ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಕ್ರಮ ವಹಿಸಿ: ಡೀಸಿ

402

Get real time updates directly on you device, subscribe now.


ತುಮಕೂರು: ಜಿಲ್ಲೆಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಅಪಘಾತ ಕಪ್ಪು ಸ್ಥಳಗಳ ಸಂಖ್ಯೆ ಕಡಿಮೆ ಮಾಡಿ ಪ್ರಾಣಹಾನಿ ತಪ್ಪಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆಯವರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಸೇರಿದಂತೆ ಒಟ್ಟು 530 ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿದ್ದು, ಆ ಸ್ಥಳಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ತ್ವರಿತವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಜಿಲ್ಲೆಯಲ್ಲಿ ಹಾದು ಹೋಗುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಂಡಿಗಳು ಬಿದ್ದಿದ್ದಲ್ಲಿ ಶೀಘ್ರವಾಗಿ ಸರಿಪಡಿಸಿ ಎಂದು ಗೃಹ ಸಚಿವರು ಹಿಂದಿನ ಸಭೆಯಲ್ಲಿ ಹೇಳಿದ್ದಾರೆ, ಎನ್ಹೆಚ್ಎಐ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರವಾಗಿ ದುರಸ್ತಿ ಕೆಲಸ ಪೂರ್ಣಗೊಳಿಸಲು ತಿಳಿಸಿದರು.

ತುಮಕೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 260 ರ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲವಾದ ಕಾರಣ ಟೋಲ್ ಶುಲ್ಕ ಸಂಗ್ರಹ ಮಾಡಬಾರದು ಎಂದ ಅವರು ಗುಬ್ಬಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಕಾಮಗಾರಿ ವಿಳಂಬವಾಗಿದ್ದು, ಕಾಮಗಾರಿ ಪ್ರಾರಂಭಿಸಬೇಕಾದ ಸ್ಥಳವನ್ನು ಕೂಡಲೇ ಸರ್ವೆ ಮಾಡಿಸಿ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಯಾವುದೇ ಟೋಲ್ಗಳಲ್ಲಿ ವಿಐಪಿ ವಾಹನಗಳು ಮತ್ತು ಆ್ಯಂಬುಲೆನ್ಸ್ ವಾಹನ ಸಂಚರಿಸಲು ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ತುಮಕೂರು- ಬೆಂಗಳೂರು ಟೋಲ್ ಪ್ಲಾಜಾ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ ಎಂದರಲ್ಲದೆ ಟೋಲ್ ವ್ಯಾಪ್ತಿಯಲ್ಲಿ ಒಂದು ಆ್ಯಂಬುಲೆನ್ಸ್ ಹಾಗೂ ಹೆದ್ದಾರಿ ಗಸ್ತು ವಾಹನ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ ಎಂದು ಹೇಳಿದರು.

ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಒಂದು ಅಪಘಾತ ಸಂಭವಿಸಿದೆ, ಇದಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿಗಳನ್ನು ಅವಧಿಯೊಳಗೆ ಮುಗಿಸದೆ ವಿಳಂಬ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ, ಆದ್ದರಿಂದ ಅಪಘಾತ ಸಂಭವಿಸಿದ ರಸ್ತೆಯು ಯಾವ ಇಲಾಖೆಯ ವ್ಯಾಪ್ತಿಗೆ ಬರುತ್ತದೆಯೂ ಆ ಇಲಾಖೆಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸೂಚನೆ ನೀಡಿದರು.

ಪಾವಗಡ ಪಟ್ಟಣದಿಂದ ಚಳ್ಳಕೆರೆಗೆ ಸಂಪರ್ಕ ಕಲ್ಪಿಸುವ 36 ಕಿ.ಮೀ ರಸ್ತೆಯೂ ತುಂಬಾ ಹದಗೆಟ್ಟಿದೆ ಎಂದು ಮಧುಗಿರಿ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕೊರಟಗೆರೆ ಮತ್ತು ಪಾವಗಡ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಒಂದು ಪ್ರಸ್ತಾವನೆ ಸಿದ್ದಪಡಿಸಿ ಎಂದರು.

ಹೆಚ್ಎಎಲ್ ಫ್ಯಾಕ್ಟರಿ ಮುಂಭಾಗದಲ್ಲಿ ಕಾರ್ಮಿಕರ ಅನುಕೂಲಕ್ಕಾಗಿ ಬಸ್ ತಂಗುದಾಣವನ್ನು ನಿರ್ಮಿಸಲು ಹೆದ್ದಾರಿ ಪ್ರಾಧಿಕಾರದವರು ಸ್ಥಳವನ್ನು ಗುರುತಿಸಿ ಅದಕ್ಕೆ ಅನುಮತಿ ನೀಡಬೇಕು ಎಂದು ಹೇಳಿದರು.

ಕೆಶಿಪ್, ಲೋಕೋಪಯೋಗಿ ಇಲಾಖೆ, ಪಾಲಿಕೆ ಸೇರಿದಂತೆ ಈ ಮೂರು ಇಲಾಖೆಯವರು ಯಾರಾದರೂ ಕೂಡಲೇ ನಗರದ ಸಿರಾಗೇಟ್ನಲ್ಲಿ ಬಿದ್ದಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚುವುದರ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.

ತುಮಕೂರು- ಮಧುಗಿರಿ ರಸ್ತೆಯಲ್ಲಿರುವ ಎರಡು ಟೋಲ್ಗಳಲ್ಲಿ ಕೆಆರ್ಡಿಸಿಎಲ್ ಅವರು ಸರಿಯಾಗಿ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಉಪವಿಭಾಗಾಧಿಕಾರಿ ಗೌರವ್ಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರಾದ ಹೇಮಲತಾ, ಸುರೇಶ್, ಆರ್ಟಿಓ ಅಧಿಕಾರಿ ರಾಜು, ಕೆಆರ್ಡಿಸಿಎಲ್, ಹೆದ್ದಾರಿ ಪ್ರಾಧಿಕಾರ, ಕೆಶಿಪ್ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!