ತುಮಕೂರು: ಸರ್ಕಾರದ ಆಡಳಿತದಲ್ಲಿ ಕಂದಾಯ ಇಲಾಖೆಗೆ ದೊಡ್ಡ ಪಾತ್ರವಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಪರವಾಗಿ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂದಾಯ ಇಲಾಖೆಯು ಸರ್ಕಾರದ ಮಾತೃ ಇಲಾಖೆಯಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಜನ ಕಂದಾಯ ಇಲಾಖೆ ಕಚೇರಿಗೆ ಜಾತಿ, ಆದಾಯ ಪ್ರಮಾಣ, ಪಹಣಿ, ಸರ್ವೆ ಇನ್ನೂ ಮುಂತಾದ ಕೆಲಸ ಕಾರ್ಯಗಳಿಗಾಗಿ ಜನರು ಬರುತ್ತಾರೆ, ಸಾರ್ವಜನಿಕರನ್ನು ಸುಖ ಸುಮ್ಮನೇ ಅಲೆದಾಡಿಸದೆ ಕೆಲಸದಲ್ಲಿ ವೇಗ ಪಡೆದುಕೊಂಡು ಜನಸಾಮಾನ್ಯರ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು.
ಜನರು ಕೆಲಸ ಕಾರ್ಯ ಮಾಡುವುದನ್ನು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಾರೆ, ಅವರ ಅರ್ಧ ಜೀವನ ಕಚೇರಿಗಳಿಗೆ ಎಡ ತಾಕುವುದರಲ್ಲಿ ಕಳೆದು ಹೋಗುತ್ತದೆ, ಆದುದರಿಂದ ಸಮಸ್ಯೆ ಹೊತ್ತು ತರುವ ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿ ಎಂದು ಸೂಚಿಸಿದ ಅವರು ಕಂದಾಯ ಇಲಾಖೆ ಜನರ ಜೀವನಕ್ಕೆ ಪೂರಕವಾಗಿ ಕೆಲಸ ಮಾಡಬೇಕು, ಜನರ ಜೀವ ಹಿಂಡುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.
2019- 20ನೇ ಸಾಲಿನಲ್ಲಿ ಬರಪೀಡಿತ ತಾಲ್ಲೂಕುಗಳಾಗಿ ಚಿಕ್ಕನಾಯಕನ ಹಳ್ಳಿ, ಶಿರಾ, ತಿಪಟೂರಿಗೆ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿದ್ದ 70 ಲಕ್ಷ ರೂ. ಎಸ್ಡಿಆರ್ಎಫ್ ಪಿಡಿ ಖಾತೆಯಲ್ಲಿ ಖರ್ಚಾಗದೆ ಉಳಿದಿದ್ದು, ಅನುದಾನವನ್ನು ಯಾಕೆ ಉಳಿಸಿಕೊಂಡಿದ್ದೀರಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು ಸದರಿ ಅನುದಾನವನ್ನು ಜಿಲ್ಲಾ ಪಂಚಾಯತ್ಗೆ ವರ್ಗಾಯಿಸುವಂತೆ ಸೂಚಿಸಿದರು.
ಜೆ ಸ್ಲಿಪ್, ಪಾವತಿ ಮ್ಯುಟೆಷನ್ ವ್ಯವಸ್ಥೆಯನ್ನು ಹಾಗೆ ಉಳಿಸಿಕೊಂಡು ಉಳಿದ ಸೇವೆಗಳನ್ನು ಸ್ವಯಂ ಚಾಲಿತವಾಗಿ ಮ್ಯುಟೆಷನ್ ಮಾಡುವ ಮೂಲಕ ಕೆಲಸದ ಒತ್ತಡ ಕಡಿಮೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳ ಸಲಹೆ ಸೂಚನೆ ಆಲಿಸಿದ ಸಚಿವರು, ತುಮಕೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 2-5 1800 ಹಾಗೂ 5 ವರ್ಷ ಮೀರಿದ 5300 ಪ್ರಕರಣ ಸೇರಿದಂತೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೋರ್ಟ್ ಕೇಸ್ ಫೆಂಡೆನ್ಸಿ 11,000 ದಷ್ಟಿದ್ದು ಇದು ಒಪ್ಪಿಕೊಳ್ಳುವ ಅಂಕಿ ಅಂಶ ಅಲ್ಲ, ಆದುದರಿಂದ ಉಪ ವಿಭಾಗಾಧಿಕಾರಿಗಳು ಅವರು ವಾರದಲ್ಲಿ ನಾಲ್ಕು ದಿನ ಕೋರ್ಟ್ ನಡೆಸಬೇಕು, ಇನ್ನು ಎರಡು ತಿಂಗಳೊಳಗಾಗಿ ಅರ್ಧದಷ್ಟು ಪ್ರಕರಣ ಕಡಿಮೆ ಮಾಡಬೇಕು ಎಂದು ಸೂಚಿಸಿದರು.
