ಚಾಲಕರು, ಕ್ಲಿನರ್ಗಳಿಗೆ ಸಾಮಾಜಿಕ ಭದ್ರತೆ ಒದಗಿಸಿ

443

Get real time updates directly on you device, subscribe now.


ತುಮಕೂರು: ಸಾರಿಗೆ ಕ್ಷೇತ್ರದ ಬೆನ್ನೆಲುಬುಗಳಾಗಿರುವ ಚಾಲಕರು ಮತ್ತು ಕ್ಲಿನರ್ಗಳಿಗೆ ಸಾಮಾಜಿಕ ಭದ್ರತೆ ಒದಿಗಿಸುವ ನಿಟ್ಟಿನಲ್ಲಿ ಲಾರಿ ಮಾಲೀಕರ ಸಂಘ ಅಗತ್ಯ ಕ್ರಮ ಕೈಗೊಳ್ಳುವಂತೆ ತುಮಕೂರು ನಗರ ಶಾಸಕ ಜಿ.ಜಿ.ಜೋತಿಗಣೇಶ್ ತಿಳಿಸಿದ್ದಾರೆ.

ನಗರದ ಎಪಿಎಂಸಿ ಯಾರ್ಡ್ನ ಜಿಲ್ಲಾ ಲಾರಿ ಮಾಲೀಕರ ಸಂಘದ ಆವರಣದಲ್ಲಿ ರಾಷ್ಟ್ರೀಯ ಸಾರಿಗೆ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಚಾಲಕರು ಮತ್ತು ಕ್ಲಿನರ್ಗಳಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಅಪಘಾತ ರಹಿತ ಚಾಲಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆ, ಮಡದಿ, ಮಕ್ಕಳ ಬಿಟ್ಟು ದಿನಕ್ಕೆ ಸಾವಿರಾರು ಕಿ.ಮೀ ಡ್ರೈವಿಂಗ್ ಮಾಡಿಕೊಂಡು ಹೋಗುವ ಚಾಲಕರು ಮತ್ತು ಕ್ಲಿನರ್ಗಳ ಆರೋಗ್ಯ, ಆರ್ಥಿಕ ಸಬಲತೆಯ ಜೊತೆಗೆ ಅವರ ಕುಟುಂಬದಲ್ಲಿ ಮಕ್ಕಳ ಶಿಕ್ಷಣದ ಕಡೆಗೂ ಗಮನ ಹರಿಸುವುದು ಒಳ್ಳೆಯದು, ಈ ನಿಟ್ಟಿನಲ್ಲಿ ನಿಮ್ಮ ಜೊತೆಗೆ ಕೈಜೋಡಿಸಲು ಸಿದ್ಧ ಎಂದರು.

ಅಸಂಘಟಿತ ವಲಯದಲ್ಲಿ ಬರುವ ಲಾರಿ ಚಾಲಕರು, ಮಾಲೀಕರು, ಹಮಾಲಿಗಳ ಅನುಕೂಲಕ್ಕಾಗಿ ಕೇಂದ್ರ ಸರಕಾರ ಆಯುಷ್ಮಾನ್ ಭಾರತ್ ಕಾರ್ಡು, ಇ-ಶ್ರಮ್ ಕಾರ್ಡು ಹೆಚ್ಚಿನ ಅನುಕೂಲ ಒದಗಿಸಲಿವೆ, ಇ ಶ್ರಮ್ ಕಾರ್ಡು ಜೀವ ವಿಮೆಯನ್ನು ತಕ್ಷಣದಲ್ಲಿ ನೀಡುತ್ತಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆಯನ್ನು ಜನತೆಗೆ ಒದಗಿಸಲಿದೆ, ಸರಕಾರದ ನಿಯಮಗಳಿಂದ ಕೆಲವೊಂದು ಗೊಂದಲ ಸೃಷ್ಟಿಯಾಗಿವೆ, ಹಾಗಾಗಿ ಚಾಲಕರು ಮತ್ತು ಕ್ಲಿನರ್ಗಳ ಸಮಸ್ಯೆಗಳಿಗೆ ತಾತ್ಕಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ಮಾತುಕತೆಗೆ ಮುಂದಾದರೆ ನಿಮ್ಮೊಂದಿಗೆ ನಾವು ಕೂಡ ಸರಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು ಮಾತನಾಡಿ, ಇದೇ ಪ್ರಥಮ ಬಾರಿಗೆ ಸಾರಿಗೆ ದಿನವನ್ನು ಆಚರಿಸಲಾಗುತ್ತಿದೆ, ಸಾರಿಗೆ ಕ್ಷೇತ್ರದಲ್ಲಿಯೇ ಭೂ ಸಾರಿಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ, ತೆರಿಗೆ ಹೆಚ್ಚಳದಿಂದ ನಿಮಗೆ ಆಗಿರುವ ತೊಂದರೆಯನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದ ಅವರು ತುಮಕೂರು ಜಿಲ್ಲೆ ಅಪಘಾತಗಳಲ್ಲಿ ನಂ.1 ಸ್ಥಾನದಲ್ಲಿದೆ, ಇದರಿಂದ ಹೊರಬರಲು ಚಾಲಕರು ಸಾಕಷ್ಟು ಅಗತ್ಯ ವಿಶ್ರಾಂತಿ ಪಡೆದು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವಂತೆ ಸಲಹೆ ನೀಡಿದರು.

ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ನವೀನ್ಕುಮಾರ್ ರೆಡ್ಡಿ ಮಾತನಾಡಿ, ಕೊರೊನ ಸಂದರ್ಭದಲ್ಲಿ ಇಡೀ ದೇಶಕ್ಕೆ ಅಗತ್ಯವಿರುವ ದಿನಸಿ, ಹಣ್ಣು, ತರಕಾರಿ, ಹಾಲು ಇನ್ನಿತರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಿದ್ದು ಲಾರಿ ಚಾಲಕರು ಮತ್ತು ಕ್ಲಿನರ್ಗಳು, ಆದರೆ ಸರಕಾರ ಮಾತ್ರ ಪೊಲೀಸರು, ವೈದ್ಯರು, ಕಂದಾಯ ಇಲಾಖೆಯವರನ್ನು ಮಾತ್ರ ಕೊರೊನ ವಾರಿಯರ್ಸ್ ಎಂದು ಘೋಷಿಸಿ ಅವರಿಗೆ ಬೇಕಾದ ಸವಲತ್ತು ನೀಡಿತ್ತು, ಆದರೆ ಜೀವದ ಹಂಗು ತೊರೆದು ಕೆಲಸ ಮಾಡಿದ ಲಾರಿ ಚಾಲಕರು ಮತ್ತು ಕ್ಲಿನರ್ಗಳನ್ನು ನಿರ್ಲಕ್ಷ ಮಾಡಿತ್ತು, ಇದೇ ರೀತಿ ಎಲ್ಲಾ ವಿಷಯಗಳಲ್ಲಿ ನಮ್ಮನ್ನು ನಿರ್ಲಕ್ಷಿಸ ಲಾಗುತ್ತಿದೆ, ವಿಮಾನ ಚಲಾಯಿಸುವ ಓರ್ವ ಫೈಲೆಟ್ಗೆ ಎಷ್ಟು ಕೌಶಲ್ಯವಿದೆಯೋ ಅಷ್ಟೇ ಕೌಶಲ್ಯದಿಂದ ಲಾರಿ ಚಾಲಕರು ತಮ್ಮ ವಾಹನ ನಡೆಸುತ್ತಾರೆ, ಅವರಿಗೆ ಸಿಗುವ ಗೌರವದಲ್ಲಿ ಸಾವಿರದ ಒಂದು ಪಾಲು ನಮಗೆ ಸಿಗುವುದಿಲ್ಲ, ನಾವು ಆತ್ಮಗೌರವ ಹೆಚ್ಚಿಸಿಕೊಳ್ಳಬೇಕಿದೆ, ಬ್ರಿಟಿಷರ ಕಾಲದ ರೀತಿ ಪ್ರತಿಯೊಂದಕ್ಕೂ ಸರಕಾರಿ ಕಚೇರಿ ಅಲೆಯುವ ಬದಲು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಟ್ಯಾಕ್ಸ್, ಎಫ್ಸಿ, ಪರ್ಮಿಟ್ ಗಳನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಲಾರಿ ಮಾಲೀಕರ ಸಂಘದ ನಿರ್ದೇಶಕ ಟಿ.ಆರ್.ಸದಾಶಿವಯ್ಯ ಮಾತನಾಡಿ, ಭೂ ಸಾರಿಗೆ, ಜಲ ಸಾರಿಗೆ, ವಾಯು ಸಾರಿಗೆಯಲ್ಲಿ, ಭೂ ಸಾರಿಗೆ ಅತಿ ಪ್ರಾಮುಖ್ಯತೆ ಪಡೆದಿದೆ, ಶೇ.70 ರಷ್ಟು ಸಾಗಾಣಿಕೆ ಭೂ ಸಾರಿಗೆಯಿಂದಲೇ ನಡೆಯಲಿದೆ, ವರ್ಷದಿಂದ ವರ್ಷಕ್ಕೆ ತೆರಿಗೆ ಹೆಚ್ಚಳವಾಗುತ್ತಿದೆಯೇ ಹೊರತು ಲಾರಿ ಬಾಡಿಗೆ ಮಾತ್ರ ಹೆಚ್ಚಳವಾಗುತ್ತಿಲ್ಲ, ಅಲ್ಲದೆ ತುಮಕೂರು ಜಿಲ್ಲೆ ಇಡೀ ರಾಜ್ಯದ ಹೆಬ್ಬಾಗಿಲಾಗಿದೆ, ಇಲ್ಲಿ ಒಂದು ಟ್ರಕ್ ಟರ್ಮಿನಲ್ ಅಗತ್ಯವಿದ್ದು, ಜಿಲ್ಲಾಡಳಿತ ಜಾಗ ನೀಡಿದರೆ ಸರಕಾರವೇ ಅದನ್ನು ಕಟ್ಟಿಕೊಡಲಿದೆ, ಈ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಬೇಕೆಂದರು.

