ತುಮಕೂರು: ಮಂಗಳ ದ್ರವ್ಯ, ಪೂಜಾ ಸಾಮಗ್ರಿ, ಮದುವೆ, ಉಪನಯನ ಮತ್ತಿತರ ಶುಭ ಕಾರ್ಯಗಳಿಗೆ ಅಲಂಕಾರಿಕ ಗೃಹೋಪಯೋಗಿ ವಸ್ತುಗಳು, ಪರಿಸರ ಪೂರಕವಾದ ಗೌರಿ ಮತ್ತು ಗಣೇಶ ಮೂರ್ತಿಗಳು, ರೇಷ್ಮೆ ಹಾಗೂ ಇತರೆ ಸೀರೆಗಳು, ವಿವಿಧ ರೀತಿಯ ಬ್ಯಾಗ್ಗಳು, ವೈವಿಧ್ಯಮಯ ಹಾಗೂ ರುಚಿಯಾದ ಮನೆಯಲ್ಲೇ ತಯಾರಿಸಿದ ಬಗೆ ಬಗೆಯ ಉಪ್ಪಿನಕಾಯಿ, ಸಾಂಬಾರ್ ಪುಡಿ, ಚಟ್ನಿಪುಡಿ, ಹಪ್ಪಳ- ಸಂಡಿಗೆ ಸೇರಿದಂತೆ ವಿಶೇಷ ತಿನಿಸುಗಳು, ತೆಂಗಿನಿಂದ ತಯಾರಿಸಿದ ಖಾದ್ಯಗಳು ಹೀಗೆ ಒಂದೇ ಸೂರಿನಡಿ 28 ಕ್ಕೂ ಹೆಚ್ಚಿನ ತರಹೇವಾರಿ ಗೃಹ ಉತ್ಪನ್ನಗಳ ಖರೀದಿಗೆ ನಗರದ ಶಂಕರ ಮಠದ ಸಭಾಂಗಣಕ್ಕೆ ಜನಸಾಗರವೇ ಹರಿದು ಬಂತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತುಮಕೂರು ಜಿಲ್ಲಾ ಮಹಿಳಾ ವಿಭಾಗ, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಮತ್ತು ಶ್ರೀ ಶಂಕರ ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗೌರಿ- ಗಣೇಶ ಹಬ್ಬದ ಅಂಗವಾಗಿ ಬುಧವಾರ ಆಯೋಜಿಸಲಾಗಿದ್ದ ವಿಪ್ರ ಮಹಿಳಾ ಸಂತೆಯಲ್ಲಿ ಕಂಡುಬಂದ ದೃಶ್ಯವಿದು.
ವಿಪ್ರ ಮಹಿಳಾ ಸಂತೆಯನ್ನು ಉದ್ಯಮಿ ಶೈಲಜಾ ವಿಠ್ಠಲ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಈ ರೀತಿಯ ಕಾರ್ಯಕ್ರಮ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ, ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಿ ಅನೇಕರ ಜೀವನಕ್ಕೆ ದಾರಿ ದೀಪವಾಗಿದ್ದಾರೆ, ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯೆ ಛಾಯಾ ರಾಮಶೇಷ್ ಮಾತನಾಡಿ, ಗೃಹೋದ್ಯೋಗ ಮಾಡುತ್ತಿರುವ ಜಿಲ್ಲೆಯ ವಿಪ್ರ ಮಹಿಳೆಯರನ್ನು ಸಂಘಟಿಸುವ ಹಾಗೂ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿರುವ ವಿಪ್ರ ಮಹಿಳಾ ಸಂತೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ವಿಪ್ರ ಮಹಿಳಾ ಘಟಕದ ಅಧ್ಯಕ್ಷೆ ಸುಭಾಷಿಣಿ ರವೀಶ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಶಂಕರ ಸೇವಾ ಸಮಿತಿ ಅಧ್ಯಕ್ಷ ಕೆ.ಜಿ.ನಂಜುಂಡೇಶ್ವರ್ ಮಾತನಾಡಿ ವಿಪ್ರ ಸಮುದಾಯದ ಈ ರೀತಿಯ ಸಮಾಜಮುಖಿ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಹೆಬ್ಬಳಲು ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಶ್ರೀದೇವಿ ಅನಂತರಾಮು, ಜಿಲ್ಲಾ ಬ್ರಾಹ್ಮಣ ಸಭಾ ನಿರ್ದೇಶಕ ಸಿ.ಫಣೀಶ್, ನಿವೃತ್ತ ಇಂಜಿನಿಯರ್ ಟಿ.ಎಸ್.ರಾಮಶೇಷ, ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಕುಮಾರ್, ಡಯಟ್ ಪ್ರಾಚಾರ್ಯ ಅನಂತರಾಮು ಇನ್ನಿತರರು ಹಾಜರಿದ್ದರು.
Comments are closed.