ಬಗರ್ ಹುಕ್ಕಂ ಯೋಜನೆಯಡಿ ಅರ್ಹ ಬಡವರಿಗೆ ಸಾಗುವಳಿ ಚೀಟಿ ದೊರಕಬೇಕು, ಅರ್ಜಿ ಸಲ್ಲಿಸಿದ ಅರ್ಜಿದಾರರ ಜಮೀನಿಗೆ ಗ್ರಾಮ ಲೆಕ್ಕಾಧಿಕಾರಿಗಳು ತೆರಳಿ ವೀಡಿಯೋ ಮತ್ತು ಫೋಟೋ ದಾಖಲೀಕರಿಸಿ ಅಭಿವೃದ್ಧಿಪಡಿಸಲಾಗಿರುವ ಆಪ್ನಲ್ಲಿ ಅಪ್ಲೋಡ್ ಮಾಡಬೇಕು, ತದನಂತರ 2002ರ ನಂತರ ಸಾಗುವಳಿ ಮಾಡಿರುವ ಸದರಿ ಜಮೀನಿನ ಛಾಯಾಚಿತ್ರವನ್ನು ಸಂಬಂಧಿಸಿದ ತಹಶೀಲ್ದಾರರಿಗೆ ಕಳುಹಿಸಲಾಗುವುದು, ಅಂದಿನಿಂದಲೂ ಸಾಗುವಳಿ ಮಾಡುತ್ತಿರುವುದು ಕಂಡು ಬಂದಲ್ಲಿ ಸಾಗುವಳಿ ಸಕ್ರಮೀಕರಣ ಸಮಿತಿಯ ಅನುಮತಿ ಪಡೆದು ಅರ್ಹರಿಗೆ ಸಾಗುವಳಿ ಚೀಟಿ ನೀಡಬಹುದು, ಅಂತೆಯೇ ಸದರಿ ಅರ್ಜಿದಾರನು 4.30 ಎಕರೆ ಜಮೀನು ಹೊಂದಿಲ್ಲದಿರುವುದಾಗಿ ಖಾತರಿ ಪಡಿಸಿಕೊಂಡು, ವಿಸ್ತೀರ್ಣ ಬೌಂಡರಿ ಗುರುತಿಸಿ ಜಿಯೋಫೆಂನ್ಸಿಂಗ್ ಮಾಡಬೇಕು ಎಂದರು.
ತುಮಕೂರು ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಕಚೇರಿಗಳಲ್ಲಿ ಕಡ್ಡಾಯವಾಗಿ ಇ- ಆಫೀಸ್ ಜಾರಿಗೊಳಿಸಬೇಕು, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾವೇರಿ-2 ತಂತ್ರಾಂಶ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಜನರನ್ನು ಗಂಟೆಗಟ್ಟಲೆ ಕಾಯಿಸಬಾರದು, ಜನಪರವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿ ಸಿಬ್ಬಂದಿ ನಡೆದುಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಿರಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ನೂರಾರು ಬೋಗಸ್ ಹಕ್ಕುಪತ್ರ ವಿತರಣೆಯಾಗಿದ್ದು, 1500 ಎಕರೆಗೂ ಹೆಚ್ಚು ಅರಣ್ಯ ಭೂಮಿ ಭೂಕಬಳಿಕೆದಾರರ ಪಾಲಾಗಿದ್ದು, ಈ ಕುರಿತಂತೆ ತನಿಖೆ ನಡೆಸುವಂತೆ ಕಂದಾಯ ಸಚಿವರಲ್ಲಿ ಮನವಿ ಮಾಡಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಧುಗಿರಿ ಉಪ ವಿಭಾಗಾಧಿಕಾರಿಗಳು ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಂಡು ಇನ್ನೊಂದು ತಿಂಗಳೊಳಗಾಗಿ ತನಿಖೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಸರ್ಕಾರಿ ಜಮೀನು ರಕ್ಷಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು ಎಂದು ಈ ಸಂದರ್ಭ ಸೂಚಿಸಿದರು. ಪ್ರತಿ ತಿಂಗಳು ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ತಪ್ಪದೇ ಪರಿಶೀಲಿಸುವುದಾಗಿ ಹಾಗೂ 2-3 ತಿಂಗಳಿಗೊಮ್ಮೆ ಭೌತಿಕ ಸಭೆ ನಡೆಸುವುದಾಗಿ ತಿಳಿಸಿದ ಸಚಿವರು ಗ್ರಾಮ ಪಂಚಾಯತಿ, ನಾಡಕಚೇರಿ, ತಾಲ್ಲೂಕು ಪಂಚಾಯತಿ, ಉಪ ನೋಂದಣಾಧಿಕಾರಿ ಕಚೇರಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಸುರೇಶ್ ಗೌಡ, ಸುರೇಶ್ ಬಾಬು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ರಶ್ನಿ ವಿ.ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಓ ಜಿ.ಪ್ರಭು, ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.