ಮನೋವೈದ್ಯರಾದ ಡಾ.ಕೀರ್ತಿ ಸುಂದರ್ ಅವರು ಚಾಲಕರು ಮತ್ತು ಕ್ಲಿನರ್ಗಳ ಮಾನಸಿಕ ಸ್ಥಿತಿಗತಿ, ಒತ್ತಡದ ಬದುಕು, ಅದರಿಂದ ಹೊರಬರಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ಯೋಗೀಶ್, ಪಾಂಡುರಂಗಯ್ಯ, ಚಿಕ್ಕರಂಗಯ್ಯ, ಮಹಮದ್ ಶಫಿವುಲ್ಲಾ, ಮುಬಾರಕ್, ನಿಸಾರ್ ಅಹಮದ್, ಬಸವರಾಜಯ್ಯ ಅವರನ್ನು ಅಭಿನಂದಿಸಲಾಯಿತು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಬಸವಪ್ರಸನ್ನ, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್, ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಎಂ.ವಿ.ಸುಮ, ಲಾರಿ ಮಾಲೀಕರ ಬಳಕೆದಾರರ ಸೌಹಾರ್ಧ ಸಂಘದ ಅಧ್ಯಕ್ಷ ಎನ್.ಆರ್.ವಿಶ್ವಾರಾಧ್ಯ, ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಶೌಕತ್ವುಲ್ಲಾ ಖಾನ್, ಉಪಾಧ್ಯಕ್ಷ ಅಶೋಕ್ಕುಮಾರ್ ಜೈನ್, ಪದಾಧಿಕಾರಿಗಳಾದ ನಾಗಭೂಷಣ್ ಆರಾಧ್ಯ, ಶಿವರುದ್ರಾರಾಧ್ಯ, ನಟರಾಜು, ಸುರೇಶಬಾಬು, ಟಿ.ಎಸ್.ಸುರೇಶ್, ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!