ಕರೆಂಟ್ ಕಣ್ಣಾಮುಚ್ಚಾಲೆ ವಿರುದ್ಧ ಬಿಜೆಪಿ ಕಿಡಿ

419

Get real time updates directly on you device, subscribe now.


ತುಮಕೂರು: ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನಾ ಮರವಣಿಗೆ ನಡೆಸಿ ಅಧೀಕ್ಷಕ ಇಂಜಿನಿಯರ್ಗೆ ಮನವಿ ಸಲ್ಲಿಸಲಾಯಿತು.
ಬೆಸ್ಕಾಂ ಕಚೇರಿ ಬಳಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ರೈತ ಬರಗಾಲದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ, ಮಳೆಯಿಲ್ಲದೆ ಹಾಕಿದ್ದ ಬೆಳೆ ನಷ್ಟವಾಗಿದೆ, ಬೆಳೆ ಉಳಿಸಿಕೊಳ್ಳಲು ನೀರಾವರಿ ಪಂಪ್ಸೆಟ್ಗಳ ಮೊರೆ ಹೋಗಿದ್ದಾರೆ, ಇಂತಹ ಸಂದರ್ಭದಲ್ಲಿ ಸರಕಾರ ವಿದ್ಯುತ್ ಕಡಿತ ಮಾಡುವ ಮೂಲಕ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ, ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ರಾಜ್ಯದಲ್ಲಿ ಮಳೆಯಿಲ್ಲದೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ, ಹೀಗಿದ್ದರೂ ಸರಕಾರ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ನಂತೆ ನೀರು ಹರಿಸುತ್ತಿದೆ, ಅಲ್ಲದೆ ಸುಮಾರು 135 ತಾಲೂಕುಗಳಲ್ಲಿ ಬರ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಅಧಿಕಾರಿಗಳಾಗಲಿ ಬರ ಅಧ್ಯಯನ ನಡೆಸಿಲ್ಲ, ಇದರ ಬಗ್ಗೆ ಸರಕಾರ ತೀವ್ರ ನಿರ್ಲಕ್ಷ ವಹಿಸಿದೆ, ಅಲ್ಲದೆ ಮೂರು ಬಾರಿ ವಿದ್ಯುತ್ ಬಿಲ್ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ, ಇದು ಖಂಡನೀಯ, ಅಲ್ಲದೆ ರೈತರಿಗೆ ಕೇಂದ್ರ ಸರಕಾರ ನೀಡುತ್ತಿದ್ದ ಕೃಷಿ ಸನ್ಮಾನ ಯೋಜನೆಯನ್ನು ನಿಲ್ಲಿಸಿದೆ, ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಅನೇಕ ಯೋಜನೆ ಸ್ಥಗಿತಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಶಿವಪ್ರಸಾದ್ ಆರೋಪಿಸಿದರು.

ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ, ಸರಕಾರ ಒಂದು ದಿನದ ವಿದ್ಯುತ್ ಖರೀದಿಗೆ 40 ಕೋಟಿ ರೂ. ಬೇಕು, ಗ್ಯಾರಂಟಿಗಳಿಗೆ ಹಣ ಹೊಂದಿಸುವ ಭರದಲ್ಲಿ ವಿದ್ಯುತ್ ಉತ್ಪಾದನೆಯನ್ನೇ ನಿಲ್ಲಿಸಿದೆ, ಇದರ ಪರಿಣಾಮ ಸಮರ್ಪಕ ವಿದ್ಯುತ್ ಸರಬರಾಜು ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್ ಸರಕಾರ ಬಂದ ನೂರು ದಿನಗಳಲ್ಲಿ ನೂರಾರು ತಪ್ಪುಗಳನ್ನು ಮಾಡಿ, ಜನತೆಯಿಂದ ಛೀಮಾರಿಗೆ ಒಳಗಾಗಿದೆ, ಇಂತಹ ಸರಕಾರ ಹೋಗಬೇಕು ಎಂಬುದು ಜನರ ಆಶಯವಾಗಿದೆ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆಯಡಿ ಶೇ.50 ರಷ್ಟು ಪ್ರಗತಿಯಾಗಿಲ್ಲ, ಇವರ ಗ್ಯಾರಂಟಿ ನಂಬಿ ಮತ ನೀಡಿದ ಜನರು ಭ್ರಮ ನಿರಶನಕ್ಕೆ ಒಳಗಾಗಿದ್ದಾರೆ, ಇದು ಸಾಂಕೇತಿಕ ಹೋರಾಟವಾಗಿದೆ, ಮುಂದಿನ ಒಂದು ವಾರದೊಳಗೆ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ದಿನದ 6 ಗಂಟೆ ಗುಣಮಟ್ಟದ ವಿದ್ಯುತ್ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ 2 ಗಂಟೆ ಗುಣಮಟ್ಟದ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ, ಇಂತಹ ಸಂದರ್ಭದಲ್ಲಿ 10 ಕೋಟಿ ರೂ. ಗಳಿಗೂ ಹೆಚ್ಚು ಖರ್ಚು ಮಾಡಿ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಆಚರಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಅವರು ಶಕ್ತಿ ಯೋಜನೆ ಮಂಚೂರು ಮಾಡಿ ಬಸ್ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ, ಇದರಿಂದ ವಿದ್ಯಾರ್ಥಿಗಳು, ದಿನವಹಿಡಿ ಓಡಾಡುವವರು ಪರದಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸರಕಾರದ ಪ್ರತಿ ತಪ್ಪುಗಳ ವಿರುದ್ಧ ಹೋರಾಟ ನಡೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ನರಸಿಂಹಮೂರ್ತಿ, ಸತ್ಯಮಂಗಲ ಜಗದೀಶ್, ಬಿ.ಎಸ್.ನಾಗಣ್ಣ, ಹನುಮಂತರಾಜು, ವಿನಯ್ ಬಿದರೆ, ಮಹಿಳಾ ಘಟಕದ ಅಂಬಿಕಾ ಹುಲಿನಾಯ್ಕರ್ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!