ಎಸ್ಸಿಪಿ- ಟಿಎಸ್ಪಿ ಹಣ ದುರ್ಬಳಕೆಗೆ ಖಂಡನೆ

131

Get real time updates directly on you device, subscribe now.


ತುಮಕೂರು: ಎಸ್ಸಿಪಿ- ಟಿಎಸ್ಪಿ ಹಣ ದುರ್ಬಳಕೆ, 7 ಡಿ ಯನ್ನು ರದ್ದುಪಡಿಸಿ ಹಾಗೂ ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ನೀಡದಿರುವ ಸರ್ಕಾರದ ಕ್ರಮ ಖಂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ತುಮಕೂರು ನಗರದಿಂದ ಪ್ರೊ.ಬಿ.ಕೃಷ್ಣಪ್ಪ ಬಣದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ತೆರಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಪ್ರತಿಭಟನೆಗೆ ಹೊರಡುವ ಮುನ್ನ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತುಮಕೂರು ಜಿಲ್ಲೆ ವತಿಯಿಂದ ದಲಿತ ಸಂಘಟನೆಗಳ ಪದಾಧಿಕಾರಿಗಳು ತೆರಳುತ್ತಿದ್ದೇವೆ, ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ವಿರುದ್ಧ ಕಹಳೆ ಮೊಳಗಿಸಲಾಗುವುದು ಎಂದರು.

ಪರಿಶಿಷ್ಟರಿಗೆ ಮೀಸಲಿಟ್ಟ ಹಣಕ್ಕಾಗಿ ಕಾಂಗ್ರೆಸ್ ಸರ್ಕಾರ ದಲಿತರ ಪರ ಎಂದು ಬಿಂಬಿಸಿಕೊಳ್ಳಲು ಹಾತೊರೆಯುವ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ನಿಜಕ್ಕೂ ತಮ್ಮ ನಿಜರೂಪ ತೋರಿಸ ತೊಡಗಿದ್ದಾರೆ, ಆಡಳಿತಕ್ಕೆ ಬರುವಂತಹ ಎಲ್ಲಾ ಸರ್ಕಾರಗಳು ದಲಿತರನ್ನು ನಂಬಿಸಿ ವಂಚನೆ ಮಾಡುತ್ತಿವೆ, ಇದಕ್ಕೆ ಕಾಂಗ್ರೆಸ್ ಪಕ್ಷ ಸಹ ಹೊರತಾಗಿಲ್ಲ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನವಾದ ಎಸ್ಸಿ- ಎಸ್ಟಿ ಮತ್ತು ಟಿಎಸ್ಪಿಗೆ ಸೇರಿದ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ಸರ್ಕಾರ ಹೊರಟಿದೆ, ಇದು ಅಕ್ಷಮ್ಯ, 11 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ಪರಿಶಿಷ್ಟರಿಗೆ 5 ಯೋಜನೆ ನೀಡುವುದಾಗಿ ಹೇಳಿ ಟೋಪಿ ಹಾಕುವ ಕೆಲಸ ಸಹಿಸುವುದಿಲ್ಲ ಎಂದರು.

ನಾವ್ಯಾರೂ ಇವರಿಗೆ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ಎಂದು ಹೇಳಿರಲಿಲ್ಲ, ಕೇಳಿರಲಿಲ್ಲ, ಕಾಂಗ್ರೆಸ್ ಪಕ್ಷದವರು ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆ ಕೊಡುತ್ತವೆ ಎಂದು ಹೇಳಿದ್ದರೇ ಹೊರತು ಈ ಯೋಜನೆಗಳಿಗೆ ಪರಿಶಿಷ್ಟರ ವಿಶೇಷ ಯೋಜನೆ ಹಣ ಬಳಸುತ್ತೇವೆ ಎಂದು ಹೇಳಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ವರ್ಷಕ್ಕೆ 100 ಕೋಟಿ ರೂ. ಅನುದಾನ ಮೀಸಲಿಡಬೇಕು, ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 150 ಕೋಟಿ ರೂ. ಮೀಸಲಿಡಬೇಕು, ಸಫಾಯಿ ಕರ್ಮಚಾರಿ ಆಯೋಗ ಮತ್ತು ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಪ್ರೊ.ಬಿ.ಕೃಷ್ಣಪ್ಪನವರ ಹೆಸರಿನಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಬಣದ ದಸಂಸ ಮುಖಂಡರಾದ ಹನುಮಂತರಾಯಪ್ಪ ಕೈದಾಳ, ವೆಂಕಟೇಶ್, ಗಂಗಾಂಜಿನಪ್ಪ, ಪಿ.ಎನ್.ರಾಮಯ್ಯ, ಶೇಖರ್, ಹನುಮಂತರಾಯ.ಹೆಚ್.ಸಿ, ಲಕ್ಷ್ಮಮ್ಮ, ರತ್ನಮ್ಮ, ಮಂಜುಳಾ, ಶಿವರಾಮ, ಎಸ್.ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!