ತಿಪಟೂರು: ಕಠಿಣವಾದ ಶ್ರದ್ಧೆ, ಶ್ರಮದಿಂದ ಕಾಯಕ ಮಾಡಿದಾಗ ಭಗವಂತನನ್ನು ಕಾಣುವುದು ಸತ್ಯವಾಗಲಿದೆ, ಜಗತ್ತು ಬದಲಾವಣೆಯ ನಿಯಮವಾಗಿದೆ, ಜಗತ್ತು ಬದಲಾಗುತ್ತಿದ್ದಾಗ ವಿಕಾಸನದ ಕಡೆಗೆ, ಪರಿವರ್ತನೆ ಕಡೆಗೆ, ಹೊಸ ಬೆಳಕಿನ ಕಡೆಗೆ ಪ್ರಕಾಶಿಸುವುದು ಸಾಧ್ಯ ಎಂದು ಕುಪ್ಪೂರು- ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಆಲದಹಳ್ಳಿ ಗೇಟ್ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ರಂಗಾಪುರ ವಲಯ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯನು ತನ್ನ ಜೀವನವನ್ನು ಸುಂದರಮಯ ಗೊಳಿಸಿಕೊಳ್ಳಲು ದೇವತಾ ಕಾರ್ಯ ಮಾಡಬೇಕು, ಧರ್ಮ ಮತ್ತು ಧಾರ್ಮಿಕತೆಯಲ್ಲಿ ನಂಬಿಕೆ ಉಳ್ಳನಾಗಿದ್ದು ಪರರಿಗೆ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿಯಿಂದ ಹಲವಾರು ಯೋಜನೆ ನಡೆಸುತ್ತಿದ್ದು, ಅದರಿಂದ ಎಲ್ಲರ ಬದಲಾವಣೆ ಸಾಧ್ಯ, ಉತ್ತಮ ಸಂಸ್ಕಾರ ಸಂಸ್ಕೃತಿ ಪಡೆದುಕೊಂಡು ಆರ್ಥಿಕವಾಗಿ, ಸಮಾಜಿಕವಾಗಿ, ಧಾರ್ಮಿಕವಾಗಿ ಶಕ್ತರಾಗಿ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕಿ ದಯಾಶೀಲಾ ಮಾತನಾಡಿ, ಪುರುಷರ ಸಹಕಾರದಿಂದ ಹೆಣ್ಣು ಮಕ್ಕಳ ಸಹಯೋಗದಲ್ಲಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದ್ದು, ದುಷ್ಟ ಶಕ್ತಿಗಳ ನಿವಾರಣೆಗಾಗಿ, ಕುಟುಂಬಗಳ ನೆಮ್ಮದಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
42 ವರ್ಷಗಳ ಹಿಂದೆ ಆರಂಭವಾದ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯ ವ್ಯಾಪಿ ಪಸರಿಸಿ ಈ ಯೋಜನೆಯು ಸ್ಥಳೀಯ ಮಠಮಾನ್ಯರ, ಗಣ್ಯರ ಜನಪ್ರತಿನಿಧಿಗಳ ಸಹಯೋಗದಲ್ಲಿ ಮುಂದುವರಿಯುತ್ತಿದೆ, ಶ್ರೀಕ್ಷೇತ್ರದಲ್ಲಿ ಜನರು ನೀಡುವ ಕಾಣಿಕೆಯನ್ನು ಪೂಜ್ಯರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ 10 ಹಲವಾರು ಕಾರ್ಯಕ್ರಮ ಆಯೋಜನೆ ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳು, ಕೃಷಿಗೆ ಪೂರಕವಾದ ಕೆಲಸ, ಮದ್ಯದಿಂದ ಮನಃಪರಿವರ್ತನೆ ಆಗುವಂತ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವಾತ್ಸಲ್ಯ ಯೋಜನೆ ಹೀಗೆ ಹಲವಾರು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ರೂಪಶ್ರೀ ವಿಶ್ವನಾಥ್ ವರಮಹಾಲಕ್ಷ್ಮಿ ಹಬ್ಬದ ಪೂಜಾ ವಿಧಿ ವಿಧಾನಗಳ ಬಗ್ಗೆ, ಆಚರಣೆಯ ಬಗ್ಗೆ ಸಮಗ್ರವಾಗಿ ತಿಳಿಸಿದರು. ತಾಲೂಕು ಯೋಜನಾಧಿಕಾರಿ ಉದಯ್.ಕೆ. ಮಾತನಾಡಿ, ತಾಲೂಕಿನಲ್ಲಿ ವಲಯಕ್ಕೆ ಒಂದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸುತ್ತಾ ಪೂಜ್ಯರ ಆದೇಶದಂತೆ ಕೆಲಸ ನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ 3816 ಗುಂಪುಗಳಿದ್ದು 30,017 ಪಾಲುದಾರ ಬಂಧುಗಳಿದ್ದಾರೆ, ನಿಮ್ಮಗಳ ಸಹಕಾರದಿಂದ ಇನ್ನು ಮುಂದೆ ಹೆಚ್ಚು ಹೆಚ್ಚು ಕಾರ್ಯಕ್ರಮ ನೆರವೇರಿಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲದಳ್ಳಿಯ ನವೀನ್.ಎ.ಪಿ. ವಹಿಸಿದ್ದರು, ಜನ ಮಂಗಳ ಕಾರ್ಯಕ್ರಮದಲ್ಲಿ ವೀಲ್ಚೇರ್, ಮಾಸಾಶನ ಮಂಜೂರಾತಿ ಪತ್ರ, ವಿಶೇಷವಾಗಿ ವಾತ್ಸಲ್ಯ ಮನೆ ಯೋಜನೆಯಡಿಯಲ್ಲಿ ಗುರುತಿಸಿವಿಕೆ ಕಾರ್ಯಕ್ರಮ, ಸಪ್ತಗಿರಿ ಜ್ಞಾನವಿಕಾಸ ಕೇಂದ್ರದ ದಾಖಲಾತಿ ನೀಡಲಾಯಿತು, ಸ್ವಸಹಾಯ ಸಂಘಗಳಿಗೆ ವಿವಿಧ ಸಲಕರಣೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಗೋಪಾಲ್, ರಂಗಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಶಂಕರ್ಬೆಳ್ಳೂರು, ಪಂಚಾತಿತಿ ಅಧ್ಯಕ್ಷೆ ಮಮತಾ, ಸದಸ್ಯರಾದ ಕುಮಾರಸ್ವಾಮಿ, ಸರ್ವಮಂಗಳ, ಶೇಖರ್, ರೂಪ ಹರೀಶ್, ಗ್ರಾಮದ ಮುಖಂಡ ಸಿದ್ದರಾಮೇಗೌಡ ಇತರರು ಇದ್ದರು.
Comments are closed.