ರೋಗದ ಹೊಡೆತ- ತೆಂಗಿನ ಸುಳಿಗೆ ಆಪತ್ತು

ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಸಂಕಷ್ಟ

264

Get real time updates directly on you device, subscribe now.


ಚೇತನ್
ಚಿಕ್ಕನಾಯಕನಹಳ್ಳಿ: ಇತ್ತೀಚಿನ ದಿನಗಳಲ್ಲಿ ಕೊಬ್ಬರಿ ದರ ನಿರಂತರವಾಗಿ ಕುಸಿತವಾಗಿದ್ದು, ತೆಂಗು ನಂಬಿ ಜೀವನ ಸಾಗಿಸುತ್ತಿದ್ದ ರೈತರ ಬಾಳು ಕಷ್ಟವಾಗಿದೆ, ಇದರ ಜೊತೆಗೆ ತೆಂಗಿನ ತೋಟಕ್ಕೆ ರೋಗ ಕಾಣಿಸಿಕೊಂಡಿದ್ದು ನೂರಾರು ವರ್ಷದ ತೆಂಗಿನ ಮರಗಳು ನಾಶವಾಗುತ್ತಿವೆ, ರೈತರ ಜೊತೆ ನಿರಂತರ ಸಂಪರ್ಕ ಹೊಂದಿ ತೆಂಗು ಬೆಳೆಗಾರರಿಗೆ ಮಾರ್ಗದರ್ಶನ ನೀಡಬೇಕಾದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಲ್ಲಿ ಹೋಗಿದ್ದಾರೆ ಎಂಬ ಪ್ರಶ್ನೆ ರೈತರಲ್ಲಿ ಕಾಡುತ್ತಿದೆ.
ತಾಲೂಕಿನಲ್ಲಿ ಬಹುತೇಕ ರೈತರು ತೆಂಗು ಕೃಷಿಯನ್ನೇ ಮುಖ್ಯ ಬೆಳೆಯನ್ನಾಗಿಸಿಕೊಂಡಿದ್ದು, ಜೀವನೋಪಯಕ್ಕಾಗಿ ತೆಂಗಿನ ಮರಗಳನ್ನೇ ಅವಲಂಭಿಸಿದ್ದಾರೆ, 50 ರಿಂದ 150 ವರ್ಷಗಳ ತೆಂಗಿನ ಮರಗಳೇ ಹೆಚ್ಚಾಗಿ ತಾಲೂಕಿನಲ್ಲಿ ಇವೆ, ಆದರೆ ಇಂದು ತೆಂಗಿನ ಮರಗಳು ವಿವಿಧ ರೋಗಗಳಿಗೆ ತುತ್ತಾಗಿ ಬಿದ್ದು ಹೋಗುತ್ತಿವೆ, ತೆಂಗು ಬೆಳೆಗಾರರು ಆತಂಕದಲ್ಲಿದ್ದು, ಕೆಲ ರೈತರ ತೋಟಗಳಲ್ಲಿ ಪ್ರತಿ ವರ್ಷ ಸುಮಾರು 5ಕ್ಕೂ ಹೆಚ್ಚು ಮರಗಳು ಸುಳಿ ಕಳೆದುಕೊಳ್ಳುತ್ತಿವೆ.
ತುಮಕೂರಿಗೆ ಕಲ್ಪತರು ಜಿಲ್ಲೆ ಅಂತಾನೆ ಹೆಸರುವಾಸಿ, ತೆಂಗನ್ನು ಹೆಚ್ಚಾಗಿ ಇಲ್ಲಿನ ರೈತರು ಬೆಳೆಯುತ್ತಾರೆ, ತೆಂಗಿನ ತೋಟಗಳಿಂದ ಬಹುತೇಕ ರೈತರ ಜೀವ ನಡೆಯುತ್ತಿದ್ದು ಕಳೆದ ಕೆಲ ವರ್ಷಗಳ ಹಿಂದೆ ನೀರಿನ ಕೊರತೆ ಹಾಗೂ ಮಳೆಯ ಅಭಾವದಿಂದ ರೈತರು ಸಾವಿರಾರು ಮರಗಳನ್ನು ಕಳೆದುಕೊಂಡರು ಈ ವರ್ಷ ಒಳ್ಳೆಯ ಮಳೆ ಹಾಗೂ ಹೇಮಾವತಿ ನೀರಿನಿಂದ ರೈತರಿಗೆ ನೀರಿನ ಅಭಾವವಿಲ್ಲವಾಗಿದೆ, ಆದರೆ ತೆಂಗಿನ ಮರಕ್ಕೆ ವಿವಿಧ ಕಾಯಿಲೆ ಬರುತ್ತಿದ್ದು ನೂರಾರು ವರ್ಷದ ಹಳೆಯ ತೆಂಗಿನ ಮರಗಳು ರೈತರ ಕೈತಪ್ಪುತ್ತಿವೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸೂಕ್ತ ಮಾರ್ಗದರ್ಶನ ರೈತರಿಗೆ ಅತ್ಯಂತ ಅವಶ್ಯಕವಾಗಿದೆ.
ಕೊಬ್ಬರಿ ದರ ಕುಸಿತ, ತೆಂಗಿನ ಮರ ನಿರ್ವಹಣೆ ಕಷ್ಟ: ಕೊಬ್ಬರಿ ಕ್ವಿಂಟಾಲ್ಗೆ 8000 ರೂ. ಗಳಾಗಿದ್ದು ತೋಟಗಳಿಗೆ ಬೇಸಾಯ, ಗೊಬ್ಬರ, ಮಣ್ಣು, ಪೌಷ್ಟಿಕಾಂಶ ಹಾಕಲು ರೈತರಿಗೆ ಸಾಧ್ಯವಿಲ್ಲದಂತಾಗಿದೆ, ಒಂದು ಕ್ವಿಂಟಾಲ್ ಕೊಬ್ಬರಿ ಮಾರಿದರು ಒಂದು ಲೋಡ್ ಕುರಿ ಗೊಬ್ಬರ ಬರುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ತೆಂಗಿನ ಮರಗಳ ಸುಳಿ ಬೀಳುತ್ತಿವೆ, ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ, ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲತ್ತು ಕಟ್ಟ ಕಡೆಯ ರೈತನಿಗೆ ಸಿಗದಂತಾಗಿದೆ.

