ಬರಗೂರು: ಸಣ್ಣ ಸಣ್ಣ ರೈತರಿಗೆ ಪಶು ಸಂಗೋಪನೆ ಸಹಕಾರಿಯಾಗಿದ್ದು, ಕಡಿಮೆ ನೀರಿನ ಪ್ರಮಾಣದಲ್ಲಿ ತಮ್ಮ ಜಮೀನಿನಲ್ಲಿ ಮೇವು ಬೆಳೆದು ಹಸು ಸಾಕಾಣಿಕೆ ಮಾಡಿ ಹಾಲು ಉತ್ಪಾದನೆ ಮಾಡುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು. ಮಳೆಯ ಅಭಾವ ಸಂಕಷ್ಟದಲ್ಲಿ ಬಡ ಕುಟುಂಬಗಳ ಜೀವನ ನಿರ್ವಹಣೆಗೆ ಹೈನುಗಾರಿಕೆ ವರದಾನ ವಾಗಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಗಜಮಾರನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಳ, ಬುದ್ಧಿ ಚುರುಕಿಗಾಗಿ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಿ ಶಾಲಾ ಮಕ್ಕಳಿಗೆ ಹಾಲು ನೀಡಿ ಇಂತಹ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಳ ಕಂಡಿರುವುದು ಸಾರ್ಥಕತೆ ಅನಿಸುತ್ತದೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಬೇಕೆಂಬ ದೃಢಸಂಕಲ್ಪ ಮಾಡಿ ಹಸು ಸಾಕಾಣಿಕೆ ಮಾಡಿ ಉತ್ತಮ ರೀತಿ ಹಾರೈಕೆ ಮಾಡಿದರೆ ಹೈನುಗಾರಿಕೆಯಲ್ಲಿ ಯಶಸ್ಸು ಕಾಣಲು ಸಾಧ್ಯ, ಗ್ರಾಮಗಳಲ್ಲಿ ಡೇರಿ ಸ್ಥಾಪನೆ ಮಾಡಿದರೆ ಸಾಲದು, ಪ್ರತಿ ಮನೆಯಲ್ಲಿ 2 ರಿಂದ 3 ಹಸು ಸಾಕಾಣಿಕೆ ಮಾಡಿ ಹಾಲು ಉತ್ಪಾದನೆ ಮಾಡಿದರೆ ಹಾಲಿನ ಸಂಗ್ರಹಣೆ ಹೆಚ್ಚಾಗಲಿದ್ದು ಸಂಘ ಕೂಡ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜೆಡಿಎಸ್ ಹಿರಿಯ ಮುಖಂಡ ಆರ್.ಉಗ್ರೆಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾರಾಯಣಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ಗೌಡ, ವಿಸ್ತರಣಾಧಿಕಾರಿ ದಿವಾಕರ್, ಸಮಾಲೋಚಕ ಪ್ರವೀಣ್, ಪುರುಷೋತ್ತಮ, ಮುಖಂಡ ಮುದ್ದು ಗಣೇಶ್ ಸೇರಿದಂತೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ, ಕಾರ್ಯದರ್ಶಿ, ನಿರ್ದೇಶಕರು, ಹಾಲು ಉತ್ಪಾದಕರು ಹಾಜರಿದ್ದರು.
Comments are closed.