ಹುಳಿಯಾರು: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಚಿಕ್ಕನಾಯಕನಹಳ್ಳಿ ತಾಲೂಕಿನ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಮತ್ತು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಸೀಮಾ, ಗಡಿ ನಿರ್ಣಯಿ ಅಧಿಸೂಚನೆ ಹೊರಡಿಸಿದೆ.
ಚಿಕ್ಕನಾಯಕನ ಹಳ್ಳಿ ತಾಲೂಕಿನಲ್ಲಿ ಈ ಹಿಂದೆ ಐದು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿದ್ದು ಈ ಬಾರಿಯೂ ಇದು ಯಥಾಸ್ಥಿತಿ ಮುಂದುವರಿದಿದೆ, ಆದರೆ ಹುಳಿಯಾರು ಪಟ್ಟಣ ಪಂಚಾಯ್ತಿಯಾದ ಸಲುವಾಗಿ ಇದನ್ನು ಕೈ ಬಿಟ್ಟು ಯಳನಾಡು ಎಂಬ ಹೊಸ ಕ್ಷೇತ್ರ ಮಾಡಲಾಗಿದೆ, ಉಳಿದಂತೆ ಶೆಟ್ಟಿಕೆರೆ, ಹಂದನಕೆರೆ, ಕಂದಿಕೆರೆ, ಹೊಯ್ಸಲಕಟ್ಟೆ ಕ್ಷೇತ್ರದ ಹೆಸರುಗಳೇ ಉಳಿದಿವೆ
.
ಈ ಹಿಂದೆ 19 ತಾಲೂಕು ಪಂಚಾಯ್ತಿ ಕ್ಷೇತ್ರಗಳಿದ್ದವು, ಈಗ 18 ಕ್ಷೇತ್ರಗಳಿಗೆ ಇಳಿದಿದೆ, ಹುಳಿಯಾರು ಕ್ಷೇತ್ರ ಒಂದು ಈ ಬಾರಿ ಇಲ್ಲದಾಗಿದ್ದು ಉಳಿದಂತೆ ದಸೂಡಿ, ಹೊಯ್ಸಲಕಟ್ಟೆ, ಗಾಣಧಾಳು, ಕೆಂಕೆರೆ, ಯಳನಾಡು, ದೊಡ್ಡಎಣ್ಣೇಗೆರೆ, ಹಂದನಕೆರೆ, ತಿಮ್ಲಾಪುರ, ಕಂದಿಕೆರೆ, ತಿಮ್ಮನಹಳ್ಳಿ, ತೀರ್ಥಪುರ, ಮಾಳಿಗೇಹಳ್ಳಿ, ಬರಗೂರು, ಮತಿಘಟ್ಟ, ಕುಪ್ಪುರು, ಹೊನ್ನೇಬಾಗಿ, ಜಯಚಾಮರಾಜಪುರ, ಶೆಟ್ಟಿಕೆರೆ, ತಾಲೂಕು ಪಂಚಾಯ್ತಿ ಕ್ಷೇತ್ರಗಳು ಹಾಗೆಯೇ ಉಳಿದುಕೊಂಡಿವೆ.
ಆಕ್ಷೇಪಣೆಗೆ ಅವಕಾಶ: ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಆಯೋಗದ ವೆಬ್ಸೈಟ್ನಲ್ಲಿ ಮತ್ತು ಖುದ್ದಾಗಿ, ಅಂಚೆಯ ಮೂಲಕ ಬೆಂಗಳೂರಿನ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಕಚೇರಿಯಲ್ಲಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ 15 ದಿನಗಳ ಒಳಗಾಗಿ ಅಂದರೆ ಇದೇ 19 ರ ಸಂಜೆ 5 ಗಂಟೆಯ ಒಳಗೆ ಸಲ್ಲಿಸಬಹುದು, ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ವೆಬ್ಸೈಟ್ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ಸಲ್ಲಿಸಬಹುದು, ಖುದ್ದಾಗಿ, ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3 ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ:204, ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀದಿ, ಬೆಂಗಳೂರು- 560001 ಇಲ್ಲಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
Comments are closed.