ದಾಖಲೆಗಾಗಿ ತೋಟಗಾರಿಕೆ ಇಲಾಖೆಯ ಕಾರ್ಯಕ್ರಮ: ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ, ಕಚೇರಿಗೆ ಬಂದು ಕೇಳಿದ ರೈತರಿಗೆ ಮಾತ್ರ ಮಾಹಿತಿ ನೀಡುತ್ತಿದ್ದಾರೆ, ರೈತರ ತೋಟಗಳಿಗೆ ಭೇಟಿ ನೀಡುವ ಕೆಲಸ ನಮ್ಮದಲ್ಲ ಎಂಬ ಭಾವನೆ ರೂಢಿಸಿಕೊಳ್ಳುತ್ತಿದ್ದಾರೆ, ದಾಖಲೆಗೆ ಕೆಲ ತೋಟಗಳಿಗೆ ಭೇಟಿ ನೀಡಿ ಫೋಟೊ ಪಡೆದು ತಮ್ಮ ಫೈಲ್ಗಳಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ, ತಾಲೂಕಿನಲ್ಲಿ 3237 ಹೆಕ್ಟೇರ್ನಲ್ಲಿ ತೆಂಗು ಬೆಳೆಯುತ್ತಿದ್ದು, ಬಹುತೇಕ ತೋಟಗಳಲ್ಲಿ ಪ್ರತಿ ವರ್ಷ 5ಕ್ಕೂ ಹೆಚ್ಚು ತೆಂಗಿನ ಮರ ಸುಳಿ ಬೀಳುತ್ತಿವೆ, ಪತ್ರಿ ತೋಟಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಪ್ರಸ್ತುತ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಲ್ಲಿದ್ದು ಬಹುತೇಕ ರೈತರು ಮೊಬೈಲ್ಗಳನ್ನು ಹೊಂದಿದ್ದಾರೆ, ವಾಟ್ಸಾಪ್ ಮೂಲಕವಾದರು ಸಹ ತೆಂಗಿನ ಮರಗಳ ನಿರ್ವಹಣೆ ಹಾಗೂ ಅವುಗಳಿಗೆ ಬರುವ ಕಾಯಿಲೆ ಹಾಗೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಬಹುದಾಗಿದೆ, ಆದರೆ ಇದರ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ

ತೆಂಗನ್ನು ಕಾಡುತ್ತಿರುವ ರೋಗಗಳು: ತಾಲೂಕಿನ ಬಹುತೇಕ ತೆಂಗಿನ ತೋಟಗಳಲ್ಲಿ ತೆಂಗಿನ ಗರಿ ಉದುರುವುದು, ಸುಳಿ ಬೀಳುವುದು, ಮರದಲ್ಲಿ ರಸ ಬರುವುದು, ಗರಿ ಒಣಗುವುದು, ಬೇರುನ್ನು ಹುಳ ತಿನ್ನುವುದು ಸೇರಿದಂತೆ ಅನೇಕ ರೋಗಗಳು ತೆಂಗಿನ ಮರಗಳನ್ನು ಕಾಡುತ್ತಿವೆ, ಇದರಿಂದ ತೆಂಗಿನ ಮರಗಳು ರೈತರ ಕೈತಪ್ಪುತ್ತಿವೆ.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಚೇರಿ ಬಿಟ್ಟು ರೈತರ ತೋಟಗಳಿಗೆ ಭೇಟಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕಿದೆ, ತೆಂಗಿನ ಮರವನ್ನು ರೈತರು ಕಳೆದುಕೊಂಡರೆ ಮತ್ತೆ ಬೆಳೆಸಲು 10 ವರ್ಷಗಳೇ ಬೇಕು, ಕೊಬ್ಬರಿ ದರದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮರಗಳನ್ನು ಕಳೆದುಕೊಳ್ಳುವ ದುಸ್ಥಿತಿ ಬರುತ್ತಿದೆ, ಸರ್ಕಾರ ಹಾಗೂ ಇಲಾಖೆ ರೈತರಿಗೆ ತೆಂಗಿನ ಮರಕ್ಕೆ ಬೇಕಾದ ಪೌಷ್ಠಿಕಾಂಶ ನೀಡಬೇಕು.
-ಸೀಮೆಎಣ್ಣೆ ವಿನಯ್, ಯುವ ರೈತ, ಚಿಕ್ಕನಾಯಕನಹಳ್ಳಿ

Get real time updates directly on you device, subscribe now.

Comments are closed.

error: Content is protected !!