ಬಸ್ನಿಂದ ಬಿದ್ದು ವಿದ್ಯಾರ್ಥಿ ಸಾವು ಪ್ರಕರಣ ತನಿಖೆ

2,722

Get real time updates directly on you device, subscribe now.


ಕುಣಿಗಲ್: ಶಾಲಾ ಬಸ್ನಿಂದ ವಿದ್ಯಾರ್ಥಿ ಬಿದ್ದು ಮೃತಪಟ್ಟ ಘಟನೆಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ಸೆ.4ರ ಸೋಮವಾರ ಪಟ್ಟಣದ ಬಿಜಿಎಸ್ ಶಾಲಾ ಬಸ್ನಿಂದ ಬಿದ್ದು ವಿದ್ಯಾರ್ಥಿ ಮೃತಪಟ್ಟ ಪ್ರಕರಣ ಪತ್ರಿಕೆಯಲ್ಲಿ ವರದಿಯಾದ ಮೇರೆಗೆ ಶನಿವಾರ ಪಟ್ಟಣದ ಬಿಜಿಎಸ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಘಟನೆಗೆ ಸಂಬಂಧಪಟ್ಟಂತೆ ಆಯೋಗಕ್ಕೆ ಯಾರು ದೂರು ನೀಡದಿದ್ದರೂ ಪತ್ರಿಕೆ ವರದಿಗಳ ಆಧಾರದ ಮೇಲೆ ಆಯೋಗ ಸ್ವಪ್ರೇರಿತ ದೂರು ದಾಖಲಿಸಿ ತನಿಖೆಗೆ ಮುಂದಾಗಿದೆ ಎಂದ ಅವರು ಮುಖ್ಯ ಶಿಕ್ಷಕ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂಬಂಧ ದಾಖಲಾಗಿರುವ ದೂರಿನಲ್ಲಿ ಬಸ್ ಚಾಲಕನ ಮೇಲೆ ಮಾತ್ರ ಕ್ರಮ ತೆಗೆದುಕೊಳ್ಳಲಾಗಿದೆ, ಆಡಳಿತ ಮಂಡಳಿಯ ನಿರ್ಲಕ್ಷದ ಬಗ್ಗೆ ದೂರಿನಲ್ಲಿ ಉಲೇಖವಿದ್ದರೂ ಕ್ರಮ ತೆಗದುಕೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಸ್ ಗ್ರಾಮಾಂತರ ಪ್ರದೇಶಕ್ಕೆ ಮಕ್ಕಳನ್ನು ಕರೆದುಕೊಂಡು ಹೋದಾಗ ಬಸ್ನಲ್ಲಿ ಆಯಾ ನೇಮಕ ಮಾಡುವಲ್ಲಿ ಆಡಳಿತ ಮಂಡಳಿಯ ವೈಫಲ್ಯವೆ ಘಟನೆಗೆ ಕಾರಣವಾಗಿದೆ, ಇದರಿಂದ ಎಲ್ಲಾ ಶಾಲೆಗಳಿಗೆ ಪಾಠವಾಗಿದ್ದು ಎಲ್ಲಿಯೂ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು, ಶಾಲೆಗಳು ಮಕ್ಕಳ ರಕ್ಷಣಾ ಕೇಂದ್ರವಾಗಿ ಕೆಲಸ ಮಾಡಬೇಕಿದೆ, ಶಾಲಾ ವಾಹನಗಳ ದಾಖಲೆ ಪರಿಶೀಲಿಸಿ ಶಾಲೆಯಲ್ಲಿ ನಿಯಮಾನುಸಾರ ಸಮಿತಿಗಳ ರಚನೆಯಾಗಿರುವ ಬಗ್ಗೆ ಹಾಲಿ ಇರುವ ಸೂಕ್ತ ನಿಯಮಾವಳಿ ಪಾಲನೆ ಮಾಡುವ ಬಗ್ಗೆ ದಾಖಲೆ ಪರಿಶೀಲಿಸಿ ವರದಿ ನೀಡುವಂತೆ ಬಿಇಒ ಹಾಗೂ ಆರ್ಟಿಒಗೆ ಸೂಚನೆ ನೀಡಿದರು.

ಶಾಲೆಗೆ ಭೇಟಿ ನೀಡಿದ ನಂತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ಯಾವುದೆ ಶಾಲೆಯಲ್ಲೂ ಮಕ್ಕಳ ಸಹಾಯವಾಣಿ 1098 ಅಥವಾ ತುರ್ತು ಸಹಾಯವಾಣಿ 112 ಬಗ್ಗೆ ಮಾಹಿತಿ ಫಲಕ ಇಲ್ಲದಿರುವ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿ ಶಾಲೆಗಳೂ ಸೇರಿದಂತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿ ದೇಶದಲ್ಲಿ ಶೇ.42 ರಷ್ಟು ಮಕ್ಕಳಿದ್ದಾರೆ, ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟಿರುವ ಮಕ್ಕಳ ರಕ್ಷಣೆಗೆ ಹಲವು ಕಾನೂನು, ನಿಯಮ ರೂಪುಗೊಂಡಿವೆ, ಶಾಲೆಗಳಲ್ಲಿ ಮಕ್ಕಳ ಸುರಕ್ಷಾ ಸಮಿತಿ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮವಾಗುತ್ತಿಲ್ಲ, ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ನಡುವೆ ಮಕ್ಕಳ ಹಕ್ಕುಗಳ ರಕ್ಷಣೆ ಪಾಲನೆ ನಿಟ್ಟಿನಲ್ಲಿ ಅತ್ಯಂತ ನಿರ್ಲಕ್ಷ್ಯವಾಗುತ್ತಿರುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ ಬಗ್ಗೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಸಾರಿಗೆ ಇಲಾಖೆ ಅಧಿಕಾರಿ ಸದರುಲ್ಲಾಷರೀಫ್, ತಹಶೀಲ್ದಾರ್ ವಿಶ್ವನಾಥ್, ತಾಪಂ ಇಒ ಜೋಸೆಫ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನೂಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ, ಎಎಸೈ ಶ್ರೀನಿವಾಸ್ ಮೂರ್ತಿ, ಸಾರಿಗೆ ಸಂಸ್ಥೆಯ ಘಟಕದ ವ್ಯವಸ್ಥಾಪಕ ಮಂಜುನಾಥ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!