ಪಾವಗಡ: ಅಧಿಕಾರಕ್ಕಾಗಿ ಕುತಂತ್ರ ಮತ್ತು ಭಿಕ್ಷೆ ಬೇಡುವ ಪರಿಸ್ಥಿಗೆ ಜೆಡಿಎಸ್ ವರಿಷ್ಠರು ಬಂದಿಲ್ಲ, ಕಾಂಗ್ರೆಸ್ ಪಕ್ಷದ ಹೆಸರೇಳಿಕೊಂಡೆ ಮೈತ್ರಿ ಸರ್ಕಾರದಲ್ಲಿ ಭಿಕ್ಷಾಟನೆ ಮಾಡಿದ್ದು ಯಾರೆಂದು ಇಡೀ ಕ್ಷೇತ್ರ ಮತ್ತು ರಾಜ್ಯದ ಜನತೆಗೆ ಗೊತ್ತಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಈರಣ್ಣ ಟಾಂಗ್ ನೀಡಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರ ನಿರ್ಮೂಲನೆಗಾಗಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿದೆ, ಇದನ್ನು ಸಹಿಸದ ಪಾವಗಡದ ಮಾಜಿ ಸಚಿವರು ಚುನಾವಣೆಯಲ್ಲಿ 4 ಸ್ಥಾನಗಳ ಭಿಕ್ಷೆ ಬೇಡಲು ದೇವೇಗೌಡರು ದೆಹಲಿಗೆ ತೆರಳಿದ್ದಾರೆ ಎಂದು ಲೇವಡಿ ಮಾಡಿದ್ದಾರೆ, ಆದರೆ ಕ್ಷೇತ್ರದ ರಾಜಕಾರಣದಲ್ಲಿ ಇವರಿಗಿಂತ ಭಿಕ್ಷೆ ಬೇಡಿದವರು ಮತ್ತೊಬ್ಬರಿಲ್ಲಾ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಸರ್ಕಾರ ರಚನೆಗೆ ಕೇವಲ 113 ಸ್ಥಾನಗಳಿದ್ದರೆ ಸಾಕು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದ ಮಾಜಿ ಸಚಿವರು ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಹಿಂದೆ ಹೋಗಿ ಸಚಿವರಾದರು, ನಂತರದ ಮೈತ್ರಿಯಲ್ಲಿ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಕೃಪೆಯಿಂದ ಎರಡನೇ ಬಾರಿಗೆ ಸಚಿವರಾದ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಬೇಕು ಎಂದು ಎಚ್ಚರಿಸಿದರು.
ಜೆಡಿಎಸ್ ಜಿಲ್ಲಾದ್ಯಕ್ಷ ಅಂಜಿನಪ್ಪ ಮಾತನಾಡಿ, ಭಿಕ್ಷೆ ಬೇಡಿಕೊಂಡು ಬದುಕಿದವರಿಗಷ್ಟೇ ಭಿಕ್ಷೆ ಬಗ್ಗೆ ಗೊತ್ತಿರುತ್ತದೆ, ಈಗಾಗಲೇ ಬೇಡಿರುವ ಭಿಕ್ಷೆ ಸಾಕಾಗಿಲ್ಲವಾದ್ದರಿಂದ ಹಿರಿಯ ಮಗನನ್ನೂ ಸಂಸದನನ್ನಾಗಿ ಮಾಡಲು ಭಿಕ್ಷೆ ಬೇಡುತ್ತಿರುವುದು ಜನತೆಗೆ ಗೊತ್ತಿದೆ ಎಂದರು.
ರಾಷ್ಟ್ರ ಹಾಗೂ ರಾಜ್ಯರಾಜಕಾರಣದಲ್ಲಿ ಮನ್ನಣೆಯುಳ್ಳ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲದ ನೀವು, ನಿಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಯಾರ ಯಾರ ಬಳಿ ಏನೇನು ಬೇಡುತ್ತಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳಿಗೆ ಉದ್ಘಾಟನೆ ನೆರವೇರಿಸುವ ನೀವು ತಾಲೂಕಿನ ಜನರಿಗಾಗಿ ಮಾಡಿರು ಶಾಶ್ವತ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿ ಈ ಕ್ಷೇತ್ರದ ಜನತೆಗೆ ನಿಮ್ಮ ಕೊಡುಗೆ ಏನು ಎಂಬುದುಎಲ್ಲರಿಗೂ ಗೊತ್ತಿದೆ, ನಿಮ್ಮ ದಾಹ ತೀರಿಸಿಕೊಳ್ಳಲು ಜೆಡಿಎಸ್, ಬಿಜೆಪಿಗಳ ಬಳಿ ಭಿಕ್ಷೆ ಬೇಡಿದ್ದೀರಿ ಎಂಬುದನ್ನು ಮರೆಯಬೇಡಿ ಎಂದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ, ಗ್ಯಾರಂಟಿ ಯೋಜನೆ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಇಲ್ಲ, ಜೆಡಿಎಸ್ ಅವಧಿಯಲ್ಲಿನ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ, ಆದರೆ ನೀವು ಸಿದ್ದರಾ ಎಂದು ಎದುರು ಪ್ರಶ್ನೆ ಹಾಕಿದರು.
ಯುವ ಮುಖಂಡ ಗಂಗಾಧರ ನಾಯ್ಡು ಮಾತನಾಡಿ, ಮಾಜಿ ಸಚಿವ ವೆಂಕಟರಮಣಪ್ಪ ಅವರ ಅಭಿವೃದ್ಧಿ ಕೇಳಿದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಇರುತ್ತೆ, ಇವರ ಸ್ವಾರ್ಥಕ್ಕಾಗಿ ಎಷ್ಟು ಜನರ ರಾಜಕೀಯ ಜೀವನ ಹಾಳು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಯುವ ಮುಖಂಡ ನಲ್ಲಾನಿ ಸುರೇಂದ್ರ, ಗೌರವಾಧ್ಯಕ್ಷ ರಾಜಶೇಖರಪ್ಪ, ರಾಜ್ಯಉಪಾಧ್ಯಕ್ಷ ತಿಮ್ಮಾರೆಡ್ಡಿ, ಗೋವಿಂದಬಾಬು, ಕಾವಲಗೇರಿ ರಾಮಾಂಜಿನಪ್ಪ, ನಲ್ಲಪ್ಪ, ನಾಗರಾಜು, ಅಂಜಪ್ಪ, ತಿರುಮಣಿ ನಾಗೇಂದ್ರ, ಅಂಜನ್ ಇತರರು ಇದ್ದರು.
Comments are closed.