ಮಧುಗಿರಿಯಲ್ಲಿ ಕ್ಷೀರಭಾಗ್ಯ ದಶಮಾನೋತ್ಸವ

ಸೆ.6 ರಂದು ಸಿಎಂ ಸಿದ್ದರಾಮಯ್ಯರಿಂದ ಕಾರ್ಯಕ್ರಮ ಉದ್ಘಾಟನೆ

3,276

Get real time updates directly on you device, subscribe now.


ಮಧುಗಿರಿ: ಪಟ್ಟಣದ ರಾಜೀವ್ ಗಾಂಧೀ ಕ್ರೀಡಾಂಗಣದಲ್ಲಿ ಸೆ.6 ರಂದು ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಧುಗಿರಿಯ ಇತಿಹಾಸದಲ್ಲೇ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಪಟ್ಟಣದ ರಾಜೀವ್ ಗಾಂಧೀ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳ ಪೌಷ್ಟಿಕತೆಗೆ ಸಹಾಯಕವಾಗುವ ಉದ್ದೇಶದಿಂದ 2013 ರಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿದ್ದರು, ಇದರಿಂದ ಅಂಗನವಾಡಿ ಸೇರಿದಂತೆ 1 ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ 65 ಲಕ್ಷ ಮಕ್ಕಳಿಗೆ ಪ್ರಯೋಜನವಾಗಿದೆ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದು 10 ವರ್ಷಗಳಾಗಿದ್ದು, ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ, ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ಜಿಲ್ಲೆಗೆ ಬಂದ ಕಾರ್ಯಕ್ರಮವನ್ನು ಮಧುಗಿರಿಗೆ ಹೊಡೆದುಕೊಂಡು ಬಂದಿದ್ದಾರೆ, ಅವರಿಗೂ ಧನ್ಯವಾದ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮ ಸಿದ್ಧತೆ ಬರದಿಂದ ಸಾಗಿದೆ ಎಂದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮೊದಲು ಕನ್ನಡ ಸಾಹಿತ್ಯ ಪರಿಷತ್ತು ಭವನ ಲೋಕಾರ್ಪಣೆ ಮಾಡುವರು, ಬಳಿಕ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು, ಈ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ, ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಿಗೆ ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಮಾಡಿದರು, ಆದರೆ ಇಂದು ನಮ್ಮ ಸರ್ಕಾರ ಟೀಕೆಗಳನ್ನು ಸುಳ್ಳು ಮಾಡಿದೆ, ಈಗಾಗಲೇ ನಾಲ್ಕು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ, ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯಕ್ಕೆ ಸಂದೇಶ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸುಮಾರು 156 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಕಾರ್ಯಕ್ರಮದಲ್ಲಿ 13 ಸರ್ಕಾರಿ ಮಳಿಗೆಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲವಾಗುವ ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ಗ್ಯಾರಂಟಿ ಯೋಜನೆಯ ಕಾರ್ಯಕ್ರಮ ಯಶಸ್ವಿಯಾಗಿದೆ, 2 ಕೋಟಿ 19 ಲಕ್ಷ ಗ್ರಾಹಕರಿಗೆ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ, ಸುಮಾರು 13910 ಕೋಟಿಯಷ್ಟು ವಿದ್ಯುತ್ ಗ್ರಾಹಕರಿಗೆ ಸೇರಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ 1.28 ಕೋಟಿ ಮಹಿಳೆಯರಿಗೆ ಸಹಕಾರವಾಗಿದೆ, 33 ಸಾವಿರ ಕೋಟಿ ಒಂದು ವರ್ಷಕ್ಕೆ ಮೀಸಲಿರಿಸಲಾಗಿದೆ, ಶಕ್ತಿ ಯೋಜನೆಯಡಿ ಮೂರು ತಿಂಗಳಲ್ಲಿ 1.5 ಕೋಟಿ ಜನ ತುಮಕೂರು ಜಿಲ್ಲೆಯಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ ಎಂದರು.

ಅನ್ನಭಾಗ್ಯ ಯೋಜನೆಗೆ ಕೇಂದ್ರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದರೂ ಕೊಡುತ್ತಿಲ್ಲ, ನಾವು ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕೆ ಅಕ್ಕಿ ಸಿಗುವ ವರೆಗೆ 5 ಕೆಜಿ ಅಕ್ಕಿಗೆ ಹಣ ಕೊಡುತ್ತಿದ್ದೇವೆ ಎಂದ ಅವರು ರಾಜ್ಯದಲ್ಲಿ. 1.28 ಕೋಟಿ ಪಡಿತರ ಚೀಟಿದಾರರಿದ್ದು, ಅವರಿಗೆ ಅನುಕೂಲವಾಗುತ್ತಿದೆ ಎಂದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ ಕಾರ್ಯಕ್ರಮದ ಯಶಸ್ಸಿಗೆ ಶ್ರಮ ವಹಿಸಿದ್ದು, ಎಲ್ಲಾ ಅಗತ್ಯತೆ ಪೂರೈಸುವ ಕೆಲಸ ನಡೆಯುತ್ತಿದೆ, ಹೈನುಗಾರಿಕೆ ಗ್ರಾಮೀಣ ಭಾಗದಲ್ಲಿ ಪೂರಕವಾಗಿದ್ದು, ರಾಜ್ಯದಲ್ಲಿ ಇನ್ನೂ ಹೆಚ್ಚು ಹಾಲು ಉತ್ಪಾದನೆಯಾಗಬೇಕು, ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಬೇಕು, ಗ್ರಾಹಕರಿಗೆ ಗುಣಮಟ್ಟದ ಹಾಲು ಪೂರೈಕೆಗೆ ಹಾಲು ಒಕ್ಕೂಟ ಶ್ರಮ ವಹಿಸಬೇಕು ಎಂಬ ಉದ್ದೇಶದಿಂದ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಕೆಎಂಎಫ್ ಅಧ್ಯಕ್ಷ ಬೀಮಾ ನಾಯಕ್ ಮಾತನಾಡಿ ರೈತರು ಬಹಳಷ್ಟು ಸಂಕಷ್ಟದಲ್ಲಿದ್ದು, ರೈತರಿಗೆ ಹಾಲಿನ ಸರ ಹೆಚ್ಚು ಮಾಡಬೇಕು ಎಂದು ಸಹಕಾರ ಸಚಿವರು ಸಿಎಂ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ 3 ರೂ. ಹೆಚ್ಚಿಸಿ ನೇರವಾಗಿ ರೈತರಿಗೆ ಜಮಾ ಮಾಡಲಾಗಿದೆ, ಆಗ್ಟ್ 1 ರಿಂದ ಈ ಯೋಜನೆ ಜಾರಿ ಮಾಡಿದ್ದು, ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ, ಕ್ಷೀರಭಾಗ್ಯ ಯೋಜನೆಗೆ 10 ವರ್ಷ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಪಂ ಸಿಇಒ ಜೆ.ಪ್ರಭು, ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ತಾಪಂ ಇಓ ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ನಜ್ಮಾ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!