ಸರ್ವಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ದಾರ್ಶನಿಕ

ಭಾರತೀಯ ಸಂಸ್ಕೃತಿ ಉಳಿವಿಗೆ ಸಾಕಷ್ಟು ಶ್ರಮಿಸಿದ್ದಾರೆ: ಪರಂ

222

Get real time updates directly on you device, subscribe now.


ತುಮಕೂರು: ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿಯಾಗಿ, ಭಾರತೀಯ ಸಂಸ್ಕೃತಿಯ ಉಳಿವಿಗೆ ಸಾಕಷ್ಟು ಶ್ರಮಿಸಿದ್ದಾರೆ, ತನ್ಮೂಲಕ ಭಾರತದಿಂದ ಹೊರ ಜಗತ್ತಿಗೂ ಭಾರತದ ಧರ್ಮದ ಘನತೆ ಪರಿಚಯಿಸಿ ಗುರುವಿನ ಸ್ಥಾನದ ಮಹತ್ವ ಹೆಚ್ಚಿಸಿದ್ದು, ಈ ಕಾರಣಕ್ಕಾಗಿ ಅವರನ್ನು ಪೂಜ್ಯ ಭಾವನೆಯಿಂದ ಸ್ಮರಿಸುತ್ತೇನೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಡಾ.ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಪ್ರಾಚೀನ ಭಾರತ ಇಡೀ ಪ್ರಪಂಚಕ್ಕೆ ಜ್ಞಾನದ ಮೂಲವಾಗಿತ್ತು, ಪರಕೀಯರ ದಾಳಿಯಿಂದ ದೇಶದ ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳು, ಸ್ಮಾರಕಗಳು ನಾಶವಾದರೂ ಭಾರತೀಯರಲ್ಲಿದ್ದ ಜ್ಞಾನವು ನಾಶವಾಗಲಿಲ್ಲ, ಆದ್ದರಿಂದ ವಿದ್ಯೆ ಸರ್ವೋಚ್ಛವಾದುದು ಎಂದರು.

ಇಂದು ಶಿಕ್ಷಣದ ಮಹತ್ವವನ್ನು ಸರ್ವರೂ ಅರಿತಿದ್ದಾರೆ, ಸಮಾಜದ ಉನ್ನತ ಸ್ಥಾನಗಳಲ್ಲಿ ಕಂಡು ಬರುವ ವ್ಯಕ್ತಿಗಳು ಬಹುತೇಕ ಬಡತನ ಹಿನ್ನಲೆಯಿಂದ ಬಂದವರಾಗಿದ್ದು, ವಿದ್ಯೆಯಿಂದ ಉನ್ನತ ಹಂತ ತಲುಪುತ್ತಾರೆ ಎಂದ ಅವರು ತಂದೆ- ತಾಯಿಗಳಿಗೆ ತಮ್ಮ ಆಸ್ತಿ, ಒಡವೆಗಳಿಗಿಂತ ಮಕ್ಕಳ ಶಿಕ್ಷಣವೇ ಮುಖ್ಯವಾಗಬೇಕು, ಚೀನಾ ದೇಶದಲ್ಲಿ ಇಂಗ್ಲಿಷ್ ಬೋಧನೆ ಮಾಡುವಂತಹ ಸಾವಿರಾರು ಭಾರತೀಯ ಶಿಕ್ಷಕರು ಕಂಡು ಬರುತ್ತಾರೆ, ಹಾಗೆ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಶೇ.20 ರಷ್ಟು ವಿಜ್ಞಾನಿಗಳು ಭಾರತೀಯ ಮೂಲದವರಾಗಿದ್ದಾರೆ, ಪ್ರಪಂಚದ ಯಾವುದೇ ಸಂಸ್ಥೆಗಳಿಗೆ ಭೇಟಿ ನೀಡಿದರೂ ಅಲ್ಲಿ ಭಾರತೀಯ ತಜ್ಞರು, ವೈದ್ಯರು, ಶಿಕ್ಷಕರು ಕಂಡು ಬರುತ್ತಿದ್ದು, ಎಲ್ಲಾ ದೇಶಗಳಿಗೂ ಭಾರತೀಯರ ಜ್ಞಾನದ ಅವಶ್ಯಕತೆ ಇರುವುದನ್ನು ಇದು ಸಾಬೀತು ಪಡಿಸುತ್ತದೆ ಎಂದರು.

ನಾನು ಶಾಲಾ ಶಿಕ್ಷಣ ಓದುವ ಸಂದರ್ಭದಲ್ಲಿ ಗುಂಡೂರಾಯರು ಎಂಬ ಶಿಕ್ಷಕರು ದಂಡನೆಯ ಮೂಲಕ ಗಣಿತ ಶಿಕ್ಷಣ ನೀಡುತ್ತಿದ್ದರು, ಅವರು ನೀಡಿದ ಗಣಿತ ಶಿಕ್ಷಣ, ಉನ್ನತ ಶಿಕ್ಷಣದ ವರೆಗೂ ನನಗೆ ನೆರವಿಗೆ ಬಂದಿತು ಎಂದು ಸ್ಮರಿಸಿದರು.
ನಮ್ಮ ತಂದೆ ಚಿತ್ರಕಲಾ ಶಿಕ್ಷಕರಾಗಿದ್ದು, ಅನೇಕ ವಿದ್ಯಾರ್ಥಿಗಳ ಜೀವನ ರೂಪಿಸಿದ್ದಾರೆ, ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದು, ಒಬ್ಬ ಸಾಮಾನ್ಯ ಶಿಕ್ಷಕನ ಸಾಮರ್ಥ್ಯ ಇಷ್ಟಿದೆ ಎಂದರು..

ತಂತ್ರಜ್ಞಾನವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಅಂತರ ಹೆಚ್ಚಿಸಬಾರದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಗುರುಕುಲ ಹಾಗೂ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಹೋಲಿಕೆ ಮಾಡಿದಾಗ ಆಧುನಿಕ ಶಿಕ್ಷಣ ವ್ಯವಸ್ಥೆ ಎಲ್ಲರನ್ನೂ ತಲುಪುತ್ತಿದೆ ಎಂದರು.
ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಆತ್ಮ ವಿಶ್ವಾಸ ಬೆಳೆಸಿ ಅವರನ್ನು ಸಾಧಕರಾಗಿ ರೂಪಿಸುವಂತಹ ಶಿಕ್ಷಕರ ಸೇವೆ ಮಹತ್ತರವಾದುದು, ಸಮಯ ಅಮೂಲ್ಯವಾದುದು, ಶಾಲಾ ಕಾಲೇಜು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ ತಿಳಿಸುಕೊಡುವಂತಹ ನೈತಿಕ ಶಿಕ್ಷಣ ಬೋಧಿಸಬೇಕು ಎಂದರು.

ಸಮಾರಂಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗಧಾಮಯ್ಯ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು.ಜಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!