ್ಕೂಟ ಸರ್ಕಾರ ವಿದ್ಯುತ್ ರಂಗದ ಉತ್ಪಾದನೆ, ವಿತರಣೆ ಮತ್ತು ಸರಬರಾಜುಗಳನ್ನು ಖಾಸಗೀ ರಂಗಕ್ಕೆ ವಹಿಸಲು ನಿರ್ಧರಿಸಿ ಪಾರ್ಲಿಮೆಂಟ್ನಲ್ಲಿ ಮಸೂದೆ ತಂದಿರುವುದು ಖಂಡನೀಯ, ಅದೇ ರೀತಿ, ಖಾಸಗಿ ಲೂಟಿಕೋರ ಕಂಪೆನಿಗಳ ಲೂಟಿಗೆ ವಿದ್ಯುತ್ ರಂಗವನ್ನು ತೆರೆಯಲು ದೇಶದಾದ್ಯಂತ ಪ್ರೀಪೇಡ್ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ನಿರ್ದೇಶನ ನೀಡಿರುವುದು ಅಕ್ಷಮ್ಯ ಎಂದರು.
ಜಿಎಸ್ಟಿ ತೆರಿಗೆ ಸಂಗ್ರಹದ ಕರ್ನಾಟಕದ ಬಾಕಿ ಮೊತ್ತ ನೀಡದೆ ಸತಾಯಿಸುತ್ತಿರುವುದು ಖಂಡನೀಯ, ಅದನ್ನು ಕೇಳಿದಾಗಲೆಲ್ಲ ಸಾವಿರಾರು ಕೋಟಿ ರೂ.ಗಳ ಬಾಕಿ ಮೊತ್ತ ನೀಡದೆ ಸಾಲ ಪಡೆಯಿರಿ ಎಂದು ಹೇಳುವ ಮೂಲಕ ಸಾಲದ ಹೊರೆ ಹೆಚ್ಚಿಸುವ ಕೆಲಸ ಒಕ್ಕೂಟ ಸರ್ಕಾರ ಮಾಡುತ್ತಿದೆ, ಒಕ್ಕೂಟ ಸರ್ಕಾರ ತಕ್ಷಣವೇ ಜಿಎಸ್ಟಿ ಬಾಕಿ ಮೊತ್ತ ಒದಗಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿ ದೇಶಾದ್ಯಂತ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಜನಪರ ಹೋರಾಟದಲ್ಲಿ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ವಿರೋಧ ದಾಖಲಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಿ.ಉಮೇಶ್, ನಗರ ಕಾರ್ಯದರ್ಶಿ ಲೋಕೇಶ್ ಇದ್ದರು.
Comments are closed.