ತುಮಕೂರು: ರೋಗಿಗಳ ದೈಹಿಕ ಸ್ಥಿತಿಯ ಏರುಪೇರುಗಳನ್ನು ನಿರಂತರವಾಗಿ ದಾಖಲಿಸುವ ಹಾಗೂ ಸಕಾಲದಲ್ಲಿ ವೈದ್ಯರಿಗೆ ಸಂದೇಶ ನೀಡುವ ಲೈಫ್ ಸೈನ್ಸ್ ಬಯೋಸೆನ್ಸಾರ್ ಡಿಜಿಟಲ್ ಡಿವೈಸ್ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದ್ದು, ರೋಗಿ ನಿರ್ವಹಣಾ ವಿಭಾಗದಲ್ಲಿ ಅತ್ಯಂತ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಲೈಫ್ ಸೈನ್ಸ್ ಬಯೋಸೆನ್ಸಾರ್ ವೈರ್ಲೆಸ್ ಡಿವೈಸ್ ಪರಿಚಯ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ,ಯಾವುದೇ ಚಿಕಿತ್ಸೆ ರೋಗಿಯ ಆರೋಗ್ಯದ ದತ್ತಾಂಶದ ಆಧಾರದ ಮೇಲೆ ಚಿಕಿತ್ಸೆ ಅವಲಂಬಿತವಾಗಿದ್ದು, ಇಂತಹ ಡಿವೈಸ್ ಬಳಕೆಯಿಂದ ಆರೋಗ್ಯದ ನಿಖರ ಫಲಿತಾಂಶ ದೊರೆಯುವುದರಿಂದ ಹೃದಯಾಘಾತದಂತಹ ಸನ್ನಿವೇಶಗಳನ್ನೂ ಕೂಡ ನಿಯಂತ್ರಿಸಬಹುದು, ರೋಗಿಗಳಿಗೆ ತರ್ತು ನಿಗಾ ಘಟಕದ ಅವಶ್ಯಕತೆ ಕಡಿಮೆ ಮಾಡಿ, ಸಮಯದ ಉಳಿತಾಯ ಮಾಡುವ ಡಿವೈಸ್ ರೋಗಿಗಳಿಗೆ ವರದಾನವಾಗಲಿದೆ ಎಂದರು.
ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥರು ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್.ಹೆಚ್.ಎಂ. ಮಾತನಾಡಿ ಸಹಜವಾಗಿ ನಾವು ರೋಗಿಗಳನ್ನು ತುರ್ತು ನಿಗಾ ಘಟಕದಲ್ಲಿಟ್ಟು ಇಸಿಜಿ, ಎಕೋ, ದೇಹದ ತಾಪಮಾನ, ಉಸಿರಾಟದ ದರ, ನಾಡಿ ಬಡಿತ, ರಕ್ತದೊತ್ತಡ, ಆಮ್ಲಜನಕದ ಪ್ರಮಾಣಗಳನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಲೇ ಇರುತ್ತೇವೆ, ಈ ಬಯೋಸೆನ್ಸಾರ್ ಸ್ವಯಂ ಚಾಲಿತವಾಗಿ ಯಂತ್ರಗಳ ನೆರವಿಲ್ಲದೆ ರೋಗಿಯ ಸ್ಥಿತಿಗತಿ ಮಾಪನಮಾಡಿ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಸಂದೇಶ ನೀಡಲಿದ್ದು, 24 ಗಂಟೆ ಐಸಿಯು ಕೇರ್ ಒದಗಿಸಲಿದೆ ಎಂದರು.
ಲೈಫ್ ಸೈನ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ಸಿಎಸ್ಆರ್ ಬ್ಯುಸಿನೆಸ್ ಹೆಡ್ ಡಾ.ರವೀಶ್ ಬಿ ಗಣಿ ಮಾತನಾಡಿ ಅಮೆರಿಕಾ ಯುರೋಪ್, ಅಸ್ಟ್ರೆಲಿಯಾ, ಸಿಂಗಾಪುರ್, ಸೌದಿ ದೇಶಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಈ ಯಂತ್ರ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿದೆ, ತುರ್ತು ಸಂದರ್ಭದ ಜೊತೆಗೆ, ಆ್ಯಂಬುಲ್ಸ್ ಸೇವೆ, ಗೃಹ ಆರೋಗ್ಯದಲ್ಲೂ, ಪ್ರೈಮರಿ ಹೆಲ್ತ್ ಕೇರ್ಗಳಲ್ಲೂ ಈ ತಂತ್ರಜ್ಞಾನ ಬಳಸಬಹುದು ಎಂದರು.
ಹೃದ್ರೋಗ ತಜ್ಞ ಡಾ.ಶರತ್ ಕುಮಾರ್.ಜೆ.ವಿ. ಮಾತನಾಡಿದರು, ಎಸ್ಎಂಸಿಆರ್ಐ ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜಿವಕುಮಾರ್ ಇದ್ದರು.
Comments are closed.