ವಿದ್ಯುತ್ ಮಿತವಾಗಿ ಬಳಸಿ ಉಳಿಸಿ: ಲೋಕೇಶ್

366

Get real time updates directly on you device, subscribe now.


ತುಮಕೂರು: ವಿದ್ಯುತ್ ಅತ್ಯಮೂಲ್ಯವಾದ ಸಂಪತ್ತು, ಇದು ಮುಗಿದು ಹೋಗುವ ಸಂಪನ್ಮೂಲವಾಗಿರುವುದರಿಂದ ಗ್ರಾಹಕರು ಜಾಗರೂಕತೆಯಿಂದ ಬಳಸಿ ಸಂರಕ್ಷಿಸಬೇಕು ಎಂದು ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕೇಶ್ ಕರೆ ನೀಡಿದರು.
ನಗರದ ಹೊರಪೇಟೆಯಲ್ಲಿರುವ ಇಂಜಿನಿಯರ್ ಅಸೋಸಿಯೇಷನ್ ಹಾಲ್ನಲ್ಲಿ ಬೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಳೆ ಅಭಾವದ ನಡುವೆಯೂ ಬೇರೆ ಬೇರೆ ಕಡೆಯಿಂದ ವಿದ್ಯುತ್ ಉತ್ಪಾದನೆ ಮಾಡಿ ಗ್ರಾಹಕರ ಮನೆ ಬಾಗಿಲಿಗೆ ವಿದ್ಯುತ್ ಪೂರೈಸಲಾಗುತ್ತಿದೆ, ಪ್ರತಿ ಯೂನಿಟ್ ಉತ್ಪಾದನೆಗೂ ಬಹಳ ಕಷ್ಟದ ಪರಿಸ್ಥಿತಿ ಇದೆ, ಇಂತಹ ವಿದ್ಯುತ್ನ್ನು ಗ್ರಾಹಕರು ಮನಬಂದಂತೆ ಬಳಸದೆ ಅಗತ್ಯಕ್ಕೆ ತಕ್ಕಂತೆ ಬಳಬೇಕು ಎಂದು ಸಲಹೆ ನೀಡಿದರು.
ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲೂ ಪ್ರತಿ ಯೂನಿಟ್ ವಿದ್ಯುತ್ನ್ನು ಕೊಡಲಾಗುತ್ತಿದೆ, ಹೆಚ್ಚಿನ ಮಹತ್ವವನ್ನು ವಿದ್ಯುತ್ಗೆ ನೀಡಬೇಕು, ಒಂದು ಪ್ರಮುಖವಾದ ವಸ್ತುವಿಗೆ ಕೊಡುವಷ್ಟು ಬೆಲೆಯನ್ನು ವಿದ್ಯುತ್ಗೂ ಕೊಡಬೇಕು ಎಂದು ಹೇಳಿದರು.

ಹೊಸದಾಗಿ ಮನೆ, ಲೇಔಟ್, ಕಟ್ಟಡ ನಿರ್ಮಾಣ ಮಾಡುವಾಗ ವೆಲ್ಡಿಂಗ್, ಗ್ರಾನೈಟ್ ಇನ್ನಿತರೆ ವಿದ್ಯುತ್ ಉಪಯೋಗಿಸುವಂತಹ ಕೆಲಸಗಳಿಗೆ ಬೆಸ್ಕಾಂನಿಂದ ಅನುಮತಿ ಪಡೆಯಬೇಕು, ಜೊತೆಗೆ ಎಲ್ಟಿ 7 ಜಕಾತಿಯ ಮೀಟರ್ ಪಡೆಯಬೇಕು, ಹಳೆ ಮನೆಯ ಮೀಟರ್ಗೆ ಸಂಪರ್ಕ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ವಿದ್ಯುತ್ ಬಳಕೆ ಬಗ್ಗೆ ಗ್ರಾಹಕರಿಗೆ ಸಪ್ತಾಹ ಅವಧಿಯಲ್ಲಿ ಮಾತ್ರ ಜಾಗೃತಿ ಮೂಡಿಸುವುದಲ್ಲ, ನಿರಂತರವಾಗಿ ಜನರಲ್ಲಿ ವಿದ್ಯುತ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ಅಂಗಡಿ ಮತ್ತು ಚಿಲ್ಲರೆ ಅಂಗಡಿ, ವಾಣಿಜ್ಯ ಅಂಗಡಿಗಳ ಉಪಯೋಗಕ್ಕಾಗಿ ವಾಸದ ಮನೆಯ ಮೀಟರ್ಗೆ ಸಂಪರ್ಕ ಮಾಡಿಕೊಳ್ಳದೆ ಎಲ್ಟಿ 3 ಜಕಾತಿಯ ಮೀಟರ್ ಪಡೆದುಕೊಳ್ಳಬೇಕು, ಸಣ್ಣಕೈಗಾರಿಕೆ ಮತ್ತು ಇತರೆ ಕೈಗಾರಿಕಾ ಉದ್ದೇಶಕ್ಕಾಗಿ ವಿದ್ಯುತ್ ಬಳಸುವುದಾದರೆ ಬೆಸ್ಕಾಂನಿಂದ ಎಲ್ಟಿ 5 ಜಕಾತಿಯ ಮೀಟರ್ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಸ್ಕಾಂ ಜಾಗೃತ ದಳದ ಇನ್ಸ್ಪೆಕ್ಟರ್ ಡಿ.ಜಿ.ಶ್ರೀನಿವಾಸ್ ಮಾತನಾಡಿ, ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಶಿಕ್ಷಾರ್ಹ ಮತ್ತು ದಂಡಾರ್ಹ ಅಪರಾಧವಾಗಿದೆ, ಬೆಸ್ಕಾಂ ಕಳ್ಳತನ ಮತ್ತು ದುರುಪಯೋಗದ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದರು.

ವಿದ್ಯುತ್ ಸಂಬಂಧಿಸಿದ ಯಾವುದೇ ವಿಚಾರಣೆಗಾಗಿ ಮತ್ತು ಮಾಹಿತಿಗಾಗಿ 1912 ಬೆಸ್ಕಾಂ ಸಹಾಯವಾಣಿ 24=7 ಕರ್ತವ್ಯ ನಿರ್ವಹಿಸಲಾಗುತ್ತಿದೆ, ಸಾರ್ವಜನಿಕರ ಉಪಯೋಗಕ್ಕಾಗಿ ಬೆಸ್ಕಾಂ ಮಿತ್ರ, ಬೆಸ್ಕಾಂ ಹೆಚ್ಟಿ ಗ್ರಾಹಕ ಮುಂತಾದ ಮೊಬೈಲ್ ಅಪ್ಲಿಕೇಷನ್ಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮನೆಯ ಅಥವಾ ಯಾವುದೇ ರೀತಿಯ ಕಟ್ಟಡದ ಮೀಟರ್ನ್ನು ಕಡ್ಡಾಯವಾಗಿ ಬೆಸ್ಕಾಂ ಸಿಬ್ಬಂದಿಗೆ ಕಾಣುವಂತೆ ಅಳವಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಜಾಗೃತ ದಳದ ಪಿಎಸ್ಐ ರಂಗನಾಥ್, ಬೆಸ್ಕಾಂ ಎಇಇಗಳಾದ ಗುರುರಾಜ್, ಕರಿಯಪ್ಪ, ವೆಂಕಟೇಶ್, ಮಲ್ಲಣ್ಣ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!