ಸಸಿ ಬೆಳೆಸಲು ಸರ್ಕಾರದಿಂದ ಸಹಾಯಧನ

ಚಿ.ನಾ.ಹಳ್ಳಿ ತಾಲ್ಲೂಕಲ್ಲಿ 79 ಸಾವಿರ ಸಸಿ ವಿತರಣೆಗೆ ಸಿದ್ಧತೆ

577

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸ್ವಲ್ಪ ಮಟ್ಟಿನ ಅರಿವು ಮೂಡುತ್ತಿದ್ದು ಗಿಡ, ಮರಗಳ ಸಂರಕ್ಷಣೆ ಬಗ್ಗೆ ಜನರು ಆಸಕ್ತಿ ತೋರುತ್ತಿದ್ದಾರೆ, ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ವಲಯ ಅರಣ್ಯ ಇಲಾಖೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿ ವಿತರಣೆಗೆ ಮುಂದಾಗಿದೆ.

ವರ್ಷ ಉರುಳಿದಂತೆ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಕಾಮಗಾರಿಗಳಿಗೆ ಸಾವಿರಾರು ಮರಗಳು ಧರೆಗುರುಳಿದ್ದು, ಮರ, ಗಿಡಗಳ ಪ್ರಾಮುಖ್ಯತೆ ಬಗ್ಗೆ ಜನರಿಗೆ ಅರಿವಾಗುತ್ತಿದೆ, ಈ ನಿಟ್ಟಿನಲ್ಲಿ ಸೋಷಿಯಲ್ ಫಾರೆಸ್ಟ್ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಅತ್ಯಂತ ಕಡಿಮೆ ಬೆಲೆ ಹಾಗೂ ಗಿಡಗಳನ್ನು ಬೆಳೆಸಲು ವರ್ಷಕ್ಕೆ ಇಂತಿಷ್ಟು ಸಹಾಯ ಧನ ನೀಡುತ್ತಿದ್ದು ಈ ಬಾರಿ ತಾಲೂಕಿನಲ್ಲಿ 79 ಸಾವಿರ ಸಸಿಗಳನ್ನು ರೈತರು ಸೇರಿದಂತೆ ಆಸಕ್ತರಿಗೆ ವಿತರಣೆ ಮಾಡಲಿದೆ.
ಕಾಡು ಸಸಿಗಳ ಕೃಷಿಗೆ ಆಸಕ್ತಿ: ರೈತರು ತಮ್ಮ ಖಾಲಿ ಜಮೀನಿನಲ್ಲಿ ಕಾಡು ಸಸಿಗಳು ಎಂದು ಕರೆಯುವ ಹೆಬ್ಬೆವು, ಶ್ರೀಗಂಧ, ತೇಗ, ಬೀಟೆ, ಹೊಂಗೆ, ಬೇವು ಮರಗಳನ್ನು ಬೆಳೆಸಲು ಆಸಕ್ತಿ ತೋರುತ್ತಿದ್ದಾರೆ, ಇದಕ್ಕೆ ಅರಣ್ಯ ಇಲಾಖೆ ಸಹಕಾರ ನೀಡುತ್ತಿದ್ದು, 10 ವರ್ಷ ಈ ಸಸಿಗಳನ್ನು ಬೆಳೆಸಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದಾಗಿದೆ, ಹೆಬ್ಬೆವು ಗಿಡಗಳನ್ನು ಅತಿ ಹೆಚ್ಚಾಗಿ ರೈತರು ತಾಲೂಕಿನಲ್ಲಿ ಬೆಳೆಸುತ್ತಿದ್ದಾರೆ.

ಇಲಾಖೆಯಿಂದ 79ಗಿಡ ವಿತರಣೆ: ಚಿಕ್ಕನಾಯಕನ ಹಳ್ಳಿ ತಾಲೂಕಿನ ಸಾಮಾಜಿಕ ಆರಣ್ಯ ಇಲಾಖೆಯಿಂದ ಈ ವರ್ಷ 40000 ವಿವಿಧ ಜಾತಿಯ ಸಸಿಗಳನ್ನು 3 ರಿಂದ 6 ರೂ. ಗಳಿಗೆ ವಿತರಣೆ ಮಾಡಲಾಗುತ್ತಿದೆ, ರಸ್ತೆ ಬದಿಯಲ್ಲಿ ನೆಡುತೋಪು, ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ಸಾಮಾಜಿಕ ಆರಣ್ಯ ಇಲಾಖೆಯಿಂದ ನೆಡಲಾಗುತ್ತದೆ.

ಸಹಾಯ ಧನ: ಸಾಮಾಜಿಕ ಅರಣ್ಯ ಇಲಾಖೆ ಅತ್ಯಂತ ಕಡಿಮೆ ದರದಲ್ಲಿ ಗಿಡಗಳನ್ನು ನೀಡುವ ಜೊತೆಗೆ, ಎನ್ಆರ್ಐಜಿ ಯೋಜನೆಯಿಂದ ಸಸಿಗಳನ್ನು ನೆಡಲು, ಗುಂಡಿ ತೆಗೆಯಲು ಸಹಾಯ ಧನ ಸರ್ಕಾರ ನೀಡುತ್ತಿದೆ, ಒಂದು ಸಸಿ ಬೆಳೆಸಲು ಪ್ರತಿ ವರ್ಷ ಸರ್ಕಾರ 60 ರೂ. ನೀಡುತ್ತಿದ್ದು, ಮೂರು ವರ್ಷಗಳ ಕಾಲ ಸಸಿಗಳ ಪೋಷಣೆಗೆ ಸಹಾಯ ಧನ ನೀಡುವ ಯೋಜನೆ ಮಾಡಿಕೊಂಡಿದೆ.

ಆಮ್ಲಜನಕವನ್ನು ದುಡ್ಡು ಕೊಟ್ಟು ಖರೀದಿ ಮಾಡುವ ಕಾಲ ಈಗಾಗಲೇ ಆರಂಭವಾಗಿದ್ದು, ಉಚಿತವಾಗಿ ಸಿಗುವ ಸಂಪನ್ಮೂಲವನ್ನು ಮನುಷ್ಯನ ಅತಿ ಬುದ್ಧಿವಂತಿಕೆಗೆ ಹಣ ನೀಡಿ ಪಡೆಯುವ ಸನ್ನಿವೇಶ ನಿರ್ಮಾಣವಾಗಿದೆ, ಅರಳಿ ಮರ ಅತಿ ಹೆಚ್ಚು ಆಮ್ಮಜನಕ ನೀಡುವುದು ಸಂಶೋಧನೆಯಿಂದ ಸಾಬೀತಾಗಿದೆ, ಅಭಿವೃದ್ಧಿ ಹೆಸರಲ್ಲಿ ಮರ ಕಡಿಯುವ ಜೊತೆಗೆ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಿದೆ, ಜನರು ಸರ್ಕಾರ ನೀಡುವ ಸವಲತ್ತು ಬಳಸಿಕೊಂಡು ಗಿಡ ಬೆಳೆಸಲಿ, ಈ ಬಾರಿ ಇಲಾಖೆಯಿಂದ 79 ಸಾವಿರ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದ್ದು ಆರ್ಎಸ್ಪಿಡಿ ಯೋಜನೆಯಿಂದ 40 ಸಾವಿರ ಸಸಿಗಳನ್ನು ಆಸಕ್ತ ರೈತರು ಹಾಗೂ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ವಲಯ ಅರಣ್ಯ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ವಲಯ ಅರಣ್ಯಾಧಿಕಾರಿ ಜಿ.ಆರ್ ಜಯರಾಮ್ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!