ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರು ಶ್ರಮಿಸಲಿ

175

Get real time updates directly on you device, subscribe now.


ತುಮಕೂರು: ನಗರದ ಒಂದನೇ ವಾರ್ಡಿನ ಲಿಂಗಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಉದ್ಘಾಟಿಸಿದರು.
ಈ ವೇಳೆ ಶಾಸಕ ಜ್ಯೋತಿಗಣೇಶ್ ಮಾತನಾಡಿ, ವಿವೇಕಾ ಯೋಜನೆಯಡಿ ನೂತನ ಶಾಲಾ ಕೊಠಡಿ ನಿರ್ಮಿಸಲಾಗಿದೆ, ಈ ಶಾಲೆಯ ಹಳೆ ಕಟ್ಟಡ ಶಿಥಿಲವಾಗಿದ್ದು ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ, ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಬುನಾದಿ, ಶಿಕ್ಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕಾಳಜಿಯಿಂದ ಸಹಕರಿಸಬೇಕು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಮುಂದೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ನೆರವಾಗಬೇಕು ಎಂದು ಹೇಳಿದರು.

ಈ ಶಾಲೆ ಆವರಣ ರಸ್ತೆಯಿಂದ ತಗ್ಗಿನ ಮಟ್ಟದಲ್ಲಿದೆ, ಮಳೆಗಾಲದಲ್ಲಿ ಶಾಲೆ ಆವರಣದಲ್ಲಿ ನೀರು ಸಂಗ್ರಹವಾಗಿ ಶಾಲಾ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ, ರಸ್ತೆ ಸಮಕ್ಕೆ ಮಣ್ಣು ಸುರಿಸಿ ವ್ಯವಸ್ಥಿತ ಶಾಲಾ ಆವರಣ ನಿರ್ಮಿಸಿಕೊಡುವಂತೆ ಒಂದನೇ ವಾರ್ಡ್ನ ನಗರಪಾಲಿಕೆ ಸದಸ್ಯೆ ನಳಿನಾ ಇಂದ್ರಕುಮಾರ್ ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಶಿಕ್ಷಕರು ಶಾಸಕರಿಗೆ ಮನವಿ ಮಾಡಿದರು.

ಈ ಶಾಲೆ ಆವರಣದಲ್ಲಿ ಅಂಗನವಾಡಿಯೂ ಇರುವುದರಿಂದ ಈ ಮಕ್ಕಳಿಗೆ ಕುಡಿಯುವ ನೀರು ಹಾಗೂ ಬಿಸಿಯೂಟ ತಯಾರಿಕೆಗೆ ನೀರಿನ ಸೌಲಭ್ಯ ಒದಗಿಸಲು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಶಾಸಕರಿಗೆ ಕೋರಿದರು, ಜೊತೆಗೆ ಶಾಲೆಗೆ ಅಗತ್ಯವಿರುವ ಇತರೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ವಿನಂತಿ ಮಾಡಿದರು.

ನಂತರ ಶಾಸಕರು ಲಿಂಗಾಪುರದ ಶನೈಶ್ಚರ ಸ್ವಾಮಿ ದೇವಸ್ಥಾನದ ಸಿ.ಸಿ.ರಸ್ತೆ ಉದ್ಘಾಟನೆ ಹಾಗೂ ದೇವಸ್ಥಾನದ ನಾಮಫಲಕ ಅನಾವರಣ ಮಾಡಿದರು.
ನಗರ ಪಾಲಿಕೆ ಮಾಜಿ ಸದಸ್ಯ ಇಂದ್ರಕುಮಾರ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ನೂರುನ್ನೀಸಾ, ಮುಖಂಡರಾದ ಹೆಚ್.ಎಸ್.ನೀಲಕಂಠಪ್ಪ, ರಂಗಪ್ಪ, ರಮೇಶ್, ಸುರೇಶ್, ವಾಸುದೇವ್, ಗುತ್ತಿಗೆದಾರ ಪ್ರೀತಂ, ಶಾಲಾ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!