ತುಮಕೂರು: ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು, ಇಂದಿನ ವಿದ್ಯಾರ್ಥಿಗಳು ಈ ದೇಶದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ರ ವಿಚಾರ ಮೈಗೂಡಿಸಿಕೊಂಡು ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ನಭಾಸಬೇಕೆಂದು ಚಲನಚಿತ್ರ ಸಾಹಿತಿ ಕವಿರಾಜ್ ತಿಳಿಸಿದರು.
ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ 8ನೇ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನದ ಅಂಗವಾಗಿ ಸೃಜನ ಸಾಂಸ್ಕೃತಿಕ ವೇದಿಕೆಯಿಂದ ನಗರದ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಿನ ಸರ್ಕಾರಗಳು, ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಯೋಚಿಸದಂತೆ ಶಿಕ್ಷಣದ ಮೇಲೆ ದಾಳಿ ನಡೆಸುತ್ತಿವೆ, ಇಂತಹ ಸಂದರ್ಭದಲ್ಲಿ ಮಹಾನ್ ಕ್ರಾಂತಿಕಾರಿ ಹುತಾತ್ಮ ಭಗತ್ಸಿಂಗ್ ವಿಚಾರ, ಅವರು ಬರೆದಿರುವಂತಹ ನಾನೇಕೆ ನಾಸ್ತಿಕ ಪುಸ್ತಕ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಸಿ.ಯತಿರಾಜು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್ಇಪಿ ನೀತಿಯು ಶಿಕ್ಷಣವನ್ನು ಸಂಪೂರ್ಣವಾಗಿ ಕೇಂದ್ರೀಕರಣಗೊಳಿಸುವ ದುರುದ್ದೇಶ ಹೊಂದಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದರು.
ಎನ್ಇಪಿಯು ವಿದ್ಯಾರ್ಥಿಗಳ ಮೌಲ್ಯಗಳನ್ನು ಬೆಳೆಸುವುದನ್ನು ಹೊರತು ಪಡಿಸಿ ಕೇವಲ ಕೌಶಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾ ಶಿಕ್ಷಣದ ನೈಜ ಉದ್ದೇಶ ಮಾರೆಮಾಚುತ್ತಿದೆ, ಇದಲ್ಲದೆ ಕೇಂದ್ರ ಸರ್ಕಾರವು ಕೋವಿಡ್ ನೆಪವೊಡ್ಡಿ, ಕಲಿಕೆಯ ನಷ್ಟ ಭರಿಸಲು ಆನ್ಲೈನ್ ಶಿಕ್ಷಣ ನೀಡುವ ಕುತಂತ್ರ ಹೂಡುತ್ತಾ ಬಡ ಪ್ರತಿಭವಂತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಉಳಿಸುತ್ತಿದೆ ಎಂದರು.
ಎಐಡಿಎಸ್ನ ರಾಜ್ಯಅಧ್ಯಕ್ಷೆ ಅಶ್ವಿನಿ ಕೆ.ಎಸ್. ಮಾತನಾಡಿ, ಶಿಕ್ಷಣವು ಮಾನವನ ಚಾರಿತ್ರ್ಯ ನಿರ್ಮಾಣ ಮಾಡುವ ಪ್ರಕ್ರಿಯೆ ಎಂಬ ಸ್ವಾಮಿ ವಿವೇಕಾನಂದ ಅವರ ಈ ಮಾತುಗಳನ್ನು ನೆನಪಿಸಿ ಶಿಕ್ಷಣಕ್ಕಾಗಿ ಜೀವನ ಪರ್ಯಂತ ಹೋರಾಟ ನಡೆಸಿದ ಈಶ್ವರ ಚಂದ್ರ ವಿದ್ಯಾಸಾಗರ್, ಸಾವಿತ್ರಿ ಬಾಪುಲೆ, ಜ್ಯೋತಿ ಬಾಪುಲೆ ಅವರು ಶಿಕ್ಷಣವು ಸಾರ್ವತ್ರಿಕವಾಗಿ ಪ್ರತಿಯೊಬ್ಬರಿಗೂ ಸಿಗಬೇಕು ಎಂಬ ಮಹಾನ್ ಆಶಯ ಹೊಂದಿದ್ದರು, ಆದರೆ ಎನ್ಇಪಿ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಮೂಲಕ ಕೇವಲ ಉಳ್ಳವರ ಪಾಲಾಗಿಸುತ್ತಿದೆ ಎಂದರು.
ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರಜಾ ತಾಂತ್ರಿಕ, ವೈಜ್ಞಾನಿಕ, ಧರ್ಮ ನಿರಪೇಕ್ಷ ಶಿಕ್ಷಣ ದೊರೆಯಬೇಕೆಂಬುದು ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಅವರ ಕನಸಾಗಿತ್ತು, ಸಾರ್ವಜನಿಕ ಶಿಕ್ಷಣ ಉಳಿಸುವ ಘೋಷಣೆಯೊಂದಿಗೆ ಈ ಮಹಾನ್ ಕ್ರಾಂತಿಕಾರಿಗಳ ಕನಸನ್ನು ನನಸಾಗಿಸುವ ಸಂಕಲ್ಪತೊಟ್ಟು ಬಲಿಷ್ಠ ಹೋರಾಟ ಮುಂದುವರೆಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಖಜಾಂಚಿ ಅಭಯ್
ದಿವಾಕರ್ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಬರಹಗಾರರಾದ ಬಾ.ಹ.ರಮಾಕುಮಾರಿ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಗವಹಿಸಿದ್ದರು.
Comments are closed.