ಶಿರಾ: ತಾಲ್ಲೂಕಿನ ನಿರುದ್ಯೋಗ ಸಮಸ್ಯೆ ನೀಗಿಸುವುದು ನನ್ನ ಬಹುದೊಡ್ಡ ಕನಸು, ಈ ಕನಸನ್ನು ನನಸು ಮಾಡುವ ಉದ್ದೇಶದಿಂದ ನಗರದಲ್ಲಿ ಸೆ.11 ರಂದು ಹಮ್ಮಿಕೊಂಡಿರುವ ಬೃಹತ್ ಮಟ್ಟದ ಉದ್ಯೋಗ ಮೇಳದಲ್ಲಿ ನೂರಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಅರ್ಹರಿಗೆ 13 ಸಾವಿರ ಉದ್ಯೋಗ ದೊರೆಯಲಿವೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ತಿಳಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಟುಂಬದಲ್ಲಿ ಸಂಕಷ್ಟ ಅನುಭವಿಸಿದ ಬಿಎ, ಬಿಎಡ್ ವಿದ್ಯಾಭ್ಯಾಸ ಮಾಡಿದ ಮಹಿಳೆ ಒಬ್ಬಳು ನನ್ನ ಬಳಿ ಬಂದು ನಗರಸಭೆಯಲ್ಲಿ ಕಸ ಗುಡಿಸುವ ಕೆಲಸ ಕೊಡಿಸಿ ಎಂದು ಕೇಳಿದಾಗ ನನ್ನ ಮನಸ್ಸಿಗೆ ವ್ಯಥೆ ಉಂಟಾಯಿತು, ಇದಕ್ಕೆ ಪರಿಹಾರ ಏನೆಂದು ಹುಡುಕಿದಾಗ ನನಗೆ ಹೊಳೆದಿದ್ದೇ ಉದ್ಯೋಗ ಮೇಳ, ವರ್ಷಕ್ಕೆ 10,000 ಉದ್ಯೋಗದಂತೆ ಐದು ವರ್ಷಗಳಲ್ಲಿ ಒಟ್ಟು 50,000 ಉದ್ಯೋಗ ಸೃಷ್ಟಿ ಮಾಡುವುದು ನನ್ನ ಗುರಿ ಎಂದರು.
7000 ನೋಂದಣಿ: ಪ್ರಸ್ತುತ ನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಕಾಂಕ್ಷಿಗಳು ಉತ್ಸುಕರಾಗಿದ್ದು, 7000 ದಷ್ಟು ಅಭ್ಯರ್ಥಿಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ, ಉದ್ಯೋಗ ಮೇಳದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಂದರ್ಶನದ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಸಾವಿರಾರು ಅಭ್ಯರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ, ಅವರಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನಾರ್ಹ ಅಂಶ ಎಂದರು.
ಅರ್ಹತೆ: ಉದ್ಯೋಗ ಮೇಳದಲ್ಲಿ ಆಕಾಂಕ್ಷಿಗಳ ವಿದ್ಯಾರ್ಹತೆಗೆ ತಕ್ಕಂತೆ ಎಲ್ಲಾ ಬಗೆಯ ಕೆಲಸ ದೊರೆಯಲ್ಲಿದ್ದು, ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೋಮಾ, ಐಟಿಐ, ಪದವಿ, ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಸ್ನಾತಕೋತ್ತರ ಪದವಿ ಸೇರಿದಂತೆ ಎಲ್ಲಾ ಬಗೆಯ ಉದ್ಯೋಗ ಲಭ್ಯವಾಗಲಿವೆ, ಕಂಪನಿಯವರು ಕೆಲವರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡುತ್ತಾರೆ ಎಂದರು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬ್ಯಾಂಕುಗಳು, ಉತ್ಪಾದನಾ ಕ್ಷೇತ್ರ, ಆಟೋಮೊಬೈಲ್, ಟೆಕ್ಸ ಟೈಲ್, ಇ-ಕಾಮರ್ಸ್, ಶಿಕ್ಷಣ ಕ್ಷೇತ್ರ, ಭದ್ರತಾ ವಲಯ, ಎಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣೆ, ಮಾರ್ಕೆಟಿಂಗ್, ಅಕೌಂಟಿಂಗ್, ಮರ್ಚೆಂಟ್ ನೇವಿ, ಆಸ್ಪತ್ರೆ, ಕೃಷಿ, ಆರೋಗ್ಯ ಸೇರಿದಂತೆ ಹದಿನಾರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಉದ್ಯೋಗ ಲಭಿಸಲಿದೆ ಎಂದರು.
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು, ಶೈಕ್ಷಣಿಕ ದಾಖಲೆಗಳು, ಪಾಸ್ ಪೋರ್ಟ್ ಸೈಜಿನ ಫೋಟೊ, ಆರ್ಧಾ ಕಾರ್ಡ್, ಬಯೋಡಟ ತರಬೇಕಾಗುತ್ತದೆ ಎಂದು ವಿವರಿಸಿದರು.
ಆಪ್ತ ಕಾರ್ಯದರ್ಶಿ ಮಾರುತಿ ಪ್ರಸನ್ನ, ತಹಸೀಲ್ದಾರ್ ಮುರಳೀಧರ್, ಇಓ ಅನಂತರಾಜು, ವಿರುಸ್ ಟೆಕ್ನಾಲಜಿ ಮಾಲೀಕ ಕಿರಣ್ ಗೌಡ, ಸಿಡಿಪಿಓ ರಾಜನಾಯ್ಕ, ಕೆಎಸ್ಡಿಸಿ ಆಂಜನೇಯ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಕೆಂಪಯ್ಯ ಮೊದಲಾದವರು ಇದ್ದರು.
Comments are closed.