ತುಮಕೂರು: ತುಮಕೂರಿನ ಜೂನಿಯರ್ ಕಾಲೇಜಿನ ಮೈದಾನದಲ್ಲಿರುವ ಗಾಂಧೀಜಿ ತಂಗಿದ್ದ ಕೊಠಡಿಯನ್ನು ಅಭಿವೃದ್ಧಿಪಡಿಸಬೇಕೆಂದು ಕಾಲೇಜಿನ ಪ್ರಾಂಶುಪಾಲ ಜಯರಾಮಯ್ಯ ಮನವಿ ಮಾಡಿದ್ದಾರೆ.
ತುಮಕೂರಿನಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಾಗೂ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ನೆನಪಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಮಕೂರಿನ ಜೂನಿಯರ್ ಕಾಲೇಜು ಹಲವಾರು ಮಹತ್ವದ ಘಟ್ಟಗಳಿಗೆ ಸಾಕ್ಷಿಯಾಗಿದೆ. ಗಾಂಧೀಜಿ ಅವರು ತಂಗಿದ್ದ ಜಾಗ ಇದಾಗಿದ್ದರೆ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ರಾಜಾರಾಮಣ್ಣ ಅವರು ಇದೇ ಶಾಲೆಯಲ್ಲಿ ಓದಿರುವುದು. ಇಂತಹ ಕಾಲೇಜನ್ನು ಅಭಿವೃದ್ಧಿ ಪಡಿಸಬೇಕೆಂದು ಮನವಿ ಮಾಡಿದರು. 1927ರಲ್ಲಿ ಗಾಂಧೀಜಿ ಅವರು ತಂಗಿದ್ದ ಈ ಕೊಠಡಿ ಹಾಳಾಗಿದೆ, ಇದನ್ನು ಪುನರುಜ್ಜೀವನಗೊಳಿಸಬೇಕು. ಕಿಟಕಿಗಳು ಗೆದ್ದಲು ಹಿಡಿಯುತ್ತಿವೆ. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಇದನ್ನು ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು. ಈ ಕೊಠಡಿ ಅಭಿವೃದ್ಧಿ ಪಡಿಸಲು ಈಗಾಗಲೇ ಮನವಿ ಮಾಡಿದ್ದೇವೆ. ಒಂದು ವೇಳೆ ಸರಕಾರ ಇದರ ಪುನರುಜ್ಜೀವನಕ್ಕೆ ಹಣ ನೀಡಿದರೆ ಗಾಂಧೀಜಿ ಕುರಿತ ಮಾಹಿತಿ ಕೇಂದ್ರವನ್ನಾಗಿ ರೂಪಿಸುವುದಾಗಿ ತಿಳಿಸಿದರು.
ಬಾಪೂಜಿ ವಿದ್ಯಾ ಸಂಸ್ಥೆಯ ಎಂ. ಬಸವಯ್ಯ ಮಾತನಾಡಿ ಗಾಂಧೀಜಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಕಾಲೇಜು ಕೊಠಡಿಯಲ್ಲಿ ಗಾಂಧಿ ಅವರು ಉಳಿದುಕೊಂಡಿದ್ದು ಇದೇ ಮೊದಲು. 1927ರಲ್ಲಿ ಗಾಂಧೀಜಿ ಅವರು ಅನಿರೀಕ್ಷಿತವಾಗಿ ತುಮಕೂರಿಗೆ ಬಂದಿದ್ದಾಗ ಅವರನ್ನು ಈ ಕಾಲೇಜಿನ ಕೊಠಡಿಯಲ್ಲಿ ತಂಗಲು ವ್ಯವಸ್ಥೆ ಮಾಡಲಾತು ಸ್ಮರಿಸಿದರು.
ಗಾಂಧಿ ಚಿಂತಕ ನರಸಿಂಹಯ್ಯ ಮಾತನಾಡಿ, ಗಾಂಧೀಜಿ ಎರಡು ಬಾರಿ ತುಮಕೂರಿಗೆ ಬಂದಿದ್ದರು. 1927 ಮತ್ತು 1930ರಲ್ಲಿ ಎಂದು ಮಾಹಿತಿ ನೀಡಿದರು. ಪಂಡಿತ್ ಜವಹರ್ ಮಾತನಾಡಿ, ಸರ್ಕಾರ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಿಸುವ ಉದ್ದೇಶ ಹೊಂದಿದೆ. ಹೀಗಾಗಿ ಈ ಕಟ್ಟಡವನ್ನು ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು.
ಉಪನ್ಯಾಸಕ ಮೋಹನ ಕುಮಾರ್ ಮಾತನಾಡಿ, ಗಾಂಧೀಜಿ ವ್ಯಕ್ತಿಯಲ್ಲ. ಅವರೊಂದು ಶಕ್ತಿ, ನಾವು ಗಾಂಧೀಜಿಯವರ ತತ್ವಗಳನ್ನು ದೂರ ತಳ್ಳುವಂತ ಕೆಲಸ ಮಾಡುತ್ತಿದ್ದೇವೆ, ಅವರ ಮೌಲ್ಯಗಳು ಯಾವತ್ತೂ ದೂರ ಹೋಗುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಇತರರು ಇದ್ದರು.
Comments are closed.