ಕುಣಿಗಲ್: ಕಸ ಸಾಗಿಸುವ ವಾಹನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್ಗಳನ್ನು ಸಾಗಿಸುತ್ತಿರುವ ಬಗ್ಗೆ ಆಕ್ಷೇಪಿಸಿದ ದಲಿತಪರ ಸಂಘಟನೆ ಮುಖಂಡರು, ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕುಣಿಗಲ್ ಪುರಸಭೆ ಕಾರ್ಯಾಲಯದ ವತಿಯಿಂದ ಸರ್ಕಾರದ ಸೂಚನೆ ಮೇರೆಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಪೂರ್ವಭಾವಿಯಾಗಿ ಪಟ್ಟಣದಲ್ಲಿ ಪುರಸಭೆ ವತಿಯಿಂದ ಫ್ಲೆಕ್ಸ್ ಅಳವಡಿಸುವ ಕಾರ್ಯ ನಡೆದಿತ್ತು, ಫ್ಲೆಕ್ಸ್ ಗಳನ್ನು ಕಸ ಸಾಗಿಸುವ ವಾಹನಗಳಲ್ಲಿ ತುಂಬಿಕೊಂಡು ಸಿಬ್ಬಂದಿ ಕಟ್ಟುತ್ತಿದ್ದನ್ನು ಗಮನಿಸಿದ ದಸಂಸ ತಾಲೂಕು ಅಧ್ಯಕ್ಷ ರಾಜೇಶ್, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಇತರರು ಪುರಸಭೆ ಕಾರ್ಯ ವೈಖರಿಯನ್ನು ತೀವ್ರವಾಗಿ ಖಂಡಿಸಿದರಲ್ಲದೆ ಪುರಸಭೆ ಅಧಿಕಾರಿಗಳು ಕಸ ಸಾಗಿಸುವ ವಾಹನದಲ್ಲಿ ಸಂವಿಧಾನ ಶಿಲ್ಪಿ ಇರುವ ಭಾವಚಿತ್ರ ತುಂಬಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಈ ಬಗ್ಗೆ ಪುರಸಭೆ ಸದಸ್ಯರಾದ ಮಲ್ಲಿಪಾಳ್ಯ ಶ್ರೀನಿವಾಸ್ ಆನಂದ್ ಕುಮಾರ್ ಇತರರು ಅಸಮಾಧಾನ ವ್ಯಕ್ತಪಡಿಸಿ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, ವಿಷಯ ತಿಳಿದ ದಲಿತಪರ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ ಕೊಠಡಿ ಮುಂದೆ ಪ್ರತಿಭಟನೆ ನಡೆಸಿದರು.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪರಿಸರ ಅಭಿಯಂತರ ಕೆಳಹಂತದ ಸಿಬ್ಬಂದಿಯಿಂದ ಲೋಪವಾಗಿದೆ, ಮುಂದೆ ಹೀಗಾಗದಂತೆ ಕ್ರಮ ವಹಿಸುವ ಭರವಸೆ ನೀಡಿದರು, ಅಧಿಕಾರಿಯ ಬೆಜವಾಬ್ದಾರಿ ವರ್ತನೆ ಖಂಡಿಸಿದ ಪ್ರತಿಭಟನಾಕಾರರು, ಅಧಿಕಾರಿ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಪತ್ರ ಬರೆಯಲು ನಿರ್ಧರಿಸಿ, ಪ್ರತಿಭಟನೆ ಹಿಂಪಡೆದರು.
Comments are